ADVERTISEMENT

‘ಹೊಲಸು ತೊಳೆಯುತ್ತಿದ್ದೇವೆ’

ಸಂದರ್ಶನ

ಹೊನಕೆರೆ ನಂಜುಂಡೇಗೌಡ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೀಗ ಒಂದು ವರ್ಷ. ಯಾವುದೇ ಹಗರಣಗಳಿಲ್ಲದೆ ಮೊದಲ ವರ್ಷ ಪೂರೈಸಿರುವ ಸರ್ಕಾರ ಸಾಧನೆಯ ಹಾದಿಯಲ್ಲಿ ಇನ್ನೂ ಬಹಳಷ್ಟು ದೂರ ಕ್ರಮಿಸಬೇಕಿದೆ. ಮೋದಿ ಅವರ ಆಡಳಿತ ಕುರಿತು ವಸ್ತುನಿಷ್ಠ ಮೌಲ್ಯಮಾಪನ ನಡೆಯುತ್ತಿದೆ. ಬಹಳಷ್ಟು ಮಂದಿ ಪ್ರಧಾನಿಗಳ ಆಡಳಿತ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ.

ಅನೇಕರು ಸುಧಾರಣೆಗಳು ಮೇಲ್ನೋಟಕ್ಕೆ ಕಾಣುತ್ತಿಲ್ಲವೆಂದು ಹೇಳುತ್ತಿದ್ದಾರೆ. ಸರ್ಕಾರದ ಸಾಧನೆ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಎನ್‌ಡಿಎ ಸರ್ಕಾರಕ್ಕೆ ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅನೇಕ ವಿಚಾರಗಳನ್ನು ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

* ಮೋದಿ ಸರ್ಕಾರದ ಸಾಧನೆಗಳು ಕಣ್ಣಿಗೆ ಕಾಣುತ್ತವೆಯೇ?
ನಮ್ಮದು ಕ್ರಿಯಾಶೀಲ ಸರ್ಕಾರ. ಹಿಂದಿನ ಸರ್ಕಾರದಂತೆ ನಿಷ್ಕ್ರಿಯವಲ್ಲ. ನಾವು ಮಾಡುವ ಕೆಲಸಗಳು ಜನರ ಕಣ್ಣಿಗೆ ಕಾಣುತ್ತವೆ. ದೇಶದ ಭವಿಷ್ಯದ ದೃಷ್ಟಿಯಿಂದ ಎಂಥ ಕಠಿಣ ನಿರ್ಧಾರ ಗಳನ್ನು ಕೈಗೊಳ್ಳಲೂ ಸರ್ಕಾರ ಹಿಂಜರಿ ಯುವುದಿಲ್ಲ. ನಮ್ಮ ತೀರ್ಮಾನಗಳ ಫಲಶ್ರುತಿಯನ್ನು ಪ್ರತಿ ಕ್ಷೇತ್ರದಲ್ಲಿ ನೋಡು ವಿರಿ. ಅದಕ್ಕಾಗಿ ಸ್ವಲ್ಪ ಕಾಯಬೇಕು. 

* ಕಾಯುತ್ತಾ ಕುಳಿತರೆ ಸಹನೆ ಮೀರುವುದಿಲ್ಲವೇ?
ವಿಪರೀತ ನಿರೀಕ್ಷೆಗಳಿದ್ದಾಗ ಎಲ್ಲಿಂದ ಕೆಲಸ ಆರಂಭಿಸಬೇಕು ಎನ್ನುವುದೇ ಸಮಸ್ಯೆ. ಯುಪಿಎ ಸರ್ಕಾರ ಅಧಿಕಾರ ತ್ಯಜಿಸಿದಾಗ ಅತ್ಯಂತ ಕೆಟ್ಟ ಪರಿಸ್ಥಿತಿ ಇತ್ತು. ಅವರು ಮಾಡಿರುವ ಪ್ರಮಾದಗಳನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಹಳಿ ತಪ್ಪಿದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲಾಗುತ್ತಿದೆ. ಹಣದುಬ್ಬರ ಪ್ರಮಾಣ ತಗ್ಗಿದೆ. ಅಗತ್ಯ ವಸ್ತುಗಳ ಬೆಲೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಪ್ರಗತಿಗೆ ಒತ್ತು ನೀಡಲಾಗುತ್ತಿದೆ. ದಿಕ್ಕುತಪ್ಪಿದ ಆಡಳಿತಕ್ಕೆ ಚುರುಕು ಮುಟ್ಟಿಸಲಾಗಿದೆ.

ಈಗಾಗಲೇ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾಗುವ ರೈತರಿಗೆ ಕೊಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಜನ್‌ಧನ್‌ ಯೋಜನೆಯಡಿ 14 ಕೋಟಿ ಜನರಿಗೆ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ.

* ನೀವು ಹೆಮ್ಮೆಯಿಂದ ಹೇಳಿಕೊಳ್ಳುವ ಬಹುಮುಖ್ಯ ಸಾಧನೆ ಯಾವುದು?
ಹಗರಣಗಳಿಲ್ಲದ, ಭ್ರಷ್ಟಾಚಾರರಹಿತ ಆಡಳಿತಕ್ಕೆ ಒತ್ತು ಕೊಡಲಾಗಿದೆ. ಲಾಬಿಗಳಿಗೆ ಅವಕಾಶವಿಲ್ಲದಂತೆ ಎಚ್ಚರ ವಹಿಸಿದ್ದೇವೆ. ಯುಪಿಎ ಸರ್ಕಾರದ ಹತ್ತು ವರ್ಷದ ಆಡಳಿತದಲ್ಲಿ ₨ 12 ಲಕ್ಷ ಕೋಟಿ ಮೊತ್ತದ 70 ಹಗರಣಗಳು ನಡೆದಿವೆ. ನಮ್ಮ ಸರ್ಕಾರ ಒಂದು ವರ್ಷದಲ್ಲಿ ಹಗರಣವಿಲ್ಲದ ಶುದ್ಧ ಆಡಳಿತ ಕೊಟ್ಟಿದೆ. ಹಿಂದಿನ ಸರ್ಕಾರದ ಹೊಲಸು ತೊಳೆಯಲು ಶ್ರಮಿಸಿದೆ.

* ಎನ್‌ಡಿಎ ಸರ್ಕಾರ ಒಬ್ಬನೇ ನಾಯಕನ ನಿಯಂತ್ರಣದಲ್ಲಿದೆಯೇ?
ಯುಪಿಎ ಸರ್ಕಾರದ ಹತ್ತು ವರ್ಷದ ಆಡಳಿತದಲ್ಲಿ ಪ್ರತಿಯೊಬ್ಬ ಸಚಿವರೂ ತಮ್ಮ ಇಲಾಖೆಗಳ ಪ್ರಧಾನಿಗಳಂತೆ ವರ್ತಿಸಿದ್ದಾರೆ. ಪ್ರಧಾನಿಗೆ ಬೆಲೆಯೇ ಇರಲಿಲ್ಲ. ಎನ್‌ಡಿಎ ಸರ್ಕಾರದಲ್ಲಿ ಪ್ರಧಾನಿ ಹುದ್ದೆ ಘನತೆ– ಗೌರವ ಮರಳಿ ಬಂದಿದೆ. ಪ್ರತಿ ಇಲಾಖೆಗಳ ಸಚಿವರೂ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದೊಳಗೆ ತ್ವರಿತವಾಗಿ ತೀರ್ಮಾನಗಳು  ಆಗುತ್ತಿವೆ.

* ಹೊಸ ಉದ್ಯೋಗಗಳನ್ನು ಯಾವಾಗ ಸೃಷ್ಟಿಸುವಿರಿ?
ನಮ್ಮ ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹಳಷ್ಟು ವಿದೇಶಿ ಕಂಪೆನಿಗಳು ಬಂಡವಾಳ ಹೂಡಲು ಆಸಕ್ತಿ ತೋರಿವೆ. ಮುಂಬರುವ ದಿನಗಳಲ್ಲಿ ತಯಾರಿಕಾ ವಲಯದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ವಯಂ ಉದ್ಯೋಗಕ್ಕೆ ‘ಮುದ್ರಾ ಬ್ಯಾಂಕ್‌’ ಮೂಲಕ ಹಣಕಾಸು ನೆರವು ಕೊಡಿಸುವುದು ಮಹತ್ವದ ನಿರ್ಧಾರ. ಇದಕ್ಕಾಗಿ ಬಜೆಟ್‌ನಲ್ಲಿ ₨ 20 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಇದೊಂದು ದೊಡ್ಡ ಕಾರ್ಯಕ್ರಮ.

* ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ಕೈಗೊಳ್ಳುವುದೇ?
ಸುಪ್ರೀಂ ಕೋರ್ಟ್‌ ಆದೇಶದಂತೆ ಕಪ್ಪು ಹಣ ಕುರಿತ ತನಿಖೆಗೆ ವಿಶೇಷ ತಂಡ ರಚಿಸಿದ್ದು ನಮ್ಮ ಸರ್ಕಾರ. ತನಿಖಾ ತಂಡಕ್ಕೆ ಎಲ್ಲ ಮಾಹಿತಿ ಒದಗಿಸಲಾಗಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಒಂದೂವರೆ ವರ್ಷ ಏನೂ ಮಾಡಿರಲಿಲ್ಲ. ದೇಶದೊಳಗೆ ಹಾಗೂ ಹೊರಗಿರುವ ಕಪ್ಪು ಹಣದ ಪತ್ತೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ.

* ಭೂಸ್ವಾಧೀನ ಮಸೂದೆ ಜಾರಿಗೆ ಸರ್ಕಾರ ಬದ್ಧವಾಗಿದೆಯೇ?
ಭೂಸ್ವಾಧೀನ ಮಸೂದೆ ಜಾರಿಗೊಳಿಸುವ ನಮ್ಮ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮಸೂದೆ ಅಂಗೀಕರಿಸಲಾಗುತ್ತಿದೆ. ಸರ್ಕಾರ ಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ ಒಂದು ಇಂಚೂ ದೊಡ್ಡ ಕಾರ್ಪೋರೇಟ್‌ ಉದ್ಯಮಗಳ ಪಾಲಾಗುವುದಿಲ್ಲ.  ರೈಲು, ರಸ್ತೆ, ರಕ್ಷಣಾ ಉದ್ಯಮ, ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಮಾತ್ರ ಬಳಸಲಾಗುತ್ತದೆ. ಆ ಬಗ್ಗೆ ಅನುಮಾನ ಬೇಡ. ಜನರ ಭವಿಷ್ಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.

* ಹೊಸ ಭೂಸ್ವಾಧೀನ ಮಸೂದೆ ಬಗ್ಗೆ ರೈತರಿಗೆ ಆತಂಕವಿಲ್ಲವೇ?
ಎನ್‌ಡಿಎ ಸರ್ಕಾರ ಅಂಗೀಕರಿಸಲು ಹೊರಟಿರುವ ಮಸೂದೆ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂಬುದನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ಅವರ ಜಮೀನಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೆಲೆ ಸಿಗಲಿದೆ. ಸ್ವಾಧೀನ ಪ್ರಕ್ರಿಯೆಯಿಂದ ಬರುವ ಹಣದಿಂದ ಬೇರೆ ಕಡೆ ಭೂಮಿ ಖರೀದಿಸಿ ನೆಮ್ಮದಿಯಾಗಿರಬಹುದು.

* ಮಸೂದೆಗೆ ವಿರೋಧ ಮಾಡುತ್ತಿರುವ ಮಿತ್ರ ಪಕ್ಷಗಳನ್ನು ಮನವೊಲಿಸುವಿರಾ?
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಹಿನ್ನಡೆ ಕಂಡ ಶಿವಸೇನಾ ನಾಯಕರಿಗೂ ಸತ್ಯ ಅರಿವಾಗುತ್ತಿದೆ. ಎಲ್ಲ ವಿಷಯದಲ್ಲೂ ಮಿತ್ರ ಪಕ್ಷಗಳ ಮನವೊಲಿಕೆಗೆ ಪ್ರಯತ್ನಿಸಲಾಗುತ್ತಿದೆ. ಯುಪಿಎ ಸರ್ಕಾರದಂತೆ ಪ್ರತಿಯೊಂದಕ್ಕೂ ಮಿತ್ರ ಪಕ್ಷಗಳು ಅನಿವಾರ್ಯವೆಂದು ಕಾಯುತ್ತಾ ಕೂರುವುದಿಲ್ಲ. ದೇಶ,  ಆಡಳಿತದ ದೃಷ್ಟಿಯಿಂದ ಅಗತ್ಯ ತೀರ್ಮಾನ ಮಾಡಲೇಬೇಕಿದೆ.

* ಚಿಲ್ಲರೆ ಮಾರಾಟದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಗೊಂದಲವೇಕೆ? ಆರ್ಎಸ್‌ಎಸ್‌ ವಿರೋಧ  ಇದ್ದರೂ ಕಾಂಗ್ರೆಸ್‌ ನೀತಿ ಮುಂದುವರಿಸುತ್ತಿರುವುದೇಕೆ?
ಚಿಲ್ಲರೆ ಮಾರಾಟದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಬಿಜೆಪಿ ವಿರೋಧ ಮುಂದುವರಿಯಲಿದೆ. ಈ ನಿಲುವಿನಲ್ಲಿ ಬದಲಾವಣೆ ಇಲ್ಲ. ಆರ್‌ಎಸ್‌ಎಸ್ ಮುಖಂಡರಿಗೂ ಇದು ಗೊತ್ತಿದೆ. ಬಿಜೆಪಿ– ಆರ್‌ಎಸ್‌ಎಸ್‌ ನಡುವೆ ಈ
ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಸುದ್ದಿ ಹರಡುತ್ತಿರುವವರಿಗೆ ವಸ್ತುಸ್ಥಿತಿ ಅರಿವಿಲ್ಲ. ಕಳೆದ 20 ವರ್ಷಗಳಿಂದ ಈ ಮಾತನ್ನೇ ಹೇಳುತ್ತಿದ್ದಾರೆ. ಇನ್ನೂ ಹಲವು ವರ್ಷ ಹೇಳುತ್ತಿರುತ್ತಾರೆ.

* ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರನ್ನು ನಿಯಂತ್ರಿಸುತ್ತಿಲ್ಲವೇಕೆ?
ಪ್ರಚೋದನಾತ್ಮಕ ಹೇಳಿಕೆ ಕೊಡುತ್ತಿರುವ ನಾಯಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನೋಟಿಸ್‌ ನೀಡಲಾಗುತ್ತಿದೆ. ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿರುವ ಸರ್ಕಾರದ ದಿಕ್ಕು ಬದಲಿಸಲು ಅವಕಾಶ ನೀಡುವುದಿಲ್ಲ.

* ಬಿಹಾರದಲ್ಲಿ ಪುನಃ ಜೆಡಿಯು ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತು ಕೇಳುತ್ತಿದೆಯಲ್ಲಾ?
ಬಿಹಾರದಲ್ಲಿ ನಿತೀಶ್ ಕುಮಾರ್‌ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಜತೆ ಜೆಡಿಯು ಸಂಬಂಧ ಕಡಿದುಕೊಂಡ ಬಳಿಕ ಅಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.

* ಕರ್ನಾಟಕದಲ್ಲಿ ಬಿಜೆಪಿ ಮುಂದಿನ ಯೋಜನೆಗಳೇನು?
ಕರ್ನಾಟಕ ಸರ್ಕಾರದ ಆಡಳಿತದ ವೈಖರಿಯನ್ನು ಜನ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಉತ್ತಮ
ಆಡಳಿತಕ್ಕಾಗಿ ಬಿಜೆಪಿಯನ್ನು ಆಯ್ಕೆ ಮಾಡುತ್ತಾರೆ.

* ನಿಮ್ಮ ಸರ್ಕಾರದ ಭವಿಷ್ಯ ಹೇಗಿದೆ?
2014ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳುತ್ತಿದ್ದವರೀಗ,  ಉತ್ತಮ ಆಡಳಿತ ಕೊಡಲು ಸರ್ಕಾರ ವಿಫಲವಾಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ.

ಆದರೆ, ಅವರ ಮಾತು ಸುಳ್ಳಾಗಲಿದೆ. ಉತ್ತಮ ಆಡಳಿತ ಕೊಡುವ ಮೂಲಕ ಸರ್ಕಾರ ಸದಾ ಜನರ ವಿಶ್ವಾಸಕ್ಕೆ ಪಾತ್ರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT