ADVERTISEMENT

ಕಾವೇರಿ ಬತ್ತಿದರೂ ಉತ್ಸಾಹ ಉಡುಗಿಲ್ಲ

ಪ್ರವಾಸದಲ್ಲಿ ಕಂಡದ್ದು, ಕೇಳಿದ್ದು...

​ಕೇಶವ ಜಿ.ಝಿಂಗಾಡೆ
Published 25 ಏಪ್ರಿಲ್ 2013, 9:08 IST
Last Updated 25 ಏಪ್ರಿಲ್ 2013, 9:08 IST

ಮಂಡ್ಯ: `ಅವರು (ಜೆಡಿಎಸ್) ರಾತ್ರಿ ಚುನಾವಣೆ ಮಾಡ್ತಾರೆ. ನಾವು (ರೈತರು) ಹಗಲು ಪ್ರಚಾರ ಮಾಡ್ತೇವೆ. ನಿಶಾಚರಿಗಳಂತೆ ರಾತ್ರಿ 10.30ರ ಮೇಲೆ ಪ್ರಚಾರ ಕಾರ್ಯಕರ್ತರು ಹಳ್ಳಿಗಳಿಗೆ ಕಾಲಿಡದಂತೆ ನಿರ್ಬಂಧ ವಿಧಿಸಬೇಕು'

- ಇದು ಮೇಲುಕೋಟೆ ಕ್ಷೇತ್ರದಲ್ಲಿ ಕಾಲಿನ ನೋವನ್ನೂ ಮರೆತು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಚುರುಕಾಗಿ ಪ್ರಚಾರ ನಡೆಸುತ್ತಿರುವ ಸರ್ವೋದಯ ಕರ್ನಾಟಕ ಪಕ್ಷದ ಕೆ. ಎಸ್. ಪುಟ್ಟಣ್ಣಯ್ಯ ಅವರು, ತಮ್ಮ  ಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ. ಎಸ್. ಪುಟ್ಟರಾಜು  ವಿರುದ್ಧ ವ್ಯಕ್ತಪಡಿಸಿದ ಆಕ್ರೋಶದ ಪರಿ.

ಪಾಂಡವಪುರದ ರೈಲ್ವೆಸ್ಟೇಷನ್ ಪಕ್ಕದ ಅಂಗಡಿಯಲ್ಲಿ ಮಾತಿಗೆ ಸಿಕ್ಕ ಅವರು, `ಜೆಡಿಎಸ್ ಅಭ್ಯರ್ಥಿಯ ಭ್ರಷ್ಟಾಚಾರ, ಗಣಿ ಸಂಪತ್ತಿನ ಲೂಟಿ, ಡಿನೋಟಿಫಿಕೇಷನ್ ದಂಧೆ, ದಬ್ಬಾಳಿಕೆ, `ಮೂಡಾ' ಸೈಟ್ ಕಳ್ಳತನ, ಸರ್ಕಾರಿ ಸೌಲಭ್ಯಗಳನ್ನೆಲ್ಲ ಸ್ವಾರ್ಥಕ್ಕೆ ಬಳಸಿಕೊಂಡಿರುವುದು, ರಾತ್ರಿ ಮನೆಮನೆಗಳಿಗೆ ತೆರಳಿ ಬೀದಿ ದೀಪ ಆರಿಸಿ ಎಗ್ಗಿಲ್ಲದೇ ಹಣ ಖರ್ಚು ಮಾಡುತ್ತ ತಿರುಗುತ್ತಿರುವುದರ ವಿರುದ್ಧ ರೈತ ಪರ ಜನರ ಆಂದೋಲನ ನಡೆಸುತ್ತಿದ್ದೇವೆ' ಎಂದು ಆತ್ಮ ವಿಶ್ವಾಸದಿಂದ ಹೇಳಿದರು. `

ಹಾಲಿ ಶಾಸಕರ ದಬ್ಬಾಳಿಕೆಯಿಂದ ಜನರು ರೋಸಿ ಹೋಗಿದ್ದಾರೆ. ಇವ್ರಿಗೆ ಮಾನಾ ಮರ್ಯಾದೆ ಇಲ್ಲ ಕಣ್ರಿ. `ಬೇಬಿ ಬೆಟ್ಟ' ಎಲ್ಲ ಸ್ವಾಹಾ ಮಾಡಿದ್ದಾರೆ. `ಬೇಬಿ ಬೆಟ್ಟ  ಈಗ ಎಲ್‌ಕೆಜಿ ಆಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಗೆಲುವಿನ ಆಸೆ ಇದೆ. ಶ್ರವಣಬೆಳಗೊಳದ ಬೆಟ್ಟದ ಸುತ್ತಮುತ್ತ 9 ಕಿ. ಮೀ ಫಾಸಲೆಯಲ್ಲಿ ಗಣಿಗಾರಿಕೆಗೆ ನಿಷೇಧ ಇದೆ. ಅದನ್ನು ಕೆಆರ್‌ಎಸ್ ಡ್ಯಾಂ ಸುತ್ತ ಜಾರಿಗೆ ತರಲು  ಸರ್ಕಾರಕ್ಕೆ ಏನು ಧಾಡಿ ಆಗಿದೆ' ಎಂದೂ ಗಟ್ಟಿಯಾಗಿ ಪ್ರಶ್ನಿಸಿದರು.

`ಪುಟ್ಟರಾಜು ಮಹಾನ್ ಸುಳ್ಳುಗಾರ, ಅವರ ಬಳಿ ಇರುವ ಸುಳ್ಳನ್ನು ಇಡೀ ರಾಜ್ಯಕ್ಕೂ ಹಂಚಿದರೂ ಉಳಿತದೆ' ಎಂದು ಹೇಳುವ ಮಂಡ್ಯ ಜಿಲ್ಲಾ ಕೃಷಿ ಉತ್ಪನ್ನ ಮಾರಾಟ ಒಕ್ಕೂಟದ ನಿರ್ದೇಶಕರಾಗಿರುವ ಕಾಂಗ್ರೆಸ್‌ನ ನಿಂಗೇಗೌಡ ಅವರೂ ಪುಟ್ಟಣ್ಣಯ್ಯ ಅವರ ಆರೋಪಗಳನ್ನು ಪುಷ್ಟೀಕರಿಸುತ್ತಾರೆ.

ನೀರಿಗೆ ಕೊರತೆ; ಹಣದ ಒರತೆ:ಜಿಲ್ಲೆಯಲ್ಲಿ ಕಾವೇರಿ ಬತ್ತಿದ್ದರೂ, ರಾಜಕಾರಣಿಗಳ ಬಳಿ ಹಣದ ಹೊಳೆ ಹರಿಸಲು ಕೊರತೆ ಏನೂ ಇಲ್ಲ. ಜಿಲ್ಲೆಯಾದ್ಯಂತ ತಿರುಗಿದಾಗ ಎಲ್ಲಿಯೂ ಕಾವೇರಿ ವಿವಾದ ಅನುಭವಕ್ಕೆ  ಬರಲಿಲ್ಲ. ನದಿ, ಕಾಲುವೆಗಳು ಬತ್ತಿವೆ. ಹೊಲ, ಗದ್ದೆಗಳಲ್ಲಿ ರೈತರಿಗೆ ಕೆಲಸವೇನೂ  ಇಲ್ಲ. ನದಿ ನೀರು ಹಂಚಿಕೆ ವಿವಾದ ಮನೆಯಲ್ಲಿಯೇ ಬಿಟ್ಟು ಬಂದು ಎಲ್ಲರೂ ಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ.  ಜೆಡಿಎಸ್ ಮಾತ್ರ ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಾವೇರಿ ಅಸ್ತ್ರ ಝಳಪಿಸುತ್ತಿದ್ದರೂ ರಣೋತ್ಸಾಹ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಹಿನ್ನಡೆ ಅದರ ಉತ್ಸಾಹವನ್ನು ಕುಗ್ಗಿಸಿದೆ.

ಬತ್ತದ ಉತ್ಸಾಹ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 5 ಬಾರಿ ಸೋಲುಂಡಿದ್ದರೂ 6ನೇ ಬಾರಿಗೂ ಕಣಕ್ಕೆ ಇಳಿದಿರುವ ಸರ್ವೋದಯ ಕರ್ನಾಟಕ  ಪಕ್ಷದ ಕೆ. ಎಸ್. ನಂಜುಂಡೇಗೌಡ ಅವರದ್ದೂ ಬತ್ತದ ಉತ್ಸಾಹ. ಹಂಗರಹಳ್ಳಿ ಜೀತ ಪ್ರಕರಣ ಬೆಳಕಿಗೆ ತಂದು ಸಾಕಷ್ಟು ತೊಂದರೆ ಅನುಭವಿಸಿರುವ ಇವರು, `ರೈತ ಪರ ನಿರಂತರ ಹೋರಾಟವೇ ನನ್ನ ಧ್ಯೇಯ. ಜನರ ಜತೆ ಸದಾ ಸಂಪರ್ಕದಲ್ಲಿ ಇರುವೆ. ಕಾಂಗ್ರೆಸ್‌ನಲ್ಲಿನ ಬಂಡಾಯ ನನ್ನ ಗೆಲುವಿಗೆ ನೆರವಾಗಲಿದೆ' ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.