ADVERTISEMENT

‘ರಾಹುಲ್‌ ಅಧಿಕಾರಕ್ಕೆ ಬರಲು ಸಕಾಲ’

ದಿಗ್ವಿಜಯ್‌ ಅವರದು ವೈಯಕ್ತಿಕ ಅಭಿಪ್ರಾಯ: ಕಾಂಗ್ರೆಸ್‌ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 19:30 IST
Last Updated 1 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ರಾಹುಲ್‌ ಗಾಂಧಿ ಅವರು ತಮ್ಮ ತಾಯಿಯಿಂದ ಪಕ್ಷದ ಅಧಿಕಾರವನ್ನು ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಆದರೆ, ಈ ಹೇಳಿಕೆ ದಿಗ್ವಿಜಯ್‌ ಸಿಂಗ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

‘ಪಕ್ಷವನ್ನು ಯುವಕರೇ ಮುನ್ನಡೆಸಬೇಕು ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ ಸಾಮಾನ್ಯ ಅಭಿಪ್ರಾಯ. ಹೀಗಾಗಿ ರಾಹುಲ್‌ ಗಾಂಧಿ ಅವರು ಈಗ ಅಧಿಕಾರ ಸ್ವೀಕರಿಸಲು ಸಕಾಲ ಎಂದು ನಾನು ಭಾವಿ­ಸುತ್ತೇನೆ’ ಎಂದು ದಿಗ್ವಿಜಯ್‌ ಸಿಂಗ್‌ ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಕಾಂಗ್ರೆಸ್‌ ಉಪಾಧ್ಯಕ್ಷರ ನಾಯಕತ್ವ ಸಾಮರ್ಥ್ಯದ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಯ ಬಗ್ಗೆ ಕೆದಕಿದಾಗ, ‘ರಾಹುಲ್‌ ಗಾಂಧಿ ಅಧಿಕಾರದ ಹಿಂದೆ ಬಿದ್ದವರಲ್ಲ ಎಂದು ನಾನು ಹೇಳಿದ್ದೆ. ದಯವಿಟ್ಟು ನನ್ನ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿ. ರಾಹುಲ್‌ ಗಾಂಧಿಯವರೇನೂ ಮೋದಿಯವರ ಹಾಗೆ ಅಧಿಕಾರವಿಲ್ಲದೆ ಬದುಕಲಾರದ, ಉಸಿರಾಡಲಾರದ ವ್ಯಕ್ತಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ವೈಯಕ್ತಿಕ ಅಭಿಪ್ರಾಯ– ಕಾಂಗ್ರೆಸ್: ‘ದಿಗ್ವಿಜಯ್‌ ನೀಡಿರುವ ಹೊಸ ಹೇಳಿಕೆ ಅವರ ತೀರಾ ವೈಯಕ್ತಿಕ ಅಭಿಪ್ರಾಯ. ಪಕ್ಷದ ಸಂಘಟನೆ ಅಥವಾ ರಾಷ್ಟ್ರದ ಹಿತಾಸಕ್ತಿ ವಿಚಾರ ಬಂದಾಗ ಪಕ್ಷ ಸಂಘಟಿತ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತದೆ’ ಎಂದು ಪಕ್ಷದ ವಕ್ತಾರ ಆನಂದ್‌ ಶರ್ಮಾ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಸೋನಿಯಾ ಅವರು ಕಾಂಗ್ರೆಸ್‌ನ ದೊಡ್ಡ ಸ್ಫೂರ್ತಿ. ರಾಹುಲ್‌ ಗಾಂಧಿ ಅವರೂ ಪಕ್ಷದ ಸ್ಫೂರ್ತಿ ಹಾಗೂ ಭವಿಷ್ಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.