ADVERTISEMENT

ಎಂಟು ವಿದ್ಯಾರ್ಥಿನಿಯರ ಸಾವು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 19:36 IST
Last Updated 30 ಏಪ್ರಿಲ್ 2016, 19:36 IST
ಹೆಗ್ಗೆರೆ ಬಳಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕ್ರೂಸರ್‌ ವಾಹನ.
ಹೆಗ್ಗೆರೆ ಬಳಿ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಕ್ರೂಸರ್‌ ವಾಹನ.   

ಚಳ್ಳಕೆರೆ (ಚಿತ್ರದುರ್ಗ): ತಾಲ್ಲೂಕಿನ ಸಾಣೀಕೆರೆ ಸಮೀಪದ ಹೆಗ್ಗೆರೆ ಬಳಿ ಶನಿವಾರ ಮುಂಜಾನೆ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌, ಕ್ರೂಸರ್‌ ಹಾಗೂ ಖಾಸಗಿ ಬಸ್‌ ನಡುವಿನ ಭೀಕರ ಅಪಘಾತದಲ್ಲಿ, ಕ್ರೂಸರ್‌ನಲ್ಲಿದ್ದ ಎಂಟು ವಿದ್ಯಾರ್ಥಿನಿಯರು ಮತ್ತು ಚಾಲಕ ಸಾವನ್ನಪ್ಪಿದ್ದಾರೆ.

ಮೃತರು ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿನಿಯರಾಗಿದ್ದು, ಬಿ.ಎಸ್‌್ಸಿ, ಬಿ.ಕಾಂ ಓದುತ್ತಿದ್ದರು. ಕಂಪ್ಯೂಟರ್‌ ಶಿಕ್ಷಕ ಪ್ರದೀಪ್‌ ಎಂಬುವವರ ನೇತೃತ್ವದಲ್ಲಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ನೌಕರಿಗಾಗಿ ಸಂದರ್ಶನಕ್ಕೆ ಹಾಜರಾಗಿ ಊರಿಗೆ ವಾಪಸ್‌ ಹೋಗುತ್ತಿದ್ದರು.

15 ಜನರಿದ್ದ ಈ ಕ್ರೂಸರ್‌, ಖಾಸಗಿ ಬಸ್ಸನ್ನು ಹಿಂದಿಕ್ಕಲು ಹೋಗಿ ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಉರುಳಿದೆ. ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್‌ ಸಹ ಕ್ರೂಸರ್‌ಗೆ ಡಿಕ್ಕಿ ಹೊಡೆದು ಈ ದುರಂತ ನಡೆಯಿತು.

ಮೃತರನ್ನು ಶಾಂತಿ (20), ಸುಧಾ (21), ಹರ್ಷಿತಾ (20), ಸರಿತಾ (22), ಜಯಶ್ರೀ (21), ಭಾರತಿ (20), ಶ್ರುತಿ (20)  ಕಾವ್ಯಾ (21) ಹಾಗೂ ಚಾಲಕ ಚಂದ್ರೇಗೌಡ (25) ಎಂದು ಗುರುತಿಸಲಾಗಿದೆ.  ಜ್ಯೋತಿ (20) ಹಾಗೂ ಪ್ರದೀಪ್‌ ತೀವ್ರ ಗಾಯಗೊಂಡಿದ್ದಾರೆ.

₹ 1 ಲಕ್ಷ ಪರಿಹಾರ: ಅಪಘಾತದಲ್ಲಿ ಮೃತಪಟ್ಟವರ  ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.