ADVERTISEMENT

2 ವರ್ಷದ ಪುಟಾಣಿ ವಿರುದ್ಧ ಲೈಂಗಿಕ ದುರ್ವರ್ತನೆ ಪ್ರಕರಣ!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST

ಪಾಟ್ನಾ: ಎರಡು ವರ್ಷ ವಯಸ್ಸಿನ ಪುಟಾಣಿಯೊಂದರ ವಿರುದ್ಧ 35 ವರ್ಷ ವಯಸ್ಸಿನ ಮಹಿಳೆಯ ಜೊತೆ ಲೈಂಗಿಕ ದುರ್ವರ್ತನೆ ತೋರಿದ ಪ್ರಕರಣ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ದಾಖಲಾಗಿದೆ!

ಇಷ್ಟೇ ಅಲ್ಲ, ಪುಟಾಣಿಯ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, ‘ಮಹಿಳೆಯ ಘನತೆಗೆ ಕುಂದುಂಟಾಗುವಂತೆ ವರ್ತಿಸಿದ ಹಾಗೂ ಮಹಿಳೆಯ ಚಿನ್ನದ ಸರ ಎಳೆದ’ ಆರೋಪಗಳನ್ನೂ ಉಲ್ಲೇಖಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 82ರ ಅನ್ವಯ, ಏಳು ವರ್ಷಗಳಿಗಿಂತ ಚಿಕ್ಕ ವಯಸ್ಸಿನ ಮಕ್ಕಳು ಎಸಗುವ ಯಾವ ಕೃತ್ಯವೂ ಅಪರಾಧವಲ್ಲ.
ಎಫ್‌ಐಆರ್‌ ದಾಖಲಾದ ನಂತರ ಕೆಲವರು ಆ ಮಗುವಿನ ಬಳಿ, ‘ನಿನ್ನನ್ನು ಹಾಗೂ ನಿನ್ನ ಅಪ್ಪನನ್ನು ಪೊಲೀಸರು ಶೀಘ್ರವೇ ಬಂಧಿಸಿ ಕರೆದೊಯ್ಯುತ್ತಾರೆ’ ಎಂದು ಹೇಳಿದ್ದರಿಂದ ಮಗು ಭಯಭೀತಗೊಂಡಿದೆ.

ADVERTISEMENT

ಎಫ್‌ಐಆರ್‌ನಿಂದ ತನ್ನ ಮಗನ ಹೆಸರನ್ನು ತೆಗೆಸಲು ಆತನ ತಂದೆ (ಇವರ ಹೆಸರನ್ನು ಉಲ್ಲೇಖಿಸುತ್ತಿಲ್ಲ) ಹೆಣಗುತ್ತಿದ್ದಾರೆ. ಮಗುವಿನ ವಿರುದ್ಧ ದೂರು ದಾಖಲಿಸಿರುವ ಮಹಿಳೆಯು ಆತನ ತಂದೆಯ ಮೇಲೆ ತಮಗಿರುವ ಸಿಟ್ಟು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಪತಾಹೀ ಪೊಲೀಸ್ ಠಾಣಾಧಿಕಾರಿ ನರೇಂದ್ರ ಕುಮಾರ್ ಅವರನ್ನು ಮಗುವಿನ ತಂದೆ ಭೇಟಿ ಮಾಡಿದ್ದಾರೆ. ಆದರೆ ಇದರಿಂದ ಪ್ರಯೋಜನ ಆಗಿಲ್ಲ. ‘ಆದಷ್ಟು ಬೇಗ ನ್ಯಾಯಾಲಯದಲ್ಲಿ ಶರಣಾಗಿ ಎಂದು ನರೇಂದ್ರ ಕುಮಾರ್ ಹೇಳುತ್ತಿದ್ದಾರೆ’ ಎಂದು ಮಗುವಿನ ತಂದೆ ತಿಳಿಸಿದರು.

ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ನರೇಂದ್ರ ಕುಮಾರ್, ‘ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಾಗ ಆತನ ವಯಸ್ಸನ್ನು ನಮೂದಿಸುವುದಿಲ್ಲ. ಆದರೆ ಈ ಪ್ರಕರಣದ ವಿವರ ಪಡೆದ ನಂತರ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಮಗುವಿನ ತಂದೆಗೆ ತಿಳಿಸಿದ್ದೇನೆ’ ಎಂದರು.

ಮಗುವಿನ ತಂದೆ ಮೋತಿಹಾರಿಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ‘ಈ ಪ್ರಕರಣದ ಎಲ್ಲ ಆಯಾಮಗಳ ಬಗ್ಗೆ ಪರಿಶೀಲಿಸಲಾಗುವುದು. ಮಗುವಿನ ವಯಸ್ಸು ಏಳು ವರ್ಷಗಳಿಗಿಂತ ಕಡಿಮೆ ಆಗಿದ್ದಲ್ಲಿ, ತನಿಖಾ ಪ್ರಕ್ರಿಯೆಯ ವೇಳೆ ಎಲ್ಲ ಆರೋಪಗಳಿಂದ ಮುಕ್ತಗೊಳಿಸಲಾಗುವುದು’ ಎಂದು ವಿಜಯ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.