ADVERTISEMENT

ಟ್ರ್ಯಾಕ್ಟರ್‌ ವಶಕ್ಕೆ ವಿರೋಧ: ಚಕ್ರಗಳ ಅಡಿಯಲ್ಲಿ ಸಿಲುಕಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಟ್ರ್ಯಾಕ್ಟರ್‌ ವಶಕ್ಕೆ ವಿರೋಧ: ಚಕ್ರಗಳ ಅಡಿಯಲ್ಲಿ ಸಿಲುಕಿ ರೈತ ಸಾವು
ಟ್ರ್ಯಾಕ್ಟರ್‌ ವಶಕ್ಕೆ ವಿರೋಧ: ಚಕ್ರಗಳ ಅಡಿಯಲ್ಲಿ ಸಿಲುಕಿ ರೈತ ಸಾವು   

ಲಖನೌ: ಸಾಲ ಪಡೆದು ಖರೀದಿಸಿದ್ದ ಟ್ರ್ಯಾಕ್ಟರ್‌ ವಶಪಡಿಸಿಕೊಳ್ಳುವುದನ್ನು ವಿರೋಧಿಸಿದ ರೈತನೊಬ್ಬಅದರ ಚಕ್ರಗಳ ಅಡಿಯಲ್ಲೇ ದಾರುಣವಾಗಿ
ಸಾವನ್ನಪ್ಪಿದ್ದಾರೆ.

ಸಾಲ ಮರುಪಾವತಿ ಮಾಡದ ಕಾರಣಕ್ಕೆ ಹಣಕಾಸು ಕಂಪನಿಯ ಪ್ರತಿನಿಧಿಗಳು ಟ್ರ್ಯಾಕ್ಟರ್‌ ವಶಪಡಿಸಿಕೊಳ್ಳಲು ಮುಂದಾದಾಗ ಈ ಘಟನೆ ನಡೆದಿದೆ. ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಭೌನ್ರಿ ಗ್ರಾಮದ ರೈತ ಗ್ಯಾನ್‌ ಚಂದ್ರ ಮೃತಪಟ್ಟ ದುರ್ದೈವಿ.

ನಾಲ್ಕು ವರ್ಷಗಳ ಹಿಂದೆ ಗ್ಯಾನ್‌ ಚಂದ್ರ ಅವರು ಟ್ರ್ಯಾಕ್ಟರ್‌ ಖರೀದಿಸಲು ಹಣಕಾಸು ಕಂಪನಿಯಿಂದ ₹5ಲಕ್ಷ ಸಾಲ ಪಡೆದಿದ್ದರು. ಇದರಲ್ಲಿ ಶೇಕಡ 80ರಷ್ಟು ಸಾಲವನ್ನು ಅವರು ಮರುಪಾವತಿಸಿದ್ದರು. ಆದರೆ, ಎಲ್ಲ ಸಾಲದ ಮೊತ್ತವನ್ನು ತಕ್ಷಣವೇ ಪಾವತಿಸದಿದ್ದರೆ ಟ್ರ್ಯಾಕ್ಟರ್‌ ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.

ADVERTISEMENT

ಶನಿವಾರ ಗ್ರಾಮಕ್ಕೆ ಬಂದ ಕಂಪನಿಯ ಪ್ರತಿನಿಧಿಗಳು ಗ್ಯಾನ್‌ ಚಂದ್ರ ಅವರನ್ನು ಹಿಡಿದುಕೊಂಡು ಟ್ರ್ಯಾಕ್ಟರ್‌ ಕೀ ಕಸಿದುಕೊಂಡರು. ಬಳಿಕ, ಟ್ರ್ಯಾಕ್ಟರ್‌ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಆತಂಕಗೊಂಡಿದ್ದ ಗ್ಯಾನ್‌ ಚಂದ್ರ ಅವರು ಅಡ್ಡ ನಿಂತು ತಡೆಯಲು ಯತ್ನಿಸಿದ್ದಾರೆ. ಆಗ ಒಬ್ಬ ಪ್ರತಿನಿಧಿ ಗ್ಯಾನ್‌ ಚಂದ್ರ ಅವರನ್ನು ಪಕ್ಕಕ್ಕೆ ತಳ್ಳಿದರು. ಆದರೆ, ಟ್ರ್ಯಾಕ್ಟರ್ ಅತಿ ವೇಗದಲ್ಲಿ ಚಲಾಯಿಸಿದ್ದರಿಂದ ಗ್ಯಾನ್ ಚಂದ್ರ ಮೇಲೆಯೇ ಹರಿಯಿತು. ಸ್ಥಳದಲ್ಲೇ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಗ್ರಾಮಸ್ಥರು ಬೆನ್ನಟ್ಟಿದಾಗ ಎಲ್ಲ ಪ್ರತಿನಿಧಿಗಳು ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.