ADVERTISEMENT

ಕುಡಿಯುವ ನೀರಿಗೆ ‘ತಡೆಗೋಡೆ’

ನ್ಯಾಯಮಂಡಳಿ ಮಧ್ಯಾಂತರ ಆದೇಶ: ಕಳಸಾ – ಬಂಡೂರಿ ನಾಲಾ ಯೋಜನೆಗೆ ಗ್ರಹಣ

ಶ್ರೀಪಾದ ಯರೇಕುಪ್ಪಿ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ಬೆಳಗಾವಿ: ಕುಡಿಯುವ ನೀರಿನ ದಾಹ ನೀಗಿಸುವ ಕಳಸಾ– ಬಂಡೂರಿ ನಾಲಾ ತಿರುವು ಯೋಜನೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ಇನ್ನೇನು ಮಲಪ್ರಭೆಯ ಒಡಲಿನಲ್ಲಿ ಕಳಸಾ ನಾಲಾ ನೀರು ಹರಿಯುತ್ತದೆ ಎಂದು ಅಂದುಕೊಳ್ಳುವ­ಷ್ಟರಲ್ಲಿಯೇ ಮಹಾ­ದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಳಿಯ ಸೂಚನೆ ಗಾಯದ ಮೇಲೆ ಬರೆ ಕೊಟ್ಟಂತಾಗಿದೆ.

ಕಳಸಾ ನಾಲಾದಿಂದ ಕನಿಷ್ಠ 1.5 ಟಿಎಂಸಿ ಅಡಿ ನೀರು ಈ ಮಳೆಗಾಲದಲ್ಲಿ ಮಲಪ್ರಭಾ ನದಿಗೆ ಹರಿದು ಬರುವ ಸಾಧ್ಯತೆ ಇತ್ತು. ಕಳಸಾ ನಾಲೆಯಿಂದ ಮಲಪ್ರಭಾ ನದಿಗೆ ನೀರು ಹರಿಸುವು­ದಕ್ಕಾಗಿ ಅರಣ್ಯೇತರ ಪ್ರದೇಶದಲ್ಲಿ  ನಡೆದಿರುವ ಕಾಮಗಾರಿಯು ಮೇ ಅಂತ್ಯದೊಳಗೆ ಮುಗಿಯುವ ಹಂತ­ದಲ್ಲಿದೆ. ಈ ನಾಲೆಯಿಂದ ಮಲಪ್ರಭಾ ನದಿಗೆ ನೀರು ಹರಿಸಬೇಕು ಎಂಬ ಉದ್ದೇಶಕ್ಕೆ ‘ತಡೆಗೋಡೆ’ ಇಟ್ಟಂತೆ ನ್ಯಾಯಮಂಡಳಿ ಸೂಚನೆ ನೀಡಿದೆ.

ಕಳಸಾ– ಬಂಡೂರಿ ನಾಲಾ ತಿರುವು ಯೋಜನೆಯಿಂದ ಮಲಪ್ರಭಾ ನದಿಗೆ ನೀರು ಹರಿಯದಂತೆ ತಡೆಗೋಡೆ ನಿರ್ಮಿಸಲು ನ್ಯಾಯಮಂಡಳಿ ಸೂಚಿಸಿ­ದ್ದರಿಂದ ಹುಬ್ಬಳ್ಳಿ– ಧಾರವಾಡ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ನವಲಗುಂದ, ನರಗುಂದ, ರೋಣ, ಬಾದಾಮಿ, ಗುಳೇದಗುಡ್ಡ ಸೇರಿದಂತೆ ಮಲಪ್ರಭಾ ನದಿ ಪಾತ್ರದಲ್ಲಿನ ಜನರ ನೀರಿನ ದಾಹ ತಣಿಸುವುದು ಅಸಾಧ್ಯವೆಂಬಂತಾಗಿದೆ.

ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿನ ಏಕೈಕ ಆಶಾಕಿರಣ ಈ ಯೋಜನೆ ಆಗಿದೆ.

ಕಳಸಾ ಹಾಗೂ ಬಂಡೂರಿ ಹಳ್ಳಗಳಲ್ಲಿ ಹರಿಯುವ ನೀರು ಮಹಾ­ದಾಯಿ ನದಿ ಮೂಲಕ ಸಮುದ್ರದ ಪಾಲಾಗುತ್ತದೆ. ಈ ಹಳ್ಳಗಳು ಕರ್ನಾಟಕದಲ್ಲಿಯೂ ಹರಿಯುತ್ತವೆ.  ಹೀಗಾಗಿ ರಾಜ್ಯದ ಪಾಲು 54 ಟಿಎಂಸಿ ಅಡಿ ನೀರು ದೊರಕಬೇಕಾಗುತ್ತದೆ. ಈ ಪೈಕಿ ಕುಡಿಯುವುದಕ್ಕಾಗಿ 7.56 ಟಿಎಂಸಿ ಅಡಿ ನೀರು ಮಲಪ್ರಭಾ ನದಿಗೆ ಹರಿಸಬೇಕು ಎಂಬ ಬೇಡಿಕೆ ಬಹು ವರ್ಷಗಳಿಂದ ಇದೆ. ಈ ಬೇಡಿಕೆಗೆ ಅನುಸಾರವಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಸಮೀಪ ಮಲಪ್ರಭಾ ನದಿಯ ಉಗಮ ಸ್ಥಾನದ ಬಳಿ ಕಳಸಾ ನಾಲಾ ಜೋಡಣೆ ಮಾಡಲಾಗುತ್ತಿದೆ.

ಮುಕ್ತಾಯದ ಹಂತದಲ್ಲಿ ಕಳಸಾ ಕಾಮಗಾರಿ: ಕಳಸಾ ನಾಲಾ ಕೂಡು ಕಾಲುವೆಯ ಒಟ್ಟು ಉದ್ದವು 5.15 ಕಿ.ಮೀ. ಇದ್ದು, ಇದರಲ್ಲಿ

ಈಗಾಗಲೇ 4.7 ಕಿ.ಮೀ. ಉದ್ದದ ಕಾಲುವೆ ಕಾಮಗಾರಿಯು ಪೂರ್ಣಗೊಂಡಿದೆ. ಕಾಮಗಾರಿಯ ಶೇ 85ರಷ್ಟು ಭಾಗ­ದಲ್ಲಿ ಕೆಲಸ ಪೂರ್ಣಗೊಂಡಿದ್ದು, ಕಣಕುಂಬಿ ಗ್ರಾಮದ ಮಾವುಲಿ ದೇವಸ್ಥಾನದ ಬಳಿಯ 750 ಮೀಟರ್ ಪ್ರದೇಶದಲ್ಲಿ ಮಾತ್ರ ಕೆಲಸ ಬಾಕಿ ಇದೆ. 

ಮೊದಲ ಹಂತದಲ್ಲಿ ಕಳಸಾ ನಾಲಾ ತಿರುವು ಯೋಜನೆಯ ಕಾಮಗಾರಿ­ಯನ್ನು 3.33 ಕಿ.ಮೀ. ವರೆಗೆ ತೆಗೆದುಕೊಳ್ಳಲಾಗಿತ್ತು. ಓಪನ್‌ ಕಟ್‌ ಕೂಡು ಕಾಲುವೆ ಕೆಲಸ ಪೂರ್ಣಗೊ­ಳಿಸಲಾಗಿದೆ. ಈ ಕಾಮಗಾರಿಗೆರೂ. 53.50 ಕೋಟಿ ವೆಚ್ಚ ತಗುಲಿದೆ. ಎರಡನೇ ಹಂತದಲ್ಲಿ ಕಾಲುವೆಯಲ್ಲಿ ನೀರನ್ನು ಹರಿಸಲು ಅವಶ್ಯಕವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಂತದಲ್ಲಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಕಳಸಾ ಜಲಾಶಯದಿಂದ ಮಲಪ್ರಭಾ ನದಿಗೆ ಕೂಡು ಕಾಲುವೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಕೂಡು ಕಾಲುವೆಯ ಒಟ್ಟು ಉದ್ದದ ಪೈಕಿ 0.450 ಕಿ.ಮೀ. ಉದ್ದದ ಕಾಲುವೆ ಕೆಲಸಗಳು ಪ್ರಗತಿಯಲ್ಲಿವೆ. ಈ ಕಾಲುವೆಯಲ್ಲಿ ಬರುವ ಇನ್ಲೆಟ್‌ಗಳ ಸಹಾಯದಿಂದ ಸುಮಾರು 1.5 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ಹರಿಸಬಹುದು. ಆದರೆ, ನ್ಯಾಯಮಂಡಳಿಯ ಸೂಚನೆಯಿಂದ ಈ ನೀರನ್ನು ಬಳಸುವಂತಿಲ್ಲ.

‘ಬಂಡೂರಿ ನಾಲಾ ಕೂಡು ಕಾಲುವೆ ಕಾಮಗಾರಿಯು ಸಂಪೂರ್ಣವಾಗಿ ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ನ್ಯಾಯ­ಮಂಡಳಿಯ ತೀರ್ಪಿನ ನಂತರ ಕೆಲಸ ಕೈಗೆತ್ತಿಕೊಳ್ಳಲಾಗುವುದು’ ಎಂದು ಕರ್ನಾ­ಟಕ ನೀರಾವರಿ ನಿಗಮದ ಅಧಿ­ಕಾರಿ­­ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳಸಾ ನಾಲಾ ಕೂಡು ಕಾಲುವೆಯ ಕಾಮಗಾರಿ ಮುಗಿಯುವ ಹಂತದ­ಲ್ಲಿದ್ದು, ಮುಂಬರುವ ಮಳೆಗಾಲದಲ್ಲಿ ಮಲಪ್ರಭಾ ನದಿಗೆ 1.5 ಟಿಎಂಸಿ ಅಡಿ ನೀರು ಹರಿದು ಬರುತ್ತಿತ್ತು. ಆದರೆ, ಮಹಾದಾಯಿ ಕಣಿವೆಯಲ್ಲಿ ಬರುವ ನೀರನ್ನು ಮಲಪ್ರಭಾ ನದಿಗೆ ಹರಿಸಬಾರದು ಎಂದು ನ್ಯಾಯಮಂಡಳಿ ಸೂಚಿಸಿದೆ. ಈ ಕೂಡು ಕಾಲುವೆಗೆ ತಡೆಗೋಡೆ ನಿರ್ಮಿಸಲು ಸೂಚಿಸಿರು­ವುದು ವಿಷಾ­ದಕರ. ಆದರೆ, ಕಾಮಗಾರಿ­ಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿಲ್ಲ. ಕೂಡು ಕಾಲುವೆಯ ಕಾಮಗಾರಿ ಮುಂದುವರಿಯಲಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ ಡಿಸೆಂಬರ್‌ನಲ್ಲಿ ನ್ಯಾಯ­ಮಂಡಳಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌ ನೇತೃತ್ವದ ತಂಡ ಕಳಸಾ– ಬಂಡೂರಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಮ್ಮ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ನೀಡಿದ್ದಾರೊ, ಇಲ್ಲವೋ ಗೊತ್ತಿಲ್ಲ. ಆದ್ದರಿಂದಲೇ ಇಂಥ ಸೂಚನೆ ಹೊರಗೆ ಬಂದಿದೆ’ ಎನ್ನುತ್ತಾರೆ ಅವರು.

ತಡೆಗೋಡೆ ಒಡೆದು ನೀರು ಪಡೆಯುತ್ತೇವೆ: ‘ಬಹಳ ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಇನ್ನಾ­ದರೂ ನೀರು ಸಿಗದಿದ್ದರೆ, ನಾವು ಸುಮ್ಮನಿ­ರುವುದಿಲ್ಲ. ನ್ಯಾಯ­ಮಂಡಳಿಯ ಸೂಚನೆ ಮೇರೆಗೆ ತಡೆಗೋಡೆ ನಿರ್ಮಿಸಿದರೆ, ಅದನ್ನು ಒಡೆದು ನೀರು ಪಡೆಯುತ್ತೇವೆ. ನಮ್ಮ ಪಾಲಿನ ನೀರು ಪಡೆಯಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ’ ಎಂದು ಕಳಸಾ– ಬಂಡೂರಿರ–ಮಲಪ್ರಭಾ ಜೋಡಣಾ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳುತ್ತಾರೆ.

‘ನ್ಯಾಯಮಂಡಳಿಯ ಸೂಚನೆ ಹಿಂದೆ ಗೋವಾ ರಾಜ್ಯದವರ ಕುತಂತ್ರ ಅಡಗಿದೆ. ಕಾಂಗ್ರೆಸ್‌ ಸರ್ಕಾರ ಸಹ ಗೋವಾದವರ ಮಾತನ್ನೇ ಕೇಳುತ್ತಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರು ನೀರಿಲ್ಲದೇ ಗೋಳಾಡುತ್ತಿದ್ದರೂ, ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ’ ಎಂದು ಈ ಯೋಜನೆ ಅನುಷ್ಠಾನಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಕುಲಕರ್ಣಿ ದೂರಿದರು.

ಹಿನ್ನಡೆ ಅಲ್ಲ: ಸಚಿವ ಪಾಟೀಲ
ವಿಜಾಪುರ:
‘ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥವಾಗುವವರೆಗೆ ಕಳಸಾ–ಬಂಡೂರಿ ನಾಲೆಗೆ ತಡೆಗೋಡೆ ನಿರ್ಮಿಸುವಂತೆ ನ್ಯಾಯಮಂಡಳಿ ಮಧ್ಯಾಂತರ ಆದೇಶ ನೀಡಿದೆ. ಆದರೆ, ಕಾಮಗಾರಿಗೆ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಈ ಮಧ್ಯಾಂತರ ತೀರ್ಪು ರಾಜ್ಯಕ್ಕೆ ಸಾಧಕವೂ ಅಲ್ಲ; ಬಾಧಕವೂ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ನ್ಯಾಯಮಂಡಳಿಯ ಅಂತಿಮ ತೀರ್ಪು ಬರುವವರೆಗೂ ಮಹಾದಾಯಿ ನದಿಯಿಂದ ಈ ಕಾಲುವೆಗೆ ನೀರು ಪಡೆಯುವುದಿಲ್ಲ ಎಂದು ಈ ಹಿಂದೆಯೇ ರಾಜ್ಯ ಸರ್ಕಾರ ನ್ಯಾಯಮಂಡಳಿಗೆ ಪ್ರಮಾಣ ಪತ್ರ ಸಲ್ಲಿಸಿದೆ’ ಎಂದರು.

‘ಹುಬ್ಬಳ್ಳಿ–ಧಾರವಾಡ ಮತ್ತಿತರ ನಗರಗಳಿಗೆ ಕುಡಿಯುವ ನೀರಿಗಾಗಿ ನಾವು ಈ ಯೋಜನೆಯನ್ನು ಕೈಗೆತ್ತಿ­ಕೊಂಡಿದ್ದೇವೆ. ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಯೋಜನೆಯ ಉದ್ದೇಶದ ಬಗ್ಗೆ ಮನವರಿಕೆ ಮಾಡಿ­ಕೊಟ್ಟಿದ್ದೇವೆ. ನ್ಯಾಯಮಂಡಳಿಯ ಎದುರು ಸಮರ್ಥ ವಾದ ಮಂಡಿಸಿ ರಾಜ್ಯದ ಹಿತ ಕಾಪಾಡುತ್ತೇವೆ’ ಎಂದು ಸಚಿವರು ಹೇಳಿದರು.

ವಾಸ್ತವ ತಿಳಿಸಬೇಕು
‘ಇದು ಕುಡಿಯುವ ನೀರಿನ ಯೋಜನೆ ಆಗಿದ್ದು, ಈ ಭಾಗದ ನೀರಿನ ಸಮಸ್ಯೆಯ ವಾಸ್ತವ ಪರಿಸ್ಥಿತಿಯನ್ನು ನ್ಯಾಯಮಂಡಳಿ ಎದುರು ಇಡಬೇಕು. ನ್ಯಾಯ ಮಂಡಳಿಯ ಆದೇಶದಿಂದ ಯಾವುದೇ ಹಿನ್ನಡೆ ಆಗಿಲ್ಲ. ಆದರೆ, ನಮ್ಮ ರಾಜ್ಯದ ವಕೀಲರು ಎಲ್ಲ ಮಾಹಿತಿ ಒದಗಿಸುವುದರೊಂದಿಗೆ ಸಮರ್ಪಕವಾಗಿ ವಾದ ಮಂಡಿಸ­ಬೇಕು’ ಎಂದು ಶಾಸಕ ಹಾಗೂ ಕಳಸಾ–ಬಂಡೂರಿ ನಾಲಾ ಯೋಜನೆಯ ಹೋರಾಟಗಾರ ಎನ್‌.­­ಎಚ್‌.­ಕೋನರಡ್ಡಿ ಒತ್ತಾಯಿಸಿ­ದ್ದಾರೆ.

ADVERTISEMENT

‘ಸರ್ಕಾರ ಮುತುವರ್ಜಿ ವಹಿಸುವ ಮೂಲಕ ಪ್ರಧಾನಿ ಬಳಿ ಸರ್ವ ಪಕ್ಷದ ನಿಯೋಗ ಹೋಗ­ಬೇಕು. ಯಾವುದೇ ಕಾರಣಕ್ಕೂ ನಮ್ಮ ಪಾಲಿನ ನೀರನ್ನು ಸಮುದ್ರಕ್ಕೆ ಬಿಡಬಾರದು. ನಮ್ಮ ಮೇಲೆ ಹೀಗೆ ಅನ್ಯಾಯ ಮುಂದು­ವರಿ­ದರೆ ಸುಮ್ಮನಿರುವುದಿಲ್ಲ. ಸದ್ಯ ಕನಿಷ್ಠ 1.5 ಟಿಎಂಸಿ ಅಡಿ ನೀರು ಬರುತ್ತದೆ ಎಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರು ಆಸೆಗಣ್ಣಿನಿಂದ ನೋಡುತ್ತಿದ್ದರೆ ಅದಕ್ಕೂ ಅಡ್ಡಿ ಮಾಡಿ­ದಂತಾಗಿದೆ. ನೀರಿಗಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.