ADVERTISEMENT

‘ವಾಜಪೇಯಿಗೆ ಬೇಡವಾಗಿದ್ದ ಮೋದಿ’

ಬಿಜೆಪಿ ಇತಿಹಾಸ ಬಯಲಿಗೆಳೆದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ವಾಜಪೇಯಿ ಅವರನ್ನು ಬಿಜೆಪಿಯ ಉದಾತ್ತ ನಾಯಕ ಎಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಣ್ಣಿಸಿರುವ ಕಾಂಗ್ರೆಸ್‌ ಪಕ್ಷವು ಈಗ ಅದೇ ಪಕ್ಷದ ಇತಿಹಾಸವನ್ನು ಮುಂದಿಟ್ಟುಕೊಂಡು, ‘ಪ್ರಧಾನಿ ಅಭ್ಯರ್ಥಿಯಾಗಲು ನರೇಂದ್ರ ಮೋದಿ ಹೇಗೆ ಅರ್ಹರು?’– ಎಂದು ಪ್ರಶ್ನಿಸಿದೆ.

ಗುಜರಾತ್‌ನಲ್ಲಿ ನಡೆದ ಕೋಮುಗಲಭೆಗಳಿಗಾಗಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕೆಂದು ಆಗ ಪ್ರಧಾನಿಯಾಗಿದ್ದ ವಾಜಪೇಯಿ ಬಯಸಿದ್ದರು. ಅಂತಹ ವ್ಯಕ್ತಿ ಈಗ ಅದು ಹೇಗೆ ಪ್ರಧಾನಿಯಾಗಲು ಅರ್ಹರು ಎಂದು ಕಾಂಗ್ರೆಸ್‌ ಕೇಳಿದೆ.
ಕಾಂಗ್ರೆಸ್‌ ಪಕ್ಷವು ವಾಜಪೇಯಿ ಅವರ ಹೇಳಿಕೆಗಳನ್ನು ಮುಂದಿಟ್ಟುಕೊಂಡ ಮೋದಿ ಅವರನ್ನು ಟೀಕಿಸಿರುವುದು ಇದೇ ಮೊದಲು ಎನ್ನಲಾಗಿದೆ.

ವಾಜಪೇಯಿ ಅವರು ಯಾವ ಮಾರ್ಗದಲ್ಲಿ ನಡೆದುಬಂದರೋ ಆ ಹಾದಿಯಿಂದ ಬಿಜೆಪಿ ಈಗ ವಿಮುಖವಾಗಿದೆ. ಈಗ ಬಿಜೆಪಿಯಲ್ಲಿ ರಾಜಧರ್ಮ ನೆನಪಿ­ಸುವವರು ಯಾರೂ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದೆ. ವಾಜಪೇಯಿ ಅವರ ಸೋದರ ಸಂಬಂಧಿ­ಯಾದ ಕರುಣಾ ಶುಕ್ಲಾ ಅವರು ಆ ಪಕ್ಷ ತೊರೆದು ಕಾಂಗ್ರೆಸ್‌ ಸೇರಲು ಇದೇ ಕಾರಣ ಎಂದೂ ಅದು ಹೇಳಿದೆ. ಯಾರು ಮುಖ್ಯಮಂತ್ರಿಯಾಗಿ ರಾಜಧರ್ಮ ಪಾಲಿಸಲು ವಿಫಲವಾದರೋ ಅವರು ಭಾರತದ ಜನತೆಗೆ ಶಾಂತಿ ಮತ್ತು ಸಮೃದ್ಧಿಯ ಅಭಯ ನೀಡಲು ಹೇಗಾದರೂ ಸಾಧ್ಯವಾದೀತು?– ಎಂಬ ಪ್ರಶ್ನೆಯನ್ನೂ ಅದು ಮುಂದಿಟ್ಟಿದೆ.

‘ಮೋದಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕೆಂಬುದು ಕೆಲವರ ವಾದವಾಗಿತ್ತು. ನನ್ನ ಅಭಿಪ್ರಾಯವೂ ಅದೇ ಆಗಿತ್ತು’ ಎಂದು ವಾಜಪೇಯಿ ಅವರೇ ಮನಾಲಿಯಲ್ಲಿ ಒಮ್ಮೆ ಹೇಳಿದ್ದರು ಎಂಬುದನ್ನು ಕಾಂಗ್ರೆಸ್‌ ವೆಬ್‌ಸೈಟ್‌ನಲ್ಲಿ ನೆನಪಿಸಿದೆ.ವಾಜಪೇಯಿ ಅವರ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದ ಜಸ್ವಂತ್‌ ಸಿಂಗ್‌ ಅವರೂ ಇದನ್ನು ದೃಢಪಡಿಸಿದ್ದಾರೆ. ಮೋದಿ ಅವರ ವಿರುದ್ಧ ಪಕ್ಷವು ಕ್ರಮ ತೆಗೆದುಕೊಳ್ಳದೇ ಹೋದರೆ ರಾಜೀನಾಮೆ ನೀಡುವ ಎಚ್ಚರಿಕೆಯನ್ನೂ ವಾಜಪೇಯಿ 2002ರಲ್ಲಿ ನೀಡಿದ್ದರು ಎಂದು ಕಾಂಗ್ರೆಸ್‌ ಚುಚ್ಚಿದೆ.

ವಾಜಪೇಯಿ ಅವರ ಆಪ್ತರಾಗಿದ್ದ ಜಸ್ವಂತ್‌ ಸಿಂಗ್‌ ಅವರನ್ನು ಈಗ ಬಿಜೆಪಿ ಉಚ್ಚಾಟಿಸಿದೆ. ಇದೇ ವೇಳೆ ವಾಜಪೇಯಿ ಅವರು ಟೀಕಾಕಾರರಾಗಿದ್ದ ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡಲಾಗಿದೆ. ವಾಜಪೇಯಿ ಅವರನ್ನು ಬಿಜೆಪಿ ಮರೆಯಬಹುದು. ಆದರೆ ಅವರು ಮೋದಿ ಅವರ ಬಗ್ಗೆ ಆಗ ಎತ್ತಿದ್ದ ಪ್ರಶ್ನೆಗಳ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು ಎಂದಿದೆ.

ಕಾಂಗ್ರೆಸ್‌ ಹತಾಶೆಗೆ ಕೈಗನ್ನಡಿ-–-- ಬಿಜೆಪಿ:  ಕಾಂಗ್ರೆಸ್‌ ಪಕ್ಷವು ದಿಢೀರನೆ ಮಾಜಿ ಪ್ರಧಾನಿ ವಾಜಪೇಯಿ ಅವರ ಗುಣಗಾನ ಮಾಡುತ್ತಿರುವುದು ಅದರ ತೀವ್ರ ಹತಾಶೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಶುಕ್ರವಾರ ಟೀಕಿಸಿದೆ.

ಇಷ್ಟು ದಿನ ಕಾಂಗ್ರೆಸ್‌ ಪಕ್ಷವು ವಾಜಪೇಯಿ ಅವರನ್ನು ಕಟುವಾಗಿ ಟೀಕಿಸುತ್ತಿತ್ತು. ಈಗ ಚುನಾವಣೆ ಸಮಯದಲ್ಲಿ ಅದು ಇದ್ದಕ್ಕಿದ್ದಂತೆ ಅವರ ಗುಣಗಾನ ಶುರುಮಾಡಿದೆ. ಹೀಗಾಗಿ ಈ ಮೆಚ್ಚುಗೆ ಸಾಚಾತನದಿಂದ ಕೂಡಿದ್ದಲ್ಲ. ಈಗ ನಡೆದಿರುವ ಚುನಾವಣೆಯಲ್ಲಿ ಸನ್ನಿಹಿತವಾಗಿರುವ ಸೋಲನ್ನು ಮರೆಮಾಚಲು ಈ ತಂತ್ರ ಹೂಡಿದೆ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.