ADVERTISEMENT

ಅನುದಾನ ಬಳಸದ ರಾಜ್ಯದ ವಿ.ವಿ.ಗಳು

ಕರ್ನಾಟಕ ವಿ.ವಿ.ಗೆ ಯುಜಿಸಿಯಿಂದ ಬಂದಿದ್ದು ₹ 9.7 ಕೋಟಿ, ಬಳಸಿದ್ದು ₹ 43 ಲಕ್ಷ

ಕೆ.ಓಂಕಾರ ಮೂರ್ತಿ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ   

ಮೈಸೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿ.ವಿ.ಗಳು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬಿಡುಗಡೆ ಮಾಡಿರುವ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಂಡಿಲ್ಲ.

ಕಟ್ಟಡ ನಿರ್ಮಾಣ, ನವೀಕರಣ, ಸಿಬ್ಬಂದಿ ನೇಮಕ, ಪುಸ್ತಕಗಳ ಖರೀದಿ ಸೇರಿದಂತೆ ವಿ.ವಿ ಅಭಿವೃದ್ಧಿಗೆಂದು ಯುಜಿಸಿ, 12ನೇ ಯೋಜನೆಯಡಿ (2012–2017) ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಯೋಜನೆ ಅವಧಿ ಮುಗಿಯುತ್ತಾ ಬಂದರೂ ವಿ.ವಿ.ಗಳು ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ.

ಶತಮಾನೋತ್ಸವ ಆಚರಿಸುತ್ತಿರುವ ಮೈಸೂರು ವಿ.ವಿ ಸೇರಿದಂತೆ ರಾಜ್ಯದ 7 ವಿ.ವಿ.ಗಳು ಖರ್ಚುವೆಚ್ಚದ ಮಾಹಿತಿಯನ್ನೇ ಸಲ್ಲಿಸದಿರುವುದು ಯುಜಿಸಿ ಬಿಡುಗಡೆ ಮಾಡಿರುವ ವರದಿಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಬಳಕೆಯಾಗದ ಅನುದಾನ ವಾಪಾಸಾಗುವ ಆತಂಕವನ್ನು ಈ ವಿ.ವಿಗಳು ಎದುರಿಸುತ್ತಿವೆ. ಅಲ್ಲದೆ, ಈ ವರ್ಷ ಬರಬೇಕಿದ್ದ ಅನುದಾನವೂ ಕೈತಪ್ಪುವ ಸಂಭವವಿದೆ.

‘ಸಾಮಾನ್ಯ ಅಭಿವೃದ್ಧಿ ಸಹಾಯ ಯೋಜನೆ’ಯಡಿ ಮೈಸೂರು ವಿ.ವಿ.ಗೆ ಯುಜಿಸಿ ಮೀಸಲಿಟ್ಟಿರುವ ಒಟ್ಟು ಅನುದಾನ ₹ 26 ಕೋಟಿ. 2012–13ರಲ್ಲಿ ₹ 2.3 ಕೋಟಿ, 2013–14ರಲ್ಲಿ ₹ 8 ಕೋಟಿ ಬಿಡುಗಡೆಯಾಗಿದೆ. ಖರ್ಚುವೆಚ್ಚದ ಮಾಹಿತಿಯನ್ನು ಯುಜಿಸಿಗೆ ಸಲ್ಲಿಸದ ಕಾರಣ 2014–15 ಹಾಗೂ 2015 16ನೇ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘ಇದುವರೆಗೆ ಬಿಡುಗಡೆಯಾಗಿರುವ ಅನುದಾನದ ಖರ್ಚುವೆಚ್ಚದ ಮಾಹಿತಿಯನ್ನು ಎರಡು ಬಾರಿ ಯುಜಿಸಿಗೆ ಸಲ್ಲಿಸಿದ್ದೇವೆ. ಈಗಾಗಲೇ ₹ 11 ಕೋಟಿ ವ್ಯಯಿಸಿದ್ದೇವೆ. ಆದರೂ, ಯುಜಿಸಿ ತನ್ನ ವರದಿಯಲ್ಲಿ ನಾವು ನೀಡಿರುವ ಮಾಹಿತಿ ಪ್ರಕಟಿಸಿಲ್ಲ. ಏಕೆ ಈ ರೀತಿಯಾಗಿದೆಯೋ ಗೊತ್ತಿಲ್ಲ’ ಎಂದು ಮೈಸೂರು ವಿ.ವಿ ಕುಲಸಚಿವ ಪ್ರೊ.ಸಿ.ಬಸವರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಯುಜಿಸಿ ವರದಿ ಪ್ರಕಾರ ಧಾರವಾಡದಲ್ಲಿರುವ ಕರ್ನಾಟಕ ವಿ.ವಿ.ಗೆ 12ನೇ ಯೋಜನೆಯಡಿ ಇದುವರೆಗೆ ₹ 9.7 ಕೋಟಿ ಅನುದಾನ ಬಿಡುಗಡೆಯಾಗಿದೆ. ಬಳಕೆ ಮಾಡಿರುವ ಮೊತ್ತ ಕೇವಲ ₹ 43 ಲಕ್ಷ. ಈ ವಿ.ವಿ.ಗೆಂದು ಯುಜಿಸಿ ಮೀಸಲಿಟ್ಟಿರುವ ಒಟ್ಟು ಅನುದಾನ ₹ 24.3 ಕೋಟಿ. ಇದುವರೆಗೆ ಬಿಡುಗಡೆ ಮಾಡಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಪೂರ್ಣವಾಗಿ ಬಳಸಿದರೆ ಬಾಕಿ ಅನುದಾನ ಲಭಿಸಲಿದೆ.

‘ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಸೌಲಭ್ಯ ಒದಗಿಸಲು ಅನುದಾನ ಕೊರತೆ ನೆಪ ನೀಡುತ್ತಾರೆ. ಆದರೆ, ಬಿಡುಗಡೆಯಾಗಿರುವ ಅನುದಾನವನ್ನು ವಿ.ವಿ.ಗಳು ಸಮರ್ಪಕವಾಗಿ ವೆಚ್ಚ ಮಾಡದಿರುವುದು ದುರಂತ. ವಿ.ವಿ.ಗಳಲ್ಲಿ ಬಹಳ ದಿನಗಳಿಂದ ಸಿಬ್ಬಂದಿ ಕೊರತೆಯಿದೆ. ಅದಕ್ಕಾದರೂ ಬಳಕೆ ಮಾಡಿಕೊಳ್ಳಬಹುದಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.