ADVERTISEMENT

ಇದು ಉಡುಗೊರೆ ವಾಚು

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 20:17 IST
Last Updated 10 ಫೆಬ್ರುವರಿ 2016, 20:17 IST
ಇದು ಉಡುಗೊರೆ ವಾಚು
ಇದು ಉಡುಗೊರೆ ವಾಚು   

ಬೆಂಗಳೂರು/ರಾಯಚೂರು: ‘ಈ ಕೈಗಡಿಯಾರ ಸ್ನೇಹಿತರು ಕೊಟ್ಟ ಉಡುಗೊರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ಸ್ಪಷ್ಟಪಡಿಸಿದರು.
‘ಸಿದ್ದರಾಮಯ್ಯ ಕಟ್ಟುವ ವಾಚ್‌ 50 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುತ್ತದೆ’ ಎಂದು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಬೀದರ್‌ನಲ್ಲಿ ಮಂಗಳವಾರ ಆರೋಪಿಸಿದ್ದರು.

ಇದಕ್ಕೆ ನಗರದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ‘ಕುಮಾರಸ್ವಾಮಿ ಗಾಜಿನ ಮನೆಯಲ್ಲಿ ಇದ್ದುಕೊಂಡು ಸುಳ್ಳು ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.

ದುಬಾರಿ ಬೆಲೆಯ ವಾಚ್‌ ತರುವಾಗ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪದ ಕುರಿತು ಕೇಳಿದಾಗ ‘ನೋಡಿ ಕುಮಾರಸ್ವಾಮಿ ಬಗ್ಗೆ ಹೇಳಬೇಕೆಂದರೆ ಸಾಕಷ್ಟು ಇದೆ. ಆದರೆ, ಅದೆಲ್ಲ ಬೇಡ ಅಂತ ಸುಮ್ಮನಿದ್ದೇನೆ’ ಎಂದರು.

ರಾಯಚೂರು ವರದಿ: ಗಬ್ಬೂರಿನ ಹೆಲಿಪ್ಯಾಡ್‌ ಬಳಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಸಿದ್ದರಾಮಯ್ಯ ‘ಕುಮಾರಸ್ವಾಮಿ ಇಂತಹ ಅನಗತ್ಯ ವಿಚಾರವನ್ನು ಪ್ರಸ್ತಾಪ ಮಾಡುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇವೇಗೌಡರ ಕಾಲದಲ್ಲಿ ರಾಜ್ಯದ ನೀರಾವರಿ ಯೋಜನೆಗಳೆಲ್ಲ ಅನುಷ್ಠಾನವಾಗಿದ್ದರೆ ಈಗ ಅವುಗಳನ್ನು ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಖರ್ಚು ಮಾಡಬೇಕಾಗುವ ಪ್ರಮೇಯವೇ ಇರುತ್ತಿರಲಿಲ್ಲ. ಗೌಡರದ್ದು ಪ್ರಚಾರಕ್ಕಾಗಿ ನೀಡಿದ್ದ ಹೇಳಿಕೆಯಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘14ನೇ ಹಣಕಾಸು ಆಯೋಗದ ಶಿಫಾರಸು ಜಾರಿಯಾದ ಮೇಲೆ  ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ₹ 1,987 ಕೋಟಿ ಅನುದಾನ ಕಡಿತವಾಗಿದೆ.  ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ₹ 4,689 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂಬ ಸಂಸದ ಬಿ.ಎಸ್‌.ಯಡಿಯೂರಪ್ಪ ಅವರ ಟೀಕೆಗೆ ತಿರುಗೇಟು ನೀಡಿದರು.

ಬರಗಾಲದಲ್ಲಿ ಚರ್ಚೆ– ಟೀಕೆ (ಮೈಸೂರು ವರದಿ): ರಾಜ್ಯದ ಬಹುತೇಕ ಕಡೆಗಳಲ್ಲಿ ಭೀಕರ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ದುಬಾರಿ ವಾಚು ಹಾಗೂ ಕನ್ನಡಕದ ಕುರಿತ ಚರ್ಚೆಯ ಅಗತ್ಯವಿರಲಿಲ್ಲ ಎಂದು ವಿಧಾನಪರಿಷತ್ತಿನ ಸದಸ್ಯ ಬಿಜೆಪಿಯ ಗೋ. ಮಧುಸೂದನ ಟೀಕಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಕಾರಿಗೆ ಹಣ ಎಲ್ಲಿಂದ ಬಂತು?
‘ಎಚ್‌.ಡಿ. ಕುಮಾರಸ್ವಾಮಿ ಮಗನಿಗೆ ವಿದೇಶಿ ಕಾರುಗಳು ಎಲ್ಲಿಂದ ಬಂದವು? ಅವರ ಮಗ ಸಂಪಾದನೆ ಮಾಡಿ ಕಾರುಗಳನ್ನು ಖರೀದಿಸಿದ್ದಾನಾ? ಅವುಗಳನ್ನು ತರಿಸಿಕೊಟ್ಟಿದ್ದು ಯಾರು? ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವುದು ಯಾರು? ಇದಕ್ಕೆಲ್ಲ ಎಲ್ಲಿಂದ ಹಣ ಬಂತು’ ಎಂದು ಏರುಧ್ವನಿಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು.

****
ಬೇಕಾದರೆ ₹5 ಲಕ್ಷಕ್ಕೆ ನನ್ನ ಈ ವಾಚ್‌ ಕೊಡಲು ಸಿದ್ಧ. ಅದರ ಜತೆ ಕನ್ನಡಕವನ್ನೂ ಕೊಡುತ್ತೇನೆ. ಬೇಕಾದರೆ ಕುಮಾರಸ್ವಾಮಿ ತೆಗೆದುಕೊಳ್ಳಲಿ.
-ಸಿದ್ದರಾಮಯ್ಯ,ಮುಖ್ಯಮಂತ್ರಿ

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.