ADVERTISEMENT

ಉತ್ತರ ಕರ್ನಾಟಕ ಕಡೆಗಣಿಸಿಲ್ಲ: ಸಿದ್ದರಾಮಯ್ಯ

ದಕ್ಷಿಣ ಭಾಗಕ್ಕಿಂತ ಹೆಚ್ಚು ಅನುದಾನ: ವಿಧಾನಸಭೆ ಕಲಾಪದಲ್ಲಿ ಅಂಕಿ – ಅಂಶ ಬಿಚ್ಚಿಟ್ಟ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಾತನಾಡಿದರು. –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಾತನಾಡಿದರು. –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌   

ಬೆಳಗಾವಿ: ‘ನಮ್ಮ ಸರ್ಕಾರ ಉತ್ತರ ಕರ್ನಾಟಕದ ಜನರ ಜೊತೆ ಇದ್ದು, ಅನುದಾನ ಹಂಚಿಕೆಯಲ್ಲಿ ಈ ಭಾಗಕ್ಕೆ ಹೆಚ್ಚಿನ ಪಾಲು ನೀಡಿದ್ದೇವೆ. ಉತ್ತರ, ದಕ್ಷಿಣ ತಾರತಮ್ಯವಿಲ್ಲದ ಸಮಗ್ರ ಕರ್ನಾಟಕ ಅಭಿವೃದ್ಧಿ ನಮ್ಮ ಸಂಕಲ್ಪ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ, ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ಮಹದಾಯಿ ವಿವಾದ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ನಾಲ್ಕೂವರೆ ವರ್ಷಗಳಲ್ಲಿ ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಅನುದಾನದ ವಿವರಗಳನ್ನು ಅಂಕಿಅಂಶಗಳ ಸಹಿತ ಸದನದ ಮುಂದೆ ಇಟ್ಟರು.

‘ನನಗೆ ಜ್ವರ ಇದೆ. ಹಿಂದೆಂದೂ ಉತ್ತರ ನೀಡುವಾಗ ನೀರು ಕುಡಿದಿರಲಿಲ್ಲ. ಹೀಗಾಗಿ ಪ್ರತಿಯೊಂದು ಅಂಕಿಅಂಶ ನೀಡಲು ಹೋಗುವುದಿಲ್ಲ’ ಎಂದು ಹೇಳಿದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸುಮಾರು 2ಗಂಟೆ 40 ನಿಮಿಷ ಮಾತನಾಡಿದರು.

ADVERTISEMENT

‘ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂಬುದು ನಮ್ಮ ಸರ್ಕಾರಕ್ಕೆ ಅನ್ವಯವಾಗುವುದಿಲ್ಲ. ಈ ಭಾಗದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ನಮ್ಮ ಸರ್ಕಾರದ ಅಭಿವೃದ್ಧಿಯ ಕೆಲಸಗಳನ್ನು ನೋಡಿದ್ದಾರೆ’ ಎಂದರು.

‘ದಕ್ಷಿಣ ಕರ್ನಾಟಕ 17 ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ್ದೇವೆ. ಯೋಜನೆಗಳ ಪೂರ್ಣ ಫಲ ಈ ಭಾಗಕ್ಕೆ ಸಿಕ್ಕಿದೆ’ ಎಂದು ಹೇಳಿದ ಸಿದ್ದರಾಮಯ್ಯ, ‘ಏಯ್ ಕತ್ತಿ (ಬಿಜೆಪಿಯ ಉಮೇಶ ಕತ್ತಿ) ಇನ್ನು ಮುಂದೆ ಉತ್ತರ ಕರ್ನಾಟಕ ಬೇರೆ ರಾಜ್ಯ ಎಂದು ಹೇಳುವುದಕ್ಕೆ ಹೋಗಬೇಡ. ಕರ್ನಾಟಕದ ಏಕೀಕರಣಕ್ಕೆ ಹೋರಾಟ ನಡೆಸಿದವರು ಈ ಭಾಗದಲ್ಲಿ ಜಾಸ್ತಿ ಇದ್ದಾರೆ. 1961ರಲ್ಲಿ ಹುಟ್ಟಿದ ನಿನಗೆ ಏಕೀಕರಣದ ಹೋರಾಟ ಗೊತ್ತಿಲ್ಲ’ ಎಂದೂ ಕುಟುಕಿದರು.

‘ಉತ್ತರ ಕರ್ನಾಟಕ ನಾವು ಹೆಚ್ಚು ನ್ಯಾಯ ಒದಗಿಸಿದ್ದು, ಎಲ್ಲಿಂದ ಪ್ರತ್ಯೇಕ ರಾಜ್ಯ ಕೇಳುತ್ತೀರಿ. ಅದೇನಿದ್ದರೂ ಕೇವಲ ಪ್ರಚಾರ ಹಾಗೂ ರಾಜಕೀಯ ಲಾಭಕ್ಕೆ ಮಾಡುತ್ತಿರುವ ಕೆಲಸ ಅಷ್ಟೆ. ಅದನ್ನು ಬಿಟ್ಟುಬಿಡಿ’ ಎಂದೂ ಅವರು ಸಲಹೆ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹13,184 ಕೋಟಿ ಒದಗಿಸಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹23,724 ಕೋಟಿ ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹೋರಾಟವೇ ಇಲ್ಲ: ‘2013ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಜನರು ಆಕ್ರೋಶ ವ್ಯಕ್ತಪಡಿಸಿ, ಧರಣಿ ನಡೆಸಿದ್ದರು. ಈ ಬಾರಿ ಅಂತಹ ಯಾವುದೇ ಪ್ರತಿಭಟನೆ ಇಲ್ಲ. ನಮ್ಮ ಸರ್ಕಾರದ ಕಾರ್ಯಕ್ರಮ ಜನರಿಗೆ ಮೆಚ್ಚುಗೆಯಾಗಿದೆ, ಉತ್ತರ ಕರ್ನಾಟಕದ ಜನರಿಗೆ ತೃಪ್ತಿ ತಂದಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ’ ಎಂದು ಹೇಳಿದರು.

ಹೈ–ಕ ಅಭಿವೃದ್ಧಿಗೆ ಆದ್ಯತೆ: ‘ನಮ್ಮ ಸರ್ಕಾರ ಬಂದ ಮೇಲೆ ಹೈದರಬಾದ್ ಕರ್ನಾಟಕದ(ಹೈ–ಕ) ಅಭಿವೃದ್ಧಿಗೆ ವೇಗ ಸಿಕ್ಕಿದೆ. ಹಿಂದೆ ಆರು ಜಿಲ್ಲೆಗಳಿಗೆ ಸೇರಿ ₹50ರಿಂದ ₹60 ಕೋಟಿ ಬರುತ್ತಿತ್ತು. ಈಗ ವರ್ಷಕ್ಕೆ ₹1,500 ಕೋಟಿ ನೀಡುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ₹3,750 ಕೋಟಿ ಹಂಚಿಕೆ ಮಾಡಿದ್ದು, ₹2,330 ಕೋಟಿ ಬಿಡುಗಡೆಯಾಗಿದೆ. ₹1,700 ಕೋಟಿ ಖರ್ಚಾಗಿದೆ’ ಎಂದು ಸಿದ್ದರಾಮಯ್ಯ ವಿವರಿಸಿದರು.

ಈ ಭಾಗದಲ್ಲಿ 371 ಜೆ ಅನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಿದ ಮೇಲೆ ಅವಕಾಶಗಳು ಹೆಚ್ಚಿದೆ. 2010ರಿಂದ 2013ರ ಅವಧಿಯಲ್ಲಿ 1225 ವೈದ್ಯ ಸೀಟುಗಳು ಸಿಕ್ಕಿದ್ದರೆ, 2014–2017ರ ಅವಧಿಯಲ್ಲಿ 3,176 ಸೀಟುಗಳು ಲಭಿಸಿವೆ. ಇದೇ ಅವಧಿಯಲ್ಲಿ ದಂತ ವೈದ್ಯಕೀಯ ಸೀಟುಗಳು 285ರಿಂದ 689ಕ್ಕೆ ಹೆಚ್ಚಳವಾಗಿದೆ ಎಂದು ಹೇಳಿದರು.

ಮೌಲ್ಯಮಾಪನ: ಡಾ.ಡಿ.ಎಂ. ನಂಜುಂಡಪ್ಪ ವರದಿ ಶಿಫಾರಸಿನ ಅನ್ವಯ ಬಿಡುಗಡೆಯಾದ ಅನುದಾನ ಹಾಗೂ ಪ್ರಗತಿಯ ಪರಿಶೀಲನೆ ನಡೆಸಿ ಮುಂದಿನ ವರ್ಷದ ಫೆಬ್ರುವರಿಯೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ವರದಿ ಆಧರಿಸಿ, ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು. 

114 ಹಿಂದುಳಿದ ತಾಲ್ಲೂಕುಗಳಿವೆ ಎಂದು ಗುರುತಿಸಿದ್ದ ನಂಜುಂಡಪ್ಪ  ಮುಂದಿನ ಎಂಟು ವರ್ಷಗಳಲ್ಲಿ ₹31,000 ಕೋಟಿ ನೀಡಬೇಕು ಎಂದು ಶಿಫಾರಸು ಮಾಡಿದ್ದರು. ವಿವಿಧ ಯೋಜನೆಗಳಡಿ ₹15,000 ಕೋಟಿ ಹಾಗೂ ವಿಶೇಷ ಅನುದಾನವಾಗಿ ಪ್ರತಿವರ್ಷ ₹2,000 ಕೋಟಿ ಕೊಡುವಂತೆ ಸೂಚಿಸಿದ್ದರು. 2008 ರಲ್ಲಿ ಶಿಫಾರಸು ಜಾರಿ ಮಾಡಲಾಗಿದ್ದು, 2015ರವರೆಗೆ 20,138 ಕೋಟಿ ಒದಗಿಸಲಾಗಿದೆ. 2015ರಿಂದ ಈಚೆಗೆ ಪ್ರತಿ ವರ್ಷ ₹3,000 ಕೋಟಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಉ.ಕ. ಚರ್ಚೆ: ಪಾಲ್ಗೊಂಡವರು ನಾಲ್ಕು ಜನ!
ಉತ್ತರ ಕರ್ನಾಟಕ, ನಂಜುಂಡಪ್ಪ ವರದಿ, ಮಹದಾಯಿ ವಿವಾದ ಕುರಿತು ವಿಧಾನಸಭೆಯಲ್ಲಿ ಜಗದೀಶ ಶೆಟ್ಟರ್, ವೈ.ಎಸ್‌.ವಿ. ದತ್ತ, ಎ.ಎಸ್. ಪಾಟೀಲ ನಡಹಳ್ಳಿ, ಎನ್.ಎಚ್. ಕೋನರಡ್ಡಿ ಸೇರಿ ಒಟ್ಟು ಐದೂಕಾಲು ಗಂಟೆ ಮಾತನಾಡಿದ್ದಾರೆ.

‘2014ರಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಈಗ ಕೇವಲ ನಾಲ್ಕು ಜನ ಮಾತನಾಡಿದ್ದಾರೆ. ಹೆಚ್ಚಿನ ಜನ ಮಾತನಾಡಿ ಬೆಳಕು ಚೆಲ್ಲಿದ್ದರೆ, ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತಿತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಉತ್ತರದ ವೇಳೆ ನಾಯಕರ ಗೈರು
ಮುಖ್ಯಮಂತ್ರಿ ಉತ್ತರ ನೀಡಲು ಆರಂಭಿಸಿದಾಗ ವಿರೋಧ ಪಕ್ಷದ ಸಾಲಿನಲ್ಲಿ ಬೆರಳೆಣಿಕೆಯ ಸದಸ್ಯರು ಇದ್ದರು. ನಾಯಕರಾದ ಜಗದೀಶ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ ಮಧ್ಯಾಹ್ನದ ಬಳಿಕ ಸದನಕ್ಕೆ ಬರಲಿಲ್ಲ.

ಸರ್ಕಾರ ಉತ್ತರ ನೀಡಿದ ಬಳಿಕ ವಿರೋಧ ಪಕ್ಷದ ಸದಸ್ಯರು ಸಾಮಾನ್ಯವಾಗಿ ಸ್ಪಷ್ಟನೆ ಕೇಳುವುದು, ಉತ್ತರ ತೃಪ್ತಿ ತಂದಿಲ್ಲ ಎಂದು ಸಭಾತ್ಯಾಗ ಮಾಡುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಆದರೆ, ಗುರುವಾರ ವಿರೋಧ ಪಕ್ಷದ ಸದಸ್ಯರು ಚಕಾರ ಎತ್ತಲಿಲ್ಲ.

ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯ: ಸಿ.ಎಂ
ಬೆಳಗಾವಿ ಜಿಲ್ಲೆಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಲೇಬೇಕಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಚರ್ಚೆಯ ವೇಳೆ ಬಿಜೆಪಿಯ ಉಮೇಶ ಕತ್ತಿ, ‘ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸಲಿಲ್ಲ. ವೈದ್ಯ ಕಾಲೇಜು ನೀಡಿ’ ಎಂದು ಬೇಡಿಕೆ ಮಂಡಿಸಿದರು.

‘ಜೆ.ಎಚ್‌.ಪಟೇಲರು ಜಿಲ್ಲಾ ಪುನರ್‌ ವಿಂಗಡಣೆ ಮಾಡುವಾಗ ವಿರೋಧಿಸಿದ್ದು ನೀನೇ ತಾನೆ. ಗೋಕಾಕ ಅಥವಾ ಚಿಕ್ಕೋಡಿಯಲ್ಲಿ ಯಾವುದನ್ನು ಜಿಲ್ಲೆ ಮಾಡಬೇಕು ಎಂಬ ಬಗ್ಗೆ ಬೆಳಗಾವಿಯ ಶಾಸಕರು ಒಮ್ಮತಕ್ಕೆ ಬರಲಿಲ್ಲ. ಗೊಂದಲವೇ ಬೇಡ ಎಂದು ಪಟೇಲರು ಸುಮ್ಮನಾದರು. ಜಿಲ್ಲೆಯನ್ನು ವಿಭಜನೆ ಮಾಡಲೇಬೇಕು. ಈ ಭಾಗದ ನಾಯಕರ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

ನೈಸ್‌: ಸರ್ಕಾರದ ಉತ್ತರಕ್ಕೆ ಜೆಡಿಎಸ್‌ ಒತ್ತಾಯ
ಬೆಳಗಾವಿ:
ನೈಸ್‌ ಸದನ ಸಮಿತಿ ವರದಿ ಕುರಿತ ಚರ್ಚೆಯ ಬಳಿಕ ಉತ್ತರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯರು ವಿಧಾನಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲು ಮುಂದಾದ ಪ್ರಸಂಗ ಗುರುವಾರ ಸಂಜೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಶಿವಲಿಂಗೇಗೌಡ, ‘ನೈಸ್ ಯೋಜನೆಯಲ್ಲಿ ಕೋಟ್ಯಂತರ ಮೊತ್ತದ ಅವ್ಯವಹಾರ ನಡೆದಿದೆ. ಈ ಬಗ್ಗೆ ಸದನ ಸಮಿತಿ ವರ್ಷದ ಹಿಂದೆ ವರದಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿದ್ದ ಸಚಿವ ಎಚ್‌.ಕೆ. ಪಾಟೀಲ, ‘ಶುಕ್ರವಾರ ಉತ್ತರ ನೀಡಲಾಗುವುದು’ ಎಂದು ಹೇಳಿದ್ದರಿಂದ ಜೆಡಿಎಸ್‌ ಸದಸ್ಯರು ಧರಣಿ ಕೈಬಿಟ್ಟರು.

ಅವಕಾಶ ನಿರಾಕರಣೆ: ‘ನೈಸ್‌ ಸದನ ಸಮಿತಿ ವರದಿ ಕುರಿತು ಚರ್ಚಿಸಲು ಕಾಲಾವಕಾಶ ನೀಡಬೇಕು. ಹೀಗಾಗಿ ನಿಲುವಳಿ ಮಂಡಿಸಲು ಅವಕಾಶ ಕಲ್ಪಿಸಬೇಕು’ ಎಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ವಿಧಾನ ಪರಿಷತ್‌ನಲ್ಲಿ ಒತ್ತಾಯಿಸಿದರು.

ರಾಜ್ಯದಲ್ಲಿ ಸರ್ಕಾರದ ಪರ ಅಲೆ– ಸಿದ್ದರಾಮಯ್ಯ
ಬೆಂಗಳೂರು:
‘ರಾಜ್ಯದಲ್ಲಿ ನಮ್ಮ ಸರ್ಕಾರದ ಪರ ಅಲೆ ಇದೆ. ಎಲ್ಲೂ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿಯವರು ಮಿಷನ್‌ 150 ಕನಸು ಕಾಣುತ್ತಿದ್ದಾರೆ. ಆದರೆ, ಅದು ಬರೀ ಮಿಷನ್‌ 50 ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ, ‘ಸಾಮಾನ್ಯವಾಗಿ ಸರ್ಕಾರ ಐದು ವರ್ಷ ಪೂರ್ಣಗೊಳಿಸುವ ಹಂತದಲ್ಲಿ ಆಡಳಿತ ವಿರೋಧಿ ಅಲೆ ಇರುತ್ತದೆ. ಆ ತರಹದ ಪರಿಸ್ಥಿತಿ ಎಲ್ಲೂ ಇಲ್ಲ. ಸರ್ಕಾರದ ‍ಪರ ಅಲೆ ಇದೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ’ ಎಂದರು.

‘ಇದರಿಂದ ಹತಾಶರಾಗಿರುವ ಬಿಜೆಪಿ ನಾಯಕರು ನಮ್ಮ ವಿರುದ್ಧ ಆಧಾರರಹಿತ ಆರೋಪ, ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಜನ ನಮ್ಮ ಪರವಾಗಿರುವುದು ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಸಾಬೀತಾಗಿದೆ. ಆ ಚುನಾವಣೆಯನ್ನು ಸಿದ್ದರಾಮಯ್ಯ ವರ್ಸಸ್‌ ಯಡಿಯೂರಪ್ಪ; ಸಿದ್ದರಾಮಯ್ಯ ವರ್ಸಸ್ ಶ್ರೀನಿವಾಸ ಪ್ರಸಾದ್‌ ನಡುವಿನ ಹೋರಾಟವೆಂದೇ ವ್ಯಾಖ್ಯಾನಿಸಿದ್ದರು. ಇದು ನಾನು ಹೇಳಿದ್ದಲ್ಲ, ಬಿಜೆಪಿಯವರೇ ಹೇಳಿದ್ದು’ ಎಂದು ಮುಖ್ಯಮಂತ್ರಿ ನೆನಪು ಮಾಡಿಕೊಂಡರು.

’ಬಿಜೆಪಿಯವರ ಆರ್ಭಟ ನೋಡಿ ನನ‌ಗೂ ಸ್ವಲ್ಪ ಭಯವಿತ್ತು. ನಾವು ನುಡಿದಂತೆ ನಡೆದಿದ್ದೇವೆ. ಹೇಳಿದ ಕೆಲಸ ಮಾಡಿದ್ದೇವೆ. ನಮಗೆ ಕೂಲಿ ಕೊಡಿ, ಗೆಯ್ಯೊ ಎತ್ತಿಗೆ ಮೇವು ಹಾಕಿ ಎಂದು ಮನವಿ ಮಾಡಿದೆವು. ನಮ್ಮ ಮಾತು ನಂಬಿ ಜನ ನಮ್ಮ ಕೈ ಹಿಡಿದರು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ನಂಜನಗೂಡು, ಗುಂಡ್ಲುಪೇಟೆ ಚುನಾವಣೆ ಮತದಾನ ಮುಗಿದ ಬಳಿಕ ನಾವು ಗೆದ್ದಾಗಿದೆ. ವಿಜಯೋತ್ಸವ ಆಚರಿಸುವುದಷ್ಟೇ ಬಾಕಿ ಇದೆ ಎಂದು ಬಿಜೆಪಿಯವರು ಹೇಳಿದ್ದರು.  ಅವರ ನಿರೀಕ್ಷೆ ಗಾಳಿಯಲ್ಲಿ ತೇಲುವ ಗಾಳಿಪಟವಾಯಿತು’ ಎಂದು ಮುಖ್ಯಮಂತ್ರಿ ಲೇವಡಿ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲೂ ನಮಗೆ ಆಶೀರ್ವಾದ ಮಾಡುತ್ತಾರೆಂದು ಅಂದುಕೊಂಡಿದ್ದೇವೆ. ನೀವೂ ಹಾಗೆ ಭಾವಿಸಿದ್ದರೆ ಸಂತೋಷ’ ಎಂದು ಮುಖ್ಯಮಂತ್ರಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.