ADVERTISEMENT

ಈರುಳ್ಳಿ ಖರೀದಿಗೆ ಸರ್ಕಾರದ ಚಿಂತನೆ

ಬೆಲೆ ಕುಸಿತ: ಮುಂದಿನ ವಾರ ಸಂಪುಟ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
ಈರುಳ್ಳಿ ಖರೀದಿಗೆ ಸರ್ಕಾರದ ಚಿಂತನೆ
ಈರುಳ್ಳಿ ಖರೀದಿಗೆ ಸರ್ಕಾರದ ಚಿಂತನೆ   

ಬೆಂಗಳೂರು: ರಾಜ್ಯದಲ್ಲಿ ಈರುಳ್ಳಿ  ದರ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಲಿರುವ ಸರ್ಕಾರ,  ನ್ಯಾಯಸಮ್ಮತ ಬೆಲೆಯಲ್ಲಿ 30 ದಿನಗಳ ಕಾಲ ಈರುಳ್ಳಿ ಖರೀದಿಸಲು ಉದ್ದೇಶಿಸಿದೆ.

ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 50 ಪೈಸೆಗೆ ಕುಸಿದಿದೆ. ಇದರಿಂದ ಆಕ್ರೋಶಗೊಂಡಿರುವ ಉತ್ತರ ಕರ್ನಾಟಕದ  ರೈತರು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರ ಈರುಳ್ಳಿ ಖರೀದಿಗೆ ಮುಂದಾಗಿದೆ.

ADVERTISEMENT

ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಕೃಷಿ ಬೆಲೆಗೆ ಸಂಬಂಧಿಸಿದ  ಸಂಪುಟ ಉಪಸಮಿತಿ ಕಳೆದವಾರ ಸಭೆ ನಡೆಸಿ ಕೂಡಲೇ ರೈತರಿಗೆ ಪರಿಹಾರ ಒದಗಿಸಲು ನಿರ್ಧರಿಸಿದೆ.

ಮಾರುಕಟ್ಟೆ ಮಧ್ಯಪ್ರವೇಶಕ್ಕೆ ದರ ನಿಗದಿ ಮಾಡುವಂತೆ ಅಭಿವೃದ್ಧಿ ಆಯುಕ್ತರಾದ ಲತಾ ಕೃಷ್ಣರಾವ್‌ ಅವರು ಕೇಂದ್ರ ಕೃಷಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈರುಳ್ಳಿ ಬೆಳೆಗೆ ಆಗುವ ವೆಚ್ಚ ಗಮನಿಸಿ ಪ್ರತಿ ಕೆ.ಜಿ.ಗೆ ₹10.94 ನಿಗದಿ ಮಾಡುವಂತೆ ರಾಜ್ಯ ಸಲಹೆ ಮಾಡಿತ್ತು.  ಆದರೆ, ₹ 6 ನಿಗದಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಪ್ರತಿ ಕೆ.ಜಿ.ಗೆ ಕನಿಷ್ಠ ₹8 ನಿಗದಿ ಮಾಡುವಂತೆ ಮನವಿ ಮಾಡಿದೆ.

ಇಡೀ ದೇಶದಲ್ಲಿರುವ ಈರುಳ್ಳಿ ಬೆಲೆ ಗಮನಿಸಿ ಕೇಂದ್ರ ಸರ್ಕಾರವು ಪ್ರತಿ ಕೆ.ಜಿಗೆ ₹8 ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಶೇ 25ರಷ್ಟು ಮಾತ್ರ ಸಹಾಯಧನ
ಎಪಿಎಂಸಿ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಂದ ಈರುಳ್ಳಿ ಖರೀದಿ ಮಾಡಿ ಅನಂತರ ರೈತರಿಗೆ ಹಣ ಪಾವತಿ ಮಾಡುತ್ತದೆ.  ಉದಾಹರಣೆಗೆ ₹100 ಮೊತ್ತದ ಖರೀದಿಗೆ ಕೇಂದ್ರ ಸರ್ಕಾರ ಶೇ 12.5 ಮತ್ತು ರಾಜ್ಯ ಸರ್ಕಾರ ಶೇ 12.5 ಸಹಾಯಧನ ನೀಡುತ್ತದೆ. ಉಳಿದ ಶೇ 75ರಷ್ಟು ಮೊತ್ತವನ್ನು ಈರುಳ್ಳಿ ಮಾರಾಟದಿಂದ ಸಂಗ್ರಹಿಸಬೇಕು.

ದರ ಕುಸಿಯಲು ಕಾರಣವೇನು?: ಮಹಾರಾಷ್ಟ್ರದಲ್ಲಿ ಹಿಂಗಾರು ಅವಧಿಯಲ್ಲಿ ಬೆಳೆದ ಹೆಚ್ಚಿನ ಈರುಳ್ಳಿ ರಾಜ್ಯಕ್ಕೆ ಆಗಮಿಸಿದೆ. ಅಲ್ಲದೆ, ಈ ವೇಳೆಗಾಗಲೇ ರಾಜ್ಯದ ಈರುಳ್ಳಿ ತಮಿಳುನಾಡಿಗೆ ರಫ್ತು ಆಗಬೇಕಿತ್ತು. ಆದರೆ, ಕಾವೇರಿ ಗಲಾಟೆಯಿಂದಾಗಿ ಕರ್ನಾಟಕ–ತಮಿಳುನಾಡು ಮಧ್ಯೆ ಅನೇಕ ದಿನಗಳವರೆಗೆ ಸರಕು ಸಾಗಣೆ ವಾಹನಗಳ ಸಂಚಾರ ಇರಲಿಲ್ಲ. ಇದು ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಅಂಕಿ ಅಂಶ

* 23 ಲಕ್ಷ ಟನ್‌ ಈರುಳ್ಳಿ ಉತ್ಪಾದನೆ ನಿರೀಕ್ಷೆ

* 1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ

* 1.37 ಲಕ್ಷ ಈರುಳ್ಳಿ ಬೆಳೆಗಾರರು

* ಈರುಳ್ಳಿ ಖರೀದಿ ಕೇಂದ್ರ ಆರಂಭದ ಬಗ್ಗೆ ಕೇಂದ್ರದ ಜೊತೆ ಚರ್ಚಿಸಲಾಗುತ್ತಿದೆ. ಮುಂದಿನ ವಾರ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾದ್ಯತೆ ಇದೆ.

- ಪಿ.ಸಿ. ರೇ , ತೋಟಗಾರಿಕೆ ಇಲಾಖೆ ನಿರ್ದೇಶಕ

* ಈರುಳ್ಳಿಗೆ ಖರೀದಿ ಕೇಂದ್ರ ಆರಂಭಿಸುವಂತೆ 15 ದಿನಗಳ ಹಿಂದೆಯೇ ಕೃಷಿ ಸಚಿವರಿಗೆ ಸಲಹೆ ನೀಡಿದ್ದೇವೆ. ಆದರೂ ನಿರ್ಲಕ್ಷ್ಯ ತೋರಲಾಗಿದೆ. ಕೂಡಲೇ ಬೆಲೆ ನಿಗದಿ ಮಾಡಿ ಕೇಂದ್ರಗಳನ್ನು ಆರಂಭಿಸಬೇಕು.

-ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.