ADVERTISEMENT

ಕೃಷ್ಣಾ ಹರಿವು ಹೆಚ್ಚಳ: 9 ಸೇತುವೆ ಮುಳುಗಡೆ

ಪ್ರವಾಹ: ಯುವಕ ನೀರುಪಾಲು

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೃಷ್ಣಾ ನದಿ ದಡದಲ್ಲಿ ಅಳವಡಿಸಿದ್ದ ಪಂಪ್‌­ಸೆಟ್‌­ಗಳನ್ನು ಸ್ಥಳಾಂತರಿ­ಸಲು ಹೋದಾಗ ರೈತನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ­ಕೊಂಡು ಹೋದ ಘಟನೆ ತಾಲ್ಲೂ­ಕಿನ ಅಂಕಲಿಯಲ್ಲಿ  ಶುಕ್ರವಾರ ಸಂಭವಿಸಿದೆ.

   ನೀರುಪಾಲಾದ ವ್ಯಕ್ತಿಯನ್ನು ಗ್ರಾಮದ ಸತೀಶ ಸದಾಶಿವ ಕಮತೆ (26) ಎಂದು ಗುರುತಿಸಲಾಗಿದ್ದು, ಆತ­ನಿ­­ಗಾಗಿ  ಶೋಧ ಕಾರ್ಯ ಮುಂದು­ವರಿದಿದೆ.

ನದಿ ನೀರಿನ ಮಟ್ಟ ಏರುತ್ತಿ­ರು­ವು­ದನ್ನು ಗಮನಿಸಿದ ಗ್ರಾಮಸ್ಥರು ಪಂಪ್‌­­ಸೆಟ್‌­ಗಳನ್ನು ಸ್ಥಳಾಂತರಿಸಲು ಹೋದಾಗ ಈ ದುರಂತ ಸಂಭವಿಸಿದೆ. ಕಂದಾಯ ಮತ್ತು ಪೊಲೀಸ್‌ ಸಿಬ್ಬಂದಿ­ಯೊಂದಿಗೆ ಸ್ಥಳೀ­ಯರು ದೋಣಿ ಮೂಲಕ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೃಷ್ಣಾ ಒಳಹರಿವು ಹೆಚ್ಚಳ: ಮಹಾ­ರಾ­ಷ್ಟ್ರದ ಜಲಾಶಯಗಳಿಂದ ಶುಕ್ರ­ವಾರ ರಾಜ್ಯಕ್ಕೆ 2.55 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿ­­ರುವುದರಿಂದ  ಕೃಷ್ಣಾ ಮತ್ತು ಅದರ ಉಪ ನದಿಗಳ ನೀರಿನ ಮಟ್ಟ ಗಣ­ನೀ­ಯವಾಗಿ ಹೆಚ್ಚಳ ಉಂಟಾ­ಗುತ್ತಿದೆ.

ನದಿತೀರದ ರೈತರು ಜಾನುವಾರು­ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸು­ತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶ­ದಲ್ಲಿ ಬೆಳೆದಿದ್ದ ಸೋಯಾಅವರೆ, ತರ­ಕಾರಿ, ಕಬ್ಬು ಮುಳುಗಡೆಯಾಗಿವೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ ಕೆಳಮಟ್ಟದ 5 ಸೇತುವೆಗಳು (ಕಲ್ಲೋಳ–­ಯಡೂರ, ಮಲಿಕವಾಡ–ದತ್ತವಾಡ, ಕಾರದಗಾ–ಭೋಜ್, ಕುನ್ನೂರ–ಭೋಜವಾಡಿ, ಜತ್ರಾಟ–ಭೀವಶಿ) ಸೇತುವೆಗಳು ಇನ್ನೂ ಜಲಾವೃತ ಸ್ಥಿತಿಯಲ್ಲಿದ್ದು, ಸೇತುವೆಗಳ ಮೇಲೆ ಸುಮಾರು 10 ಅಡಿಯಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ.

ತಾಲ್ಲೂಕಿನ ಕಲ್ಲೋಳ, ಕಾರದಗಾ, ಸದಲಗಾ ಮೊದಲಾದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎನ್‌.ಜಯರಾಂ ಭೇಟಿ ನೀಡಿ ಪರಿಶೀಲಿಸಿದರು.

‘ಚಿಕ್ಕೋಡಿ ಉಪವಿಭಾಗದ ಒಟ್ಟು  ತೊಂಬತ್ತು ಗ್ರಾಮ­ಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ತುರ್ತು ಪರಿಸ್ಥಿತಿ­ಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ದೋಣಿಗಳನ್ನು ನೀಡ­ಲಾಗಿದೆ’ ಎಂದು ತಿಳಿಸಿದ್ದಾರೆ.

ಕುಡಚಿ ಸೇತುವೆ ಮುಳುಗಡೆ: ಮಹಾ­ರಾಷ್ಟ್ರದ ಕಾಳಮ್ಮವಾಡಿ ಹಾಗೂ ರಾಜಾ­­ಪುರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರು­ವುದರಿಂದ ಜಿಲ್ಲೆ ರಾಯಬಾಗ ತಾಲ್ಲೂಕಿನ ಮೂರು ಸೇತುವೆಗಳು ಸಹ ಜಲಾವೃತವಾಗಿವೆ.

ಜಮಖಂಡಿ–ಮಿರಜ್ ಹೆದ್ದಾರಿ­ಯ­ಲ್ಲಿ­­­­ರುವ ಕುಡಚಿ ಬಳಿ ಸೇತುವೆ ಮುಳು­ಗಡೆಯಾಗಿ ಕರ್ನಾಟಕ– ಮಹಾ­ರಾಷ್ಟ್ರ ನಡುವಣ ವಾಹನ ಸಂಚಾರ ಶುಕ್ರವಾರ ಬೆಳಿಗ್ಗೆಯಿಂದ ಸ್ಥಗಿತ­ಗೊಂಡಿದೆ. ಇದಲ್ಲದೆ ಭಿರಡಿ–ಚಿಂಚಲಿ ಮಧ್ಯದ ಸೇತುವೆ ಗುರುವಾರ ರಾತ್ರಿ­ಯಿಂದ ಜಲಾವೃತ­ವಾಗಿ ಸಂಚಾರ ಸ್ಥಗಿತಗೊಂಡಿದೆ.

ರಾಯಬಾಗ–ಕುಡಚಿ ಮಧ್ಯೆ ಚಿಂಚಲಿ ಬಳಿ ಹಾಲಹಳ್ಳ ಸಹ ಜಲಾವೃತವಾಗಿದೆ.  
ಹಿಪ್ಪರಗಿಯಿಂದ ನೀರು ಹೊರಕ್ಕೆ: ಬಾಗ­ಲ­ಕೋಟೆ ಜಿಲ್ಲೆಯ ಜಮಖಂಡಿ ಬಳಿಯ ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 2.55 ಲಕ್ಷ ಕ್ಯೂಸೆಕ್‌  ನೀರು ಹರಿದು ಬಂದಿದ್ದು, ಅಷ್ಟೂ ನೀರನ್ನು ಹೊರಗೆ ಬಿಡ­ಲಾಗುತ್ತಿದ್ದು ಬನಹಟ್ಟಿ ಬಳಿಯ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿದೆ.

ಅಜ್ಜರಣಿ ಸೇತುವೆ ಜಲಾವೃತ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನ­ವಾಸಿ ಬಳಿಯ ವರದಾ ನದಿಯಲ್ಲಿ ಪ್ರವಾಹ ಇನ್ನೂ ಹೆಚ್ಚಾದ ಕಾರಣ ಸುಮಾರು 1,000 ಎಕರೆ ಕೃಷಿಭೂಮಿ ಜಲಾವೃತಗೊಂಡಿದೆ.

ರಸ್ತೆಯ ಮೇಲೆ ನದಿಯ ನೀರು  ಹರಿಯುತ್ತಿರುವು­ದ­ರಿಂದ ಮೊಗಳ್ಳಿ–ಭಾಶಿ ಗ್ರಾಮಗಳ ನಡು­ವಿನ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅಜ್ಜ­ರಣಿ ಸೇತುವೆ ಸಂಪೂರ್ಣ ಮುಳುಗಿ ನಾಲ್ಕು ದಿನಗಳಾಗಿವೆ.

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನಲ್ಲಿ ಮೂರು ದಿನ­ಗಳಿಂದ ಸತತವಾಗಿ ಮಳೆಯಾಗು­ತ್ತಿದ್ದು, ತಾಲ್ಲೂ­­­ಕಿ­ನಲ್ಲಿ ಪಂಚನದಿಗಳಾದ ಕಾಳಿ, ಪಾಂಡ್ರಿ, ನಾಗಿ, ನಾಶಿ ಹಾಗೂ ಕಾನೇರಿ ನದಿಗಳು ಮೈತುಂಬಿ ಹರಿಯುತ್ತಿವೆ. ಇದರಿಂದಾಗಿ ಸೂಪಾ ಜಲಾಶಯದ ಒಳಹರಿವು 35,727 ಕ್ಯೂಸೆಕ್‌ಗೆ ತಲುಪಿದೆ.

ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಕೊಂಚ ಇಳಿಕೆಯಾಗಿದೆ. ಆದರೂ ಒಂದೇ ದಿನದಲ್ಲಿ 5 ಟಿಎಂಸಿ ಅಡಿ ನೀರು ಬಂದಿದ್ದು, 56.882 ಟಿಎಂಸಿ ಅಡಿ ನೀರು ಬಂದಿದೆ.

ಶಿವಮೊಗ್ಗ ವರದಿ: ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ಜಲಾಶಯ­ಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು­ಬಂದಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,783.30 ಅಡಿ­ಗೇ­ರಿದ್ದು, ಒಳಹರಿವು 43,035 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 1,804.20 ಅಡಿ ಇತ್ತು. ಜಲಾಶಯದ ಗರಿಷ್ಠ ಮಟ್ಟ ತಲುಪಲು ಇನ್ನು 36 ಅಡಿ ನೀರಿನ ಅವಶ್ಯಕತೆ ಇದೆ.

ಭದ್ರಾ ಜಲಾಶಯದ ನೀರಿನಮಟ್ಟ 167.90 ಅಡಿಗೆ ಏರಿಕೆಯಾಗಿದೆ. ಒಳಹರಿವು 22,823 ಕ್ಯೂಸೆಕ್‌ ಇದೆ. ಜಲಾಶಯ ಭರ್ತಿಯಾಗಲು  18 ಅಡಿ ನೀರು ಬೇಕು.

ಪ್ರವಾಹ ಇಳಿಮುಖ: ವರದಾ ನದಿ ಪ್ರವಾಹ ಸ್ವಲ್ಪ ತಗ್ಗಿದೆ. ಸಾಗರ ತಾಲ್ಲೂಕಿನ ತಾಳಗುಪ್ಪ ಹೋಬಳಿಯಲ್ಲಿ ಪ್ರವಾಹ ಯಥಾಸ್ಥಿತಿ­ಯಲ್ಲಿದ್ದು, ಕೃಷಿ­ಭೂಮಿ­ಯಲ್ಲಿ ಇನ್ನೂ ನೀರು ನಿಂತಿದೆ.

ಕೆಆರ್ ಎಸ್‌ನಿಂದ ತಮಿಳುನಾಡಿಗೆ ನೀರು 12,300 ಕ್ಯೂಸೆಕ್‌ಗೆ ಏರಿಕೆ
ಮಂಡ್ಯ: ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿ­ದ್ದಂತೆಯೇ ಅಣೆಕಟ್ಟೆಯಿಂದ ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯ ಗರಿಷ್ಠ ಮಟ್ಟವು 124.80 ಅಡಿ ಇದ್ದು, 110.80 ಅಡಿಗೆ ತಲು­ಪಿದೆ. ಗುರುವಾರ 30 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳಹರಿವಿನ ಪ್ರಮಾಣ ಶುಕ್ರ­ವಾರ 36,399 ಕ್ಯೂಸೆಕ್‌ಗೆ ಹೆಚ್ಚಾಗಿದೆ. 6 ಸಾವಿರ ಕ್ಯೂಸೆಕ್‌ನಷ್ಟಿದ್ದ ಹೊರಹರಿವಿನ ಪ್ರಮಾಣವನ್ನೂ 12,300 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT