ADVERTISEMENT

13ನೇ ನಂಬರ್‌ ಕಾರು ಒಲ್ಲೆ ಎಂದ ಸಚಿವರು!

​ಪ್ರಜಾವಾಣಿ ವಾರ್ತೆ
Published 26 ಮೇ 2016, 23:42 IST
Last Updated 26 ಮೇ 2016, 23:42 IST

ತಿರುವನಂತಪುರ(ಪಿಟಿಐ): ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಎಲ್‌ಡಿಎಫ್‌ ಸರ್ಕಾರದ ಸಚಿವರು 13ನೇ ನಂಬರ್‌ ಕಾರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿ, ವೈಚಾರಿಕತೆಯ ಹೆಸರಲ್ಲಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಈಗ 13ನೇ ಸಂಖ್ಯೆ ಅಪಶುಕುನ ಎನ್ನುವ ಕಾರಣಕ್ಕಾಗಿ ಆ ಸಂಖ್ಯೆಯ ಕಾರು ಬಳಸಲು ಹಿಂಜರಿಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಬಿಜೆಪಿಯ ಮುಖಂಡ ಕೆ. ಸುರೇಂದ್ರನ್‌, ಅಪಶಕುನ ಎನ್ನುವ ಕಾರಣಕ್ಕೆ ಕಾರು ಬಳಸದಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

‘ಸಚಿವ ಕೆ.ಟಿ. ಜಲೀಲ್‌ ಅವರ ಕಾರಿನ ಸಂಖ್ಯೆ 12. ಅಂತೆಯೇ ಮತ್ತೊಬ್ಬ ಸಚಿವ ಪಿ. ತಿಲೊತ್ತಮನ್‌ ಅವರ ಕಾರಿನ ಸಂಖ್ಯೆ 14. ಸಚಿವ ಸಂಪುಟದ ಕೊನೆಯ ಸಚಿವರ ಕಾರಿನ ಸಂಖ್ಯೆ 20. ಹಾಗಾದರೆ 13ನೇ ಸಂಖ್ಯೆಯಲ್ಲಿ ಏನು ದೋಷವಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸಮಾಜವಾದವನ್ನು ತಮ್ಮ ಮೂಲ ಸಿದ್ಧಾಂತವನ್ನಾಗಿಸಿಕೊಂಡಿರುವ  ಸಿಪಿಐ  ಮತ್ತು ಸಿಪಿಎಂ ಸಚಿವರು 13ನೇ ಸಂಖ್ಯೆಯ ಕಾರನ್ನು ಯಾಕೆ ಹೊರಗಿಡುತ್ತಿದ್ದಾರೆ ಎಂದು ತಿಳಿಯುವ  ಹಕ್ಕು ಜನರಿಗೆ ಇದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಂ ಯೆಚೂರಿ ಮತ್ತು ಪ್ರಕಾಶ್ ಕಾರಟ್ ಅವರು ಸಮರ್ಪಕವಾಗಿ ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಿ.ಎಂ ಪಿ.ವಿಜಯನ್‌ ಅವರಿಗೆ ಧೈರ್ಯವಿದ್ದರೆ 13ನೇ ಸಂಖ್ಯೆ ಅಪಶಕುನ ಎಂದು ಜನರಿಗೆ ಹೇಳಲಿ ಎಂದೂ ಸುರೇಂದ್ರನ್‌ ಸವಾಲು ಹಾಕಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದಲ್ಲೂ ಕೂಡಾ ಯಾವುದೇ ಸಚಿವರು 13ನೇ ಸಂಖ್ಯೆಯ ಕಾರನ್ನು ಬಳಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.