ADVERTISEMENT

ಎಚ್ಚರಿಕೆ ಹೊರತಾಗಿಯೂ ‘ಜೈ ಮಹಾರಾಷ್ಟ್ರ’ ಘೋಷಣೆ

ಮರಾಠಿಯಲ್ಲಿ ದಾಖಲೆ ಒದಗಿಸುವಂತೆ ಆಗ್ರಹಿಸಿ ಮೆರವಣಿಗೆ; 20 ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಗುರುವಾರ ಬೆಳಗಾವಿಯಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮರಾಠಿಗರು
ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಗುರುವಾರ ಬೆಳಗಾವಿಯಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮರಾಠಿಗರು   
ಬೆಳಗಾವಿ: ಸರ್ಕಾರಿ ದಾಖಲೆಗಳು, ಪ್ರಮಾಣ ಪತ್ರಗಳನ್ನು ಮರಾಠಿಯಲ್ಲಿ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ವತಿಯಿಂದ ಗುರುವಾರ ನಗರದಲ್ಲಿ ಆಯೋಜಿಸಿದ್ದ ಮೆರವಣಿಗೆಯುದ್ದಕ್ಕೂ ‘ಜೈ ಮಹಾರಾಷ್ಟ್ರ’ ಘೋಷಣೆ ಮೊಳಗಿತು.
 
ಧರ್ಮವೀರ ಸಂಭಾಜಿ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
 
ಎಂಇಎಸ್‌ ಬೆಂಬಲಿತ ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ, ನಗರಪಾಲಿಕೆ ಸದಸ್ಯೆ ಸರಿತಾ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ ಭಾಗವಹಿಸಿದ್ದರು.
 
ಎಂಇಎಸ್‌ ಬೆಂಬಲಿತ ಮೇಯರ್‌ ಸಂಜೋತಾ ಬಾಂದೇಕರ ಹಾಗೂ ಉಪಮೇಯರ್‌ ನಾಗೇಶ ಮಂಡೋಳಕರ  ಮೆರವಣಿಗೆಯಿಂದ ದೂರ ಉಳಿದಿದ್ದರು.
ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಬರುತ್ತಿದ್ದಂತೆಯೇ ಪ್ರತಿಭಟನಾಕಾರರು ಸಾಮೂಹಿಕವಾಗಿ ‘ಜೈ ಮಹಾರಾಷ್ಟ್ರ’ ಎಂದು ಒಕ್ಕೊರಲಿನಿಂದ ಘೋಷಣೆ ಕೂಗಿ, ಜಿಲ್ಲಾಧಿಕಾರಿ ಹಿಂದಿಯಲ್ಲಿ ಮಾತನಾಡಬೇಕೆಂದು ಪಟ್ಟು ಹಿಡಿದರು. 
 
ಆದರೆ ಕನ್ನಡದಲ್ಲೇ ಮಾತನಾಡಿದ ಜಯರಾಮ್‌, ‘ಮನವಿ ಸ್ವೀಕರಿಸಿದ್ದೇನೆ, ಅದನ್ನು ಮುಖ್ಯಮಂತ್ರಿ ಕಚೇರಿಗೆ ರವಾನಿಸಲಾಗುವುದು’ ಎಂದರು.
 
ವಾಪಸ್ಸಾದ ಮಹಾರಾಷ್ಟ್ರ ಸಚಿವ:  ಮೆರವಣಿಗೆಯಲ್ಲಿ ಭಾಗವಹಿಸಲು ಬೆಂಬಲಿಗರೊಂದಿಗೆ ಬರುತ್ತಿದ್ದ ಮಹಾರಾಷ್ಟ್ರದ ಸಾರಿಗೆ ಸಚಿವ ದಿವಾಕರ ರಾವುತೆ ಅವರನ್ನು ಪೊಲೀಸರು ರಾಜ್ಯದ ಗಡಿ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಡೆದು ವಾಪಸ್‌ ಕಳುಹಿಸಿದರು.
 
‘ಜಿಲ್ಲೆಗೆ ಅವರ ಪ್ರವೇಶ ನಿರ್ಬಂಧಿಸಿ ಹೊರಡಿಸಿದ್ದ ಆದೇಶ ಪತ್ರವನ್ನು ಪೊಲೀಸರು ತೋರಿಸಿ, ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಾನೂನನ್ನು ಗೌರವಿಸಿ ಸಚಿವರು ವಾಪಸ್ಸಾದರು’ ಎಂದು ಜಯರಾಮ್‌ ತಿಳಿಸಿದರು.
 
ದೂರು ದಾಖಲು: ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 20 ಮಂದಿ ವಿರುದ್ಧ ಇಲ್ಲಿನ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
****
ಹೊರಹಾಕಲು ವಾಟಾಳ್ ಆಗ್ರಹ
ಚಾಮರಾಜನಗರ:
‘ಪುಂಡಾಟಿಕೆ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಇಲ್ಲವೆ ರಾಜ್ಯದಿಂದ ಹೊರಹಾಕಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಇಲ್ಲಿ ಗುರುವಾರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.