ADVERTISEMENT

ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2014, 20:32 IST
Last Updated 31 ಜನವರಿ 2014, 20:32 IST
ಧಾರವಾಡದಲ್ಲಿ ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ ಹಾಗೂ ಡಾ.ಜಿ.ಕೃಷ್ಣಪ್ಪ ಅವರಿಗೆ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಯನ್ನು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಶುಕ್ರವಾರ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ, ಹಿರಿಯ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಚಿತ್ರದಲ್ಲಿದ್ದಾರೆ.	–ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ಸಾಹಿತಿಗಳಾದ ಡಾ.ಗುರುಲಿಂಗ ಕಾಪಸೆ ಹಾಗೂ ಡಾ.ಜಿ.ಕೃಷ್ಣಪ್ಪ ಅವರಿಗೆ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಯನ್ನು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಶುಕ್ರವಾರ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಹಿರೇಗೌಡರ, ಹಿರಿಯ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ   

ಧಾರವಾಡ: ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಮತ್ತು ಬೆಂಗಳೂರಿನ ಡಾ.ಜಿ.ಕೃಷ್ಣಪ್ಪ (ಬೇಂದ್ರೆ ಕೃಷ್ಣಪ್ಪ) ಅವರಿಗೆ 2014ನೇ ಸಾಲಿನ ಅಂಬಿಕಾತನಯ­ದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಶುಕ್ರವಾರ ಇಲ್ಲಿ ಪ್ರದಾನ ಮಾಡಲಾಯಿತು.

ದ.ರಾ.ಬೇಂದ್ರೆಯವರ 119ನೇ ಜನ್ಮದಿನದ ಅಂಗ­ವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ.ಶ್ಯಾಮ­ಸುಂದರ ಬಿದರಕುಂದಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಆದರೆ ಇಬ್ಬರನ್ನು ಆಯ್ಕೆ ಮಾಡಿದ್ದರಿಂದ ಪ್ರಶಸ್ತಿ ಮೊತ್ತ ವನ್ನು ಇಬ್ಬರಿಗೂ ತಲಾ ₨ 50 ಸಾವಿರದಂತೆ ಹಂಚಲಾಯಿತು.

‘ಬೇಂದ್ರೆ ಪ್ರಶಸ್ತಿಯೊಂದಿಗೆ ಅವರ ಅನುಗ್ರಹವೂ ಇಂದು ನನಗೆ ದೊರೆಯಿತು. 1946ರಷ್ಟು ಹಿಂದೆಯೇ ನಾನು ಅವರನ್ನು ಭೇಟಿ ಮಾಡಿದ್ದೆ. ಮಧುರಚೆನ್ನರು ಹಾಗೂ ಬೇಂದ್ರೆ ಅವರ ಒಡನಾಟವನ್ನು ಬಹಳ ಹತ್ತಿರದಿಂದ ನೋಡಿದ್ದೆ. ಕವಿತೆಯೊಂದನ್ನು ನನ್ನಿಂದ ಓದಿಸಿದ್ದ ಬೇಂದ್ರೆ ,ಅದನ್ನು ಆನಂದಕಂದರ ಸಂಪಾದಕತ್ವದ ‘ಜಯಂತಿ’ ಪತ್ರಿಕೆಗೆ ಕಳಿಸುವಂತೆ ಸಲಹೆ ನೀಡಿದ್ದರು’ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ಕಾಪಸೆ ಹೇಳಿದರು.

‘1974ರಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಬೇಂದ್ರೆ ಅವರ ಕವಿತೆಯ ಬಗ್ಗೆ ಮಾತನಾಡುವುದರೊಂದಿಗೆ ನನ್ನ ಹಾಗೂ ಬೇಂದ್ರೆ ಸಾಹಿತ್ಯದ ಒಡನಾಟ ಬೆಳೆಯಿತು. ಶಾಲೆ, ಕಾಲೇಜಿಗೆ ಹೋಗಿ ಸ್ಪರ್ಧೆ ಏರ್ಪಡಿಸಿ ಬೇಂದ್ರೆ ಕವಿತೆಯ ಪುಸ್ತಕಗಳನ್ನು ಕೊಡುವ ಮೂಲಕ ಅವರ ಸಾಹಿತ್ಯದ ಪರಿಚಾರಕನಾಗುವ ಕೆಲಸ ಲೇಸೆನಿಸಿತು. 1988ರಿಂದ ಇಲ್ಲಿಯವರೆಗೆ ರಾಜ್ಯದ ಕೋಲಾರದ ಕಟ್ಟಕಡೆಯ ಗ್ರಾಮದಿಂದ ಬೀದರ್‌ನ ಕಮಲಾಪುರದವರೆಗೂ 445ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿ­ದ್ದೇವೆ. ಬೇಂದ್ರೆ ಒಬ್ಬ ಜಾದೂಗಾರನಿದ್ದಂತೆ. ಆದ್ದರಿಂದಲೇ ಅವರು ಮತ್ತವರ ಕವಿತೆಗಳನ್ನು ರಾಜ್ಯದ ಜನರು ಸ್ವಾಗತಿಸಿದ್ದಾರೆ’ ಎಂದು ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ ಡಾ.ಕೃಷ್ಣಪ್ಪ ಹೇಳಿದರು.

‘ಕನ್ನಡ ನವೋದಯ ಕಾವ್ಯದಲ್ಲಿ ಮೈಸೂರಿನಲ್ಲಿ ಕುವೆಂಪು ಹಾಗೂ ಧಾರವಾಡದಲ್ಲಿ ಬೇಂದ್ರೆ ಎಂಬ ಎರಡು ಕೇಂದ್ರಗಳಿದ್ದವು. ಕುವೆಂಪು ಅವರ ಬಳಗದಲ್ಲಿದ್ದವರು ಕುವೆಂಪು ಅವರನ್ನು ಆರಾಧಿಸುತ್ತಿ­ದ್ದರೆ, ಬೇಂದ್ರೆ ಜೊತೆಗಿದ್ದುದು ಜಾಣರ ಗುಂಪಾಗಿತ್ತು’ ಎಂದು ಹಿರಿಯ ಕವಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.