ADVERTISEMENT

ಕೃಷ್ಣ ನಾಮ ಜಪಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:52 IST
Last Updated 14 ಡಿಸೆಂಬರ್ 2017, 19:52 IST

ಚಿಂತಾಮಣಿ: ನಗರದ ಸರ್ಕಾರಿ ಆಸ್ಪತ್ರೆಗೆ ಇತ್ತೀಚೆಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ ತನಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಕೃಷ್ಣ ನಾಮ ಜಪಿಸುವಂತೆ ಬಲವಂತ ಮಾಡಿದರು ಎಂದು ಬೆಂಗಳೂರಿನ ಯಶವಂತಪುರದ ನಂದಿನಿ ಬಡಾವಣೆ ನಿವಾಸಿ ನಾಸೀಮಾ ಬಾನು ಅವರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಗರದ ಸೊಣ್ಣಶೆಟ್ಟಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಇತ್ತೀಚೆಗೆ ಬಂದಿದ್ದ ನಾಸೀಮಾ ಬಾನು ಅವರು ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಯುವ ಸುದ್ದಿ ತಿಳಿದು ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದರು.

‘ಮಂಗಳವಾರ ಆಸ್ಪತ್ರೆಯಲ್ಲಿ ನಡೆದ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡುವ ಶಿಬಿರಕ್ಕೆ ಹೋಗಿದ್ದೆ. ಅಲ್ಲಿ ನನಗೆ ವೈದ್ಯಕೀಯ ಸಿಬ್ಬಂದಿ ಎಲ್ಲ ಪರೀಕ್ಷೆ ಮಾಡಿಸಿದ ನಂತರ ನಾಲ್ಕನೆಯ ನಂಬರ್ ರೂಮಿಗೆ ಕಳುಹಿಸಿದರು. ಅಲ್ಲಿದ್ದ ವೈದ್ಯರು ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳೆಯರಿಗೆಲ್ಲ ಕೃಷ್ಣ, ಕೃಷ್ಣ ಎಂದು ಜಪಿಸುವಂತೆ ಹೇಳುತ್ತಿದ್ದರು’ ಎಂದು ನಾಸೀಮಾ ಬಾನು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನಾನು ಮುಸ್ಲಿಂ ಆಗಿದ್ದ ಕಾರಣಕ್ಕೆ ಅಲ್ಲಾ, ಅಲ್ಲಾ ಎಂದು ಹೇಳಿದೆ. ಆದರೆ ವೈದ್ಯರು ನೀನೂ ಕೃಷ್ಣ, ಕೃಷ್ಣ ಅಂತಲೇ ಹೇಳಬೇಕು. ಇಲ್ಲದಿದ್ದರೆ ನಿನಗೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎಂದರು. ಬಳಿಕ ಭಯದಿಂದ ನಾನು ಕೂಡ ಕೃಷ್ಣ, ಕೃಷ್ಣ ಎಂದು ಹೇಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದೆ. ಒತ್ತಾಯಪೂರ್ವಕವಾಗಿ ನನ್ನ ಬಾಯಲ್ಲಿ ಕೃಷ್ಣ ಎಂದು ಹೇಳಿಸಿ, ಮುಸ್ಲಿಂ ಧರ್ಮದ ಗೌರವಕ್ಕೆ ಧಕ್ಕೆ ಉಂಟು ಮಾಡಿದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ. ಆದರೆ ವೈದ್ಯರ ಹೆಸರು ಉಲ್ಲೇಖಿಸಿಲ್ಲ.

ಈ ಕುರಿತು ಆಸ್ಪತ್ರೆಯ ಅಧಿಕಾರಿಗಳನ್ನು ವಿಚಾರಿಸಿದರೆ, ‘ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಹೊರಗಡೆಯಿಂದ ವೈದ್ಯರು ಬರುತ್ತಾರೆ. ಇತ್ತೀಚೆಗೆ ಕೂಡ ಪರಸ್ಥಳದ ವೈದ್ಯರೇ ಶಿಬಿರದಲ್ಲಿ ಭಾಗವಹಿಸಿದ್ದರು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಚುಚ್ಚುಮದ್ದು ನೀಡುವಾಗ ನೋವು ಮರೆಸುವ ಉದ್ದೇಶಕ್ಕೆ ದೇವರ ನಾಮ ಜಪಿಸುವಂತೆ ಹೇಳುವುದು ಸಾಮಾನ್ಯ. ಆದರೆ ಅದನ್ನು ಬಲವಂತದಿಂದ ಮಾಡಿಸುವುದಿಲ್ಲ. ದೂರು ನೀಡಿದ ಮಹಿಳೆ ಸಂಜೆ ಮನೆ ತೆರಳಿ, ರಾತ್ರಿ ವೇಳೆ ಈ ರೀತಿ ಆರೋಪ ಮಾಡಿದ್ದಾರೆ’ ಎಂದು ತಿಳಿಸಿದರು.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರನ್ನು ಪ್ರಶ್ನಿಸಿದರೆ, ‘ಯಾವ ವೈದ್ಯರಿಗೂ ರೋಗಿಗೆ ತೊಂದರೆ ಕೊಡುವ ಉದ್ದೇಶ ಇರುವುದಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿರಬಹುದು. ದೂರು ನೀಡಿದ ಮಹಿಳೆಯ ಕುಟುಂಬದವರೊಂದಿಗೆ ಚರ್ಚಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.