ADVERTISEMENT

ಎಸ್‌ಐ ಬಂಡೆಗೆ ಹೊಕ್ಕಿದ್ದು ಪೊಲೀಸ್‌ ಗುಂಡು

ಸರ್ವಿಸ್‌ ಪಿಸ್ತೂಲ್‌ ಕಸಿದುಕೊಂಡು ಗುಂಡು ಹಾರಿಸಿದ್ದ ಮುನ್ನಾ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

ಬೆಂಗಳೂರು: ಪೊಲೀಸ್‌ ಇಲಾಖೆಗೆ ಸೇರಿದ 9 ಎಂ.ಎಂ ಸರ್ವಿಸ್‌ ಪಿಸ್ತೂಲ್‌­ನಿಂದ ಹಾರಿದ ಗುಂಡಿನಿಂದಲೇ (ಬುಲೆಟ್‌) ಗುಲ್ಬರ್ಗದ ಸ್ಟೇಷನ್‌ ಬಜಾರ್‌ ಠಾಣೆ ಎಸ್‌ಐ ಮಲ್ಲಿ­ಕಾರ್ಜುನ ಬಂಡೆ ಅವರ ಸಾವು ಸಂಭವಿಸಿದೆ ಎಂಬ ಸಂಗತಿ ಸಿಐಡಿ ತನಿಖೆಯಿಂದ ಬಯಲಾಗಿದೆ.

‘ರೌಡಿ ಮುನ್ನಾ ದರ್ಬಾಜ್‌ ವಿರುದ್ಧದ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸ್‌ ತಂಡದಲ್ಲಿದ್ದ ಎಸ್‌ಐ ಮುರಳಿ ಅವರ ಸರ್ವಿಸ್‌ ಪಿಸ್ತೂಲ್‌ಗೆ ಸೇರಿದ ಗುಂಡು ಬಂಡೆ ಅವರಿಗೆ ಹೊಕ್ಕಿ­ರುವುದು ತನಿಖೆಯಿಂದ ಗೊತ್ತಾಗಿದೆ. ಘಟನೆ ವೇಳೆ ಮುನ್ನಾ, ಮುರಳಿ ಅವರ ಪಿಸ್ತೂಲ್‌ ಕಸಿದುಕೊಂಡು ಬಂಡೆ ಅವರ ಮೇಲೆ ಗುಂಡು ಹಾರಿಸಿದ್ದ’ ಎಂದು ಸಿಐಡಿ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.


‘ಈ ಸಂಗತಿಯನ್ನು ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳುವ ಉದ್ದೇಶದಿಂದ ರಕ್ತದ ಕಲೆ ಇರುವ ಆ ಗುಂಡು ಮತ್ತು ಬಂಡೆ ಅವರ ರಕ್ತ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ನಾಡ ಪಿಸ್ತೂಲ್‌, ಹತ್ತಕ್ಕೂ ಹೆಚ್ಚು ಗುಂಡು­ಗಳು, ಸರ್ವಿಸ್‌ ಪಿಸ್ತೂಲ್‌ ಮತ್ತಿತರ ಸಾಂದರ್ಭಿಕ ಸಾಕ್ಷ್ಯಗಳನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ’ ಎಂದು ಪ್ರಕರಣದ ತನಿಖಾಧಿಕಾರಿಗಳು ಹೇಳಿದ್ದಾರೆ.

‘ಇಲಾಖೆಯಲ್ಲಿನ ಎಎಸ್‌ಐ ದರ್ಜೆ­ಗಿಂತ ಮೇಲಿನ ಹಂತದ ಸಿಬ್ಬಂದಿ ಬಳಿ ಈ ಹಿಂದೆ ಪಾಯಿಂಟ್‌ 38 ಸರ್ವಿಸ್‌ ರಿವಾಲ್ವರ್‌ಗಳು ಇದ್ದವು. ಕೆಲ ವರ್ಷಗಳ ಹಿಂದೆ ಆ ರಿವಾಲ್ವರ್‌ಗಳನ್ನು ಹಿಂಪ­ಡೆದು 9 ಎಂ.ಎಂ ಪಿಸ್ತೂಲ್‌­ಗಳನ್ನು ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಕ್ಕಿದ್ದು ಪೊಲೀಸ್‌ ಗುಂಡು: ‘ಪೊಲೀಸರ ಸರ್ವಿಸ್‌ ಪಿಸ್ತೂಲ್‌ಗೆ ಸೇರಿದ ಗುಂಡು ಹೊಕ್ಕಿಯೇ ಬಂಡೆ ಅವರ ಸಾವು ಸಂಭವಿಸಿದೆ. ಗುಂಡು ಸಾಗಿದ ವೇಗ ಮತ್ತು ದಿಕ್ಕು, ಸಾಂದ­ರ್ಭಿಕ ಸಾಕ್ಷ್ಯಗಳ ಪರಿಶೀಲನೆ ಹಾಗೂ ಕಾರ್ಯಾಚರಣೆಗೆ ಹೋಗಿದ್ದ ಸಿಬ್ಬಂದಿಯ ವಿಚಾರಣೆಯಿಂದ ಈ ಸಂಗತಿ ದೃಢಪಟ್ಟಿದೆ. ಸಾಮಾನ್ಯವಾಗಿ ನಾಡ ಪಿಸ್ತೂಲ್‌ನಿಂದ ಸಿಡಿಯುವ ಗುಂಡು ದೇಹವನ್ನು ಛೇದಿಸಿಕೊಂಡು ಹೊರ­ಹೋಗುವ ಸಾಧ್ಯತೆ ಕಡಿಮೆ’  ಎಂದು ಎಫ್‌ಎಸ್‌ಎಲ್‌ನ ಮದ್ದು­ಗುಂಡು (ಬ್ಯಾಲಿಸ್ಟಿಕ್‌) ತಜ್ಞರು ಹೇಳಿದ್ದಾರೆ.

ಚೋಕ್‌ನಲ್ಲಿತ್ತು ಗುಂಡು: ಗುಲ್ಬರ್ಗದ ಮುತ್ತೂಟ್‌ ಫಿನ್‌ಕಾರ್ಪ್‌ ಕಚೇರಿ­ಯಲ್ಲಿ 2013ರ ನವೆಂಬರ್‌ನಲ್ಲಿ ನಡೆ­ದಿದ್ದ ₨ 1.60 ಕೋಟಿ ಮೌಲ್ಯದ ಚಿನ್ನಾ­ಭರಣ ದರೋಡೆ ಪ್ರಕರಣದ ಆರೋಪಿ­­ಯಾಗಿದ್ದ ಮುನ್ನಾ, ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ.

ಮುನ್ನಾ ಜ.8ರಂದು ಗುಲ್ಬರ್ಗದ ರೋಜಾ ಬಡಾವಣೆಯ ಛೋಟಾ ದೇವಡಿ ಪ್ರದೇಶದಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದ ಬಗ್ಗೆ ಮಾಹಿತಿ ಪಡೆದ ಬಂಡೆ, ಎಸ್‌ಐಗಳಾದ ಮುರಳಿ, ಹೇಮಂತ್‌ ಮತ್ತು ಎಎಸ್‌ಐ ಉದ್ದಂಡಪ್ಪ ಅವರ ತಂಡ ಆತನನ್ನು ಬಂಧಿಸಲು ಆ ಮನೆಯ ಬಳಿ ಹೋಗಿತ್ತು.

ಆಗ ಮನೆಯಿಂದ ಹೊರಬಂದು ಪರಾರಿಯಾಗಲು ಯತ್ನಿಸಿದ್ದ ಆತನ ಮೇಲೆ ಸಿಬ್ಬಂದಿ ಗುಂಡು ಹಾರಿಸಿದ್ದರು. ಕಾಲಿಗೆ ಗುಂಡು ತಗುಲಿ ಗಾಯಗೊಂಡ ಆತ  ಘಟನಾ ಸ್ಥಳದಿಂದ ಸ್ವಲ್ಪ ದೂರ ಓಡಿ ಹೋಗಿ ಮನೆಯೊಂದರಲ್ಲಿ ಅಡಗಿ­ಕೊಂಡಿದ್ದ. ಆತ ಓಡಿ ಹೋಗಿದ್ದ ಮಾರ್ಗ­­ದಲ್ಲಿ ರಕ್ತ ಸೋರಿತ್ತು. ಆ ಸುಳಿವು ಆಧರಿಸಿ ಮನೆಯ ಬಳಿ ಹೋದ ಸಿಬ್ಬಂದಿ ಕಟ್ಟಡವನ್ನು ಸುತ್ತುವರಿದು ಆತನಿಗೆ ಶರಣಾಗುವಂತೆ ಸೂಚಿಸಿದ್ದರು.

ಆದರೆ, ಆತ ಕಟ್ಟಡದಿಂದ ಹೊರ ಬಾರದಿದ್ದಾಗ ಮುರಳಿ ಅವರು ಮನೆಯೊಳಗೆ ಹೋಗಿ ಬಂಧಿಸಲು ಮುಂದಾ­ಗಿ­ದ್ದರು. ಆ ಸಂದರ್ಭದಲ್ಲಿ ಆತ ನಾಡ ಪಿಸ್ತೂಲ್‌ನಿಂದ ಅವರ ಮೇಲೆ ಗುಂಡು ಹಾರಿಸಿದ್ದ. ಬಲಗೈಗೆ ಗುಂಡು ತಗುಲಿ ಕುಸಿದುಬಿದ್ದ ಮುರಳಿ ಅವರಿಂದ ಸರ್ವಿಸ್‌ ಪಿಸ್ತೂಲ್‌ ಕಸಿದು­ಕೊಂಡ ಮುನ್ನಾ, ಕಟ್ಟಡದೊಳಗೆ ಬಂದ ಎಎಸ್‌ಐ ಉದ್ದಂಡಪ್ಪ ಅವರ ಮೇಲೂ ಗುಂಡಿನ ದಾಳಿ ನಡೆಸಿದ್ದ.

ಆಗ ಸಿಬ್ಬಂದಿಯ ರಕ್ಷಣೆಗೆ ಧಾವಿಸಿದ ಬಂಡೆ ಅವರು ಆರೋಪಿಗೆ ತೀರಾ ಹತ್ತಿರ ಹೋಗಿ ಆತನನ್ನು ಹಿಡಿದು­ಕೊಳ್ಳಲು ಯತ್ನಿಸಿದ್ದರು. ಆ ಸಂದರ್ಭ­ದಲ್ಲಿ ಮುನ್ನಾ, ತನ್ನ ಬಳಿ ಇದ್ದ ಮುರಳಿ ಅವರಿಗೆ ಸೇರಿದ್ದ ಪಿಸ್ತೂಲ್‌ನಿಂದ ಬಂಡೆ ಅವರ ಮೇಲೆ ಗುಂಡು ಹಾರಿಸಿದ್ದ. ಬಂಡೆ ಅವರ ಹಣೆಯ ಮೂಲಕ ತೂರಿ­ಕೊಂಡು ಹೊರಹೋಗಿದ್ದ ಆ ಗುಂಡು ಕೊಠಡಿಯ ಟ್ಯೂಬ್‌ಲೈಟ್‌ನ ಚೋಕ್‌ಗೆ ಹೊಕ್ಕಿಕೊಂಡಿತ್ತು. ಸ್ಥಳ ಪರಿಶೀಲನೆ ವೇಳೆ ಚೋಕ್‌ನಲ್ಲಿ ಪತ್ತೆಯಾದ ಆ ಗುಂಡಿನ ಮೇಲೆ ರಕ್ತದ ಕಲೆ ಇತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನುಭವದ ಕೊರತೆ ಕಾರಣ
ಬಂಡೆ ಮತ್ತು ಇತರೆ ಸಿಬ್ಬಂದಿ ಸೂಕ್ತ ಪೂರ್ವಸಿದ್ಧತೆ ಇಲ್ಲದೆ ಕಾರ್ಯಾ­ಚರಣೆಗೆ ಹೋಗಿದ್ದು, ಜತೆಗೆ ಸಿಬ್ಬಂದಿಯ ಅತಿಯಾದ ಉತ್ಸಾಹ ಮತ್ತು ಅನುಭವದ ಕೊರತೆ ಈ ದುರ್ಘಟನೆಗೆ ಮುಖ್ಯ ಕಾರಣಗಳು.

ಅಲ್ಲದೇ, ಬಂಡೆ ಅವರು ಕಾರ್ಯಾಚರಣೆಗೆ ತೆರಳುವ ತರಾತುರಿ­ಯಲ್ಲಿ ತಮ್ಮ ಸರ್ವಿಸ್‌ ಪಿಸ್ತೂಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು ಎಂಬ ಅಂಶಗಳು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿವೆ.

ಸಂಬಂಧ ಚೆನ್ನಾಗಿರಲಿಲ್ಲ
‘ಘಟನಾ ಸಂದರ್ಭದಲ್ಲಿ ಈಶಾನ್ಯ ವಲಯ ಐಜಿಪಿ ಆಗಿದ್ದ ವಜೀರ್‌ ಅಹಮ್ಮದ್‌ ಮತ್ತು ಬಂಡೆ ಅವರ ನಡುವಿನ ಸಂಬಂಧ ಅಷ್ಟು ಚೆನ್ನಾಗಿರ­ಲಿಲ್ಲ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಅವರ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT