ADVERTISEMENT

ಇಂದು ರಾಜ್ಯ ಬಂದ್‌

ಮೇಕೆದಾಟು ಯೋಜನೆ: ಕನ್ನಡಪರ ಸಂಘಟನೆಗಳ ಹೋರಾಟ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ಬೆಂಗಳೂರು:  ಮೇಕೆದಾಟು ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ‘ಕರ್ನಾಟಕ ಬಂದ್‌’ಗೆ ಕರೆ ನೀಡಿವೆ. ನೂರಾರು ಸಂಘಟನೆಗಳಿಂದ ಅದಕ್ಕೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ರಾಜ್ಯದ, ಅದರಲ್ಲೂ, ಬೆಂಗಳೂರನ್ನು ಒಳಗೊಂಡಂತೆ ದಕ್ಷಿಣ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ರಾಜ್ಯದಾದ್ಯಂತ ವ್ಯಾಪಕ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರ ಒಂದರಲ್ಲೇ ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 60 ತುಕಡಿಗಳು, ಕ್ಷಿಪ್ರ ಕಾರ್ಯ ಪಡೆಯ ಎರಡು ಕಂಪೆನಿಗಳನ್ನು ನಿಯೋಜಿಸಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬಂದ್‌ ಬಿಸಿ ಹೆಚ್ಚಾಗಿ ತಟ್ಟುವ ಸೂಚನೆಗಳಿವೆ.

ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗಳು ಪರಿಸ್ಥಿತಿ ನೋಡಿಕೊಂಡು ಬಸ್‌ ಸಂಚಾರದ ಕುರಿತು ತೀರ್ಮಾನಿಸಲಿವೆ. ಆದರೆ, ಆಟೊ ಹಾಗೂ ಟ್ಯಾಕ್ಸಿ ಸಂಘಟನೆಗಳು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿವೆ. ಹೀಗಾಗಿ ಪರ ಊರುಗಳಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೇಂದ್ರೀಯ ವಿದ್ಯಾಲಯಗಳು ಇನ್ನೂ ನಡೆಯುತ್ತಿದ್ದು ಶನಿವಾರ ರಜೆ ನೀಡಿಲ್ಲ.

ಯಶಸ್ಸಿನ ವಿಶ್ವಾಸ: ‘ಬಂದ್‌ಗೆ ಹೋಟೆಲ್‌ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ರಿಕ್ಷಾ ಚಾಲಕರ ಸಂಘ, ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ 730 ಸಂಘಟನೆಬೆಂಬಲ ಸೂಚಿಸಿವೆ. ಹೋರಾಟ ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸ ಇದೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದರು.

‘ಶನಿವಾರ ಬೆಳಿಗ್ಗೆ 10 ಗಂಟೆಗೆ ಬೃಹತ್‌ ರ್‍ಯಾಲಿ ನಡೆಸಿ, ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಾಟಾಳ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT