ADVERTISEMENT

ಒಡೆದ ಬೃಹತ್‌ ಕೊಳವೆ ಮಾರ್ಗ

ಅಪಾರ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 20:03 IST
Last Updated 30 ಆಗಸ್ಟ್ 2014, 20:03 IST

ಕಂಪ್ಲಿ (ಬಳ್ಳಾರಿ ಜಿಲ್ಲೆ): ಇಲ್ಲಿಗೆ ಸಮೀಪದ ಬೆಳಗೋಡುಹಾಳು ಗ್ರಾಮದ ಮೂಲಕ ಹಾಯ್ದುಹೋಗಿರುವ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(ಬಿಟಿಪಿಎಸ್‌)ದ ನೀರಿನ ಬೃಹತ್‌ ಗಾತ್ರದ ಕೊಳವೆಮಾರ್ಗ ಶುಕ್ರವಾರ ಒಡೆದು, ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದ್ದಲ್ಲದೇ ಅಕ್ಕಪಕ್ಕದ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಭತ್ತವು ಕಾಳುಕಟ್ಟುವ ಹಂತದಲ್ಲಿದ್ದು, ನಿತ್ಯ ಸುರಿಯುತ್ತಿರುವ ಮಳೆ ಜೊತೆಗೆ ಕೊಳವೆ ಒಡೆದು ನೀರು ಗದ್ದೆಗಳಿಗೆ ನುಗ್ಗಿದೆ. ಇದರಿಂದ ಗದ್ದೆಯಲ್ಲಿ ತೇವಾಂಶ ಹೆಚ್ಚಳವಾಗಿ ಭತ್ತದ ಫಸಲಿಗೆ ಹಾನಿಯಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.

ವರ್ಷದಲ್ಲಿ ಎರಡು ಮೂರು ಬಾರಿ ಬೃಹತ್‌ ಕೊಳವೆ ಒಡೆದು ನೀರು ಗದ್ದೆಗಳಿಗೆ ನುಗ್ಗುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೊಳವೆ ಒಡೆಯದಂತೆ ಮುನ್ನೆಚ್ಚರಿಕೆ ಮತ್ತು ಶಾಶ್ವತ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಕೆಲ ರೈತರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗೋಡುಹಾಳು–ಕಂಪ್ಲಿ ಸಂಪರ್ಕ ರಸ್ತೆಯ ಮೇಲೆ ಭಾರಿ ಪ್ರಮಾಣದ ನೀರು ಹರಿದಿದ್ದರಿಂದ ಕೆಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು.

ರಸ್ತೆ ಈಗಾಗಲೇ ಹಾಳಾಗಿದ್ದು, ಬಿಟಿಪಿಎಸ್‌ ಕೊಳವೆ ಮೇಲಿಂದ ಮೇಲೆ ಒಡೆಯುತ್ತಿರುವುದರಿಂದ ರಸ್ತೆ ಇನ್ನಷ್ಟು ಹಾಳಾಗಿದೆ. ರೈತರಿಗೆ ನಷ್ಟ ಪರಿಹಾರ ಪಾವತಿಸುವಂತೆ ಮತ್ತು ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳುವಂತೆ ಬೆಳಗೋಡುಹಾಳ ಗ್ರಾಮ ಪಂಚಾಯ್ತಿ ಸದಸ್ಯ ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಬಿಟಿಪಿಎಸ್‌ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.