ADVERTISEMENT

ಕರಾವಳಿ ಜಾನಪದ ಕ್ರೀಡೆ ಕಂಬಳ ರದ್ದು?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2014, 19:30 IST
Last Updated 14 ನವೆಂಬರ್ 2014, 19:30 IST

ಉಡುಪಿ: ಪ್ರಾಣಿಗಳನ್ನು ಕ್ರೀಡೆ ಮತ್ತು ಮನರಂಜನೆ ಉದ್ದೇಶಕ್ಕಾಗಿ ಬಳಸಿ ಹಿಂಸಿಸಬಾರದು ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಭಾರತೀಯ ಪ್ರಾಣಿ ಹಿತರಕ್ಷಣಾ ಮಂಡಳಿ ಸೂಚನೆ ನೀಡಿರುವುದರಿಂದ ಜಿಲ್ಲೆಯಲ್ಲಿ ಇನ್ನು ಮುಂದೆ ಕಂಬಳಕ್ಕೆ ಅನುಮತಿ ನೀಡದಿರಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ.

ಕರಾವಳಿಯ ಜಾನಪದ ಕ್ರೀಡೆ ಎಂದು ಖ್ಯಾತಿ ಪಡೆದಿರುವ ಕಂಬಳ ಇನ್ನು ಮುಂದೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಕಂಬಳ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಕಂಬಳ ಋತು ನವೆಂಬರ್‌ ತಿಂಗಳಲ್ಲಿ ಆರಂಭವಾಗಿ ಮಾರ್ಚ್‌ ವರೆಗೂ ನಡೆಯುತ್ತಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಸಮಿತಿಯು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಆಯೋಜಿ ಸುತ್ತಿತ್ತು.

ತೀರ್ಪಿನ ಹಿನ್ನೆಲೆಯಲ್ಲಿ ಶಿರ್ವದ ನಡಿಬೆಟ್ಟುವಿನಲ್ಲಿ ಇಂದು (ನ.15) ನಡೆಯಬೇಕಿದ್ದ ಈ ವರ್ಷದ ಮೊದಲ ‘ಸೂರ್ಯಚಂದ್ರ’ ಜೋಡುಕರೆ ಕಂಬಳವನ್ನು ರದ್ದು ಮಾಡಲಾಗಿದೆ. ಸೂರ್ಯಚಂದ್ರ ಕಂಬಳ ಸಮಿತಿ ಸದಸ್ಯರೊಂದಿಗೆ ಶುಕ್ರವಾರ ಕಾಪು ವಿನಲ್ಲಿ ಸಭೆ ನಡೆಸಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಪ್ರಭುಲಿಂಗು ಕಂಬಳ ರದ್ದು ಮಾಡುವಂತೆ ಸೂಚಿಸಿದ್ದಾರೆ.

‘ಸುಪ್ರಿಂ ಕೋರ್ಟ್ ಆದೇಶ ಪಾಲಿಸುವಂತೆ ಮಂಡಳಿ ಈ ಹಿಂದೆಯೇ ಸೂಚನೆ ನೀಡಿತ್ತು. ಆ ನಂತರ ಕಂಬಳ ಸಮಿತಿಯವರ ಜೊತೆ ಚರ್ಚೆ ನಡೆಸಲಾಗಿತ್ತು. ಕಂಬಳ ಕರಾವಳಿಯ ಸಾಂಪ್ರದಾಯಿಕ ಮತ್ತು ಜಾನಪದ ಕ್ರೀಡೆ ಆಗಿರುವುದರಿಂದ ರಿಯಾಯಿತಿ ಕೋರಬಹುದು ಎಂಬ ಸಲಹೆಯನ್ನು ಸಮಿತಿ ನೀಡಿತ್ತು. ಅದನ್ನು ಪರಿಗಣಿಸಿ ಮಂಡಳಿಗೆ ಮತ್ತೊಂದು ಪತ್ರ ಬರೆದು, ಕೆಲವು ಷರತ್ತು ವಿಧಿಸಿ ಅನುಮತಿ ನೀಡುವ ಬಗ್ಗೆ ಪರಿಶಿಲನೆ ನಡೆಸಿ ಎಂದು ಮನವಿ ಮಾಡಿದ್ದೆವು. ಇದಕ್ಕೆ ಮಂಡಳಿ ಉತ್ತರ ನೀಡಿದ್ದು ಕಡ್ಡಾಯವಾಗಿ ನಿಷೇಧಿಸುವಂತೆ ಸೂಚಿಸಿದೆ’ ಎಂದು ಪ್ರಭುಲಿಂಗು ‘ಪ್ರಜಾವಾಣಿ’ಗೆ ತಿಳಿಸಿದರು. ಇನ್ನು ಮುಂದೆ ಯಾವುದೇ ಕಂಬಳಕ್ಕೂ ಅನುಮತಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನ್ಯಾಯಾಲಯದಲ್ಲಿಯೇ ಅರ್ಜಿ ಸಲ್ಲಿಸಿ ಕಂಬಳಕ್ಕೆ ಅನುಮತಿ ಪಡೆಯುವ ಬಗ್ಗೆ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳು ಸಲಹೆ ನೀಡಿ ದ್ದಾರೆ ಎಂದು ಗೊತ್ತಾಗಿದೆ. ಅರ್ಜಿ ಸಲ್ಲಿಸಿ ನ್ಯಾಯಾಲಯದ ಮನ ವೊಲಿಸಿದರೆ ಮಾತ್ರ ಕಂಬಳ ಮುಂದುವರೆಯಲಿದೆ. ವಿಶೇಷ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಪ್ರಾಣಿಗಳನ್ನು ಹಿಂಸೆಗೆ ಒಳಪಡಿಸುವ ಜಲ್ಲಿಕಟ್ಟು, ಎತ್ತಿನ ಬಂಡಿಯ ಸ್ಪರ್ಧೆ ಮತ್ತು ಎಲ್ಲ ರೀತಿಯ ಚಟುವಟಿಕೆ ಗಳನ್ನು ನಿಲ್ಲಿಸಬೇಕು ಎಂದು 2014 ಮೇ 7ರಂದು ಆದೇಶ ನೀಡಿದೆ.

‘ಚಿಂತನೆ ಇಲ್ಲ’
ಮಂಗಳೂರು:
‘ಕಂಬಳ ನಿಷೇಧಿ ಸುವಂತೆ ನಮಗೆ ಇದುವರೆಗೆ ಯಾವುದೇ ಇಲಾಖೆಯಿಂದ ಸುತ್ತೋಲೆ ಬಂದಿಲ್ಲ. ಜಿಲ್ಲೆಯಲ್ಲಿ ಕಂಬಳ ನಿಷೇಧಿಸುವ ಯಾವುದೇ ಪ್ರಸ್ತಾವ ಸದ್ಯಕ್ಕಂತೂ ಜಿಲ್ಲಾಡಳಿತದ ಮುಂದೆ ಇಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.