ADVERTISEMENT

ಕೇಸಿಂಗ್ ಪೈಪ್‌ ಹೊರ ತೆಗೆಯುವುದಕ್ಕೆ ನಿಷೇಧ

ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಪ್ರಕಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಝುಂಜರವಾಡ ಪುನರ್ವಸತಿ ಕೇಂದ್ರದ ಬಳಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮಂಗಳವಾರ ಮುಂಜಾನೆ ತನ್ನ ಪ್ಲಾಸ್ಟಿಕ್‌ ಪೈಪ್‌ಗಳನ್ನು ಸಂಗ್ರಹಿಸಿದ ಲಾಲ್‌ಸಾಬ್‌ ಸುಬೇದಾರ
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಝುಂಜರವಾಡ ಪುನರ್ವಸತಿ ಕೇಂದ್ರದ ಬಳಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕಿಯ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮಂಗಳವಾರ ಮುಂಜಾನೆ ತನ್ನ ಪ್ಲಾಸ್ಟಿಕ್‌ ಪೈಪ್‌ಗಳನ್ನು ಸಂಗ್ರಹಿಸಿದ ಲಾಲ್‌ಸಾಬ್‌ ಸುಬೇದಾರ   

ವಿಜಯಪುರ: ‘ಕೊಳವೆಬಾವಿ ಕೊರೆಯುವ ಯಂತ್ರಗಳು ಇನ್ಮುಂದೆ ಭೂಮಿಗೆ ಅಳವಡಿಸಿದ ಕೇಸಿಂಗ್‌ ಪೈಪ್‌ ಹೊರ ತೆಗೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಸಭೆಯಲ್ಲಿ ದೂರುದಾರರಿಂದ ಬಂದ ಅರ್ಜಿಯೊಂದನ್ನು ಪರಿಗಣಿಸಿದ ಸಚಿವ ಎಂ.ಬಿ.ಪಾಟೀಲ, ‘ವಿಫಲಗೊಂಡ ಕೊಳವೆಬಾವಿಗಳ ಕೇಸಿಂಗ್‌ ತೆಗೆಯುವುದು ಅಪಾಯಕ್ಕೆ ಆಹ್ವಾನವಿತ್ತಂತೆ. ಕೇಸಿಂಗ್‌ ಇದ್ದರೆ ಅಪಾಯ ಘಟಿಸಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಿ’ ಎಂದು ಸೂಚನೆ ನೀಡುತ್ತಿದ್ದಂತೆ, ಜಿಲ್ಲಾಧಿಕಾರಿ ಸಭೆಯಲ್ಲೇ ಮೇಲಿನಂತೆ ಆದೇಶ ಹೊರಡಿಸುವುದಾಗಿ ಪ್ರಕಟಿಸಿದರು.

ಈ ನಿಟ್ಟಿನಲ್ಲಿ ಕೊಳವೆಬಾವಿ ಕೊರೆಯುವ ಯಂತ್ರದ ಮಾಲೀಕರು, ಏಜೆನ್ಸಿಯವರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಪಾಲಿಸದವರ ವಿರುದ್ಧ ಕಾನೂನಿನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಚಿವರಿಗೆ ತಿಳಿಸಿದರು.

ADVERTISEMENT

‘ಈ ಹಿಂದೆ ನಮ್ಮ ಜಿಲ್ಲೆಯಲ್ಲೇ ಕಹಿ ಘಟನೆ ನಡೆದ ಬಳಿಕ ಕಠಿಣ ಕಾನೂನು ತಂದರೂ ಪ್ರಯೋಜನವಾಗಿಲ್ಲ. ಜನರಿಗೆ ಜಾಗೃತಿ ಮೂಡಿಸಿದರೂ ಅನಾಹುತ ನಡೆಯುವುದು ನಿಂತಿಲ್ಲ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರ ಜತೆ ಮಾತನಾಡಿ, ರಾಜ್ಯದಾದ್ಯಂತ ಇದೇ ನಿಷೇಧವನ್ನು ವಿಸ್ತರಿಸಲು ಚರ್ಚಿಸಲಾಗುವುದು’ ಎಂದು ಎಂ.ಬಿ.ಪಾಟೀಲ ಹೇಳಿದರು.

‘ಜಿಲ್ಲಾ ಪಂಚಾಯ್ತಿಯ ಲೆಕ್ಕದಲ್ಲಿ 4965 ಕೊಳವೆಬಾವಿಗಳಿದ್ದು, ಝುಂಜರವಾಡ ಗ್ರಾಮದಲ್ಲಿ ಘಟನೆ ನಡೆಯುತ್ತಿದ್ದಂತೆ ಇವುಗಳ ಸ್ಥಿತಿಗತಿಯ ವರದಿಯನ್ನು 48 ತಾಸಿನೊಳಗೆ ನೀಡುವಂತೆ ಸೂಚಿಸಲಾಗಿದೆ’ ಎಂದು ಸಿಇಓ ಎಂ.ಸುಂದರೇಶಬಾಬು ಮಾಹಿತಿ ನೀಡಿದರು.

ಝುಂಜರವಾಡ ವರದಿ:  ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಕಾವೇರಿ ಅಂತ್ಯಕ್ರಿಯೆ ಸೋಮವಾರ ತಡರಾತ್ರಿ 1.10ರ ವೇಳೆಗೆ ನಡೆಯಿತು.

ಜಿಲ್ಲಾಧಿಕಾರಿ ಎನ್‌.ಜಯರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್‌.ರವಿಕಾಂತೇಗೌಡ ಬಾಲಕಿಯ ಅಂತ್ಯಸಂಸ್ಕಾರ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿದ್ದರು. ಧಾರ್ಮಿಕ ವಿಧಿಯಂತೆ ಕಾವೇರಿಯ ಸಮಾಧಿಗೆ ಮೂರು ಹಿಡಿ ಮಣ್ಣು ಹಾಕಿದರು.

ಗುಂಡಿ ಮುಚ್ಚಿ: ಕಾವೇರಿಯ ರಕ್ಷಣೆಗಾಗಿ ಶಂಕರಪ್ಪ ಅಪ್ಪಣ್ಣ ಹಿಪ್ಪರಗಿ ಹೊಲದಲ್ಲಿ ತೋಡಿದ್ದ ಸುರಂಗವನ್ನು ಕಾರ್ಯಾಚರಣೆ ಪೂರ್ಣಗೊಳ್ಳುತ್ತಿದ್ದಂತೆ ರಾತ್ರಿಯೇ ಮುಚ್ಚಲಾಗಿತ್ತು. ಆದರೆ ಸುರಂಗ ತೋಡುವುದಕ್ಕೂ ಮುನ್ನ ಅಗೆದಿದ್ದ 12 ಅಡಿಗೂ ಹೆಚ್ಚಿನ ಆಳದ ಗುಂಡಿಯನ್ನು ಮುಚ್ಚದೆ, ಹೊಲದಲ್ಲಿದ್ದ ಎಲ್ಲ ಬೃಹತ್‌ ಯಂತ್ರೋಪಕರಣಗಳು ತಮ್ಮ ಸದ್ದಡಗಿಸಿ ಜಾಗದಿಂದ ತೆರಳಿದ್ದವು.

‘ಹಾದಿ ಬದಿಯಲ್ಲಿರುವ ಹೊಲವಿದು. ಘಟನೆ ನಡೆಯುತ್ತಿದ್ದಂತೆ ಮಾಲೀಕ ನಾಪತ್ತೆಯಾಗಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ಆತನ ಕುಟುಂಬ ವರ್ಗದವರು ಈ ಬೃಹತ್ ಪ್ರಮಾಣದ ಗುಂಡಿ ಮುಚ್ಚಿಸುವುದು ಅನುಮಾನ. ಜಿಲ್ಲಾಡಳಿತವೇ ಕಾಳಜಿಯಿಂದ ತೋಡಿದ್ದ ಗುಂಡಿಯನ್ನು ಮುಚ್ಚಿಸಿದ್ದರೆ, ಪುನರ್ವಸತಿ ಕೇಂದ್ರದ ಜನರು, ಈ ಹಾದಿಯಲ್ಲಿ ಸಂಚರಿಸುವ ಸಾರ್ವಜನಿಕರು ನಿರುಮ್ಮಳರಾಗಿರುತ್ತಿದ್ದರು’ ಎಂದು ಝುಂಜರವಾಡ ಗ್ರಾಮದ ರಫೀಕ್ ಮೀರಾಗೋಳ್ ತಿಳಿಸಿದರು.

(ಪುತ್ರ ಪವನ್ ಜತೆ ಅಜಿತ ಮಾದರ)

ವಸ್ತುಗಳಿಗಾಗಿ ಹುಡುಕಾಟ: ‘ಕಾವೇರಿ ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳುತ್ತಿದ್ದಂತೆ ಸುಟ್ಟಟ್ಟಿ ಗ್ರಾಮದ ಬಿಜೆಪಿ ಕಾರ್ಯಕರ್ತರು ನನ್ನ ತೋಟದ ವಸತಿ ಬಳಿ ಬಂದು ಮೂರ್ನಾಲ್ಕು ಹೊಸ ಪಿವಿಸಿ ಪೈಪ್ ತಂದಿದ್ದರು. ಆ ಸಂದರ್ಭವೇ ಅಲ್ಲಿಯೇ ಬಿಟ್ಟಿರಿ. ಎಲ್ಲ ಮುಗಿದ ಮೇಲೆ ನಾನೇ ವಾಪಸ್‌ ತರುವೆ ಎಂದು ತಿಳಿಸಿದ್ದೆ. ಮಂಗಳವಾರ ನಸುಕಿನಲ್ಲೇ ಕಾರ್ಯಾಚರಣೆ ನಡೆದ ಸ್ಥಳಕ್ಕೆ ಬಂದು ಹೊಲದ ತುಂಬಾ ಹುಡುಕಾಡಿದರೂ ಪೈಪ್ ಸಿಗಲಿಲ್ಲ’ ಎಂದು ಲಾಲ್‌ಸಾಬ್‌ ಸುಬೇದಾರ ಹೇಳಿದರು.

‘ಎಂಎಲ್‌ಎ, ಡಿಸಿ, ಎಸ್‌ಪಿ ಮತ್ತಿತರ ಗಣ್ಯರು ಕುಳಿತುಕೊಳ್ಳಲು ಖುರ್ಚಿಗಳು ಬೇಕು ಎನ್ನುತ್ತಿದ್ದಂತೆ ಪುನರ್ವಸತಿ ಕೇಂದ್ರದ ಮನೆಗಳಿಗೆ ತೆರಳಿ 12 ಖುರ್ಚಿ ತಂದಿದ್ದೆ. ಅವು ಅವರಿವರ ಮನೆಯಲ್ಲಿ ಬೇಡಿ ತಂದಿದ್ದವು. ಇದೀಗ ಹೊಲದಲ್ಲಿ ನೋಡಿದರೆ ಕೇವಲ ಆರಷ್ಟೇ ಇವೆ. ಅದರಲ್ಲೂ ಎರಡು ಮುರಿದಿವೆ. ಒಂದರ ಬೆಲೆ ₹ 600ರ ಆಸುಪಾಸು. ಸುಟ್ಟಟ್ಟಿ ಗ್ರಾಮ ಪಂಚಾಯ್ತಿಯಿಂದ ತಂದಿರುವ ಖುರ್ಚಿಗಳು ಇಲ್ಲೇ ಬಿದ್ದಿವೆ. ಅವನ್ನು ಯಾರೂ ಏನು ಮಾಡಿಲ್ಲ. ನಮ್ಮವೇ ಇಲ್ಲದಂತಾಗಿವೆ. ಯಾರನ್ನೂ ಕೇಳ್ಬೇಕು ಎಂಬುದೇ ತೋಚದಂತಾಗಿದೆ’ ಎಂದು ಅಶೋಕ ಅಣ್ಣಪ್ಪ ಭಜಂತ್ರಿ ತಿಳಿಸಿದರು.

ಹೊಲದ ಬದಿಯ ಹಾದಿಯಲ್ಲಿ ಸಾಗುತ್ತಿದ್ದವರು ಗುಂಡಿಯತ್ತ ಬಂದು ನೋಡುತ್ತಿದ್ದುದು, ನಿಂತು ಮಾತನಾಡುತ್ತಿದ್ದುದು, ಕೊಕಟನೂರ ಗ್ರಾಮದ ಅಶೋಕ–ಭೀಮವ್ವ ಗೊಲ್ಲರ ದಂಪತಿ ಹೊಲದಲ್ಲಿ ಬಿದ್ದಿದ್ದ ನೀರಿನ ಪ್ಲಾಸ್ಟಿಕ್‌ ಬಾಟಲಿ ಸಂಗ್ರಹಿಸುತ್ತಿದ್ದ ದೃಶ್ಯ ಮಂಗಳವಾರ ಮುಂಜಾನೆ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಗೋಚರಿಸಿತು.

ಕೊಳವೆ ಬಾವಿ ಮಾಲೀಕನ ವಿರುದ್ಧ ‘ಉದ್ದೇಶವಲ್ಲದ ಕೊಲೆ’ ಕೇಸ್‌ ದಾಖಲು

ಬೆಳಗಾವಿ: ಆರು ವರ್ಷದ ಬಾಲಕಿ ಕಾವೇರಿ ಸಾವಿಗೆ ಕಾರಣವಾದ ತೆರೆದ ಕೊಳವೆ ಬಾವಿಯನ್ನು ಕೊರೆಸಿದ್ದ ಜಮೀನಿನ ಮಾಲೀಕ ಶಂಕರ ಹಿಪ್ಪರಗಿ ವಿರುದ್ಧ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಝುಂಜರವಾಡ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ಶಂಕರ ಹಿಪ್ಪರಗಿ ಕೊಳವೆ ಬಾವಿ ಕೊರೆಸಿದ್ದರು. ನೀರು ಬರಲಿಲ್ಲವೆಂದು ಕೊರೆಸಿದ್ದ ಬಾವಿಯನ್ನು ಹಾಗೆಯೇ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದರು. ಶನಿವಾರ ಸಂಜೆ ಕಾವೇರಿ ಆಕಸ್ಮಿಕವಾಗಿ ಕಾಲು ಜಾರಿ ಈ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಳು. ಕಾವೇರಿ ಸಾವಿಗೆ ತೆರೆದ ಕೊಳವೆ ಬಾವಿ ಕಾರಣವಾಗಿರುವುದರಿಂದ ಅದನ್ನು ಕೊರೆಸಿದ ಮಾಲೀಕನ ವಿರುದ್ಧ ಐಪಿಸಿ 304 (ಉದ್ದೇಶವಲ್ಲದ ಕೊಲೆ) ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ತೆರೆದ ಕೊಳವೆ ಬಾವಿ ಹಾಗೂ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು 2014ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶವನ್ನು ಪಾಲಿಸದಿರುವುದಕ್ಕೆ ಐಪಿಸಿ 188 ಅಡಿ ಶಂಕರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.
‘ದುರ್ಘಟನೆ ಸಂಭವಿಸಿದ ದಿನದಿಂದ ಶಂಕರ ಹಿಪ್ಪರಗಿ ಪರಾರಿಯಾಗಿದ್ದಾರೆ. ಇವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕೊಳವೆಬಾವಿ

ಬೇಲೂರು: ತಾಲ್ಲೂಕಿನ ಅಡವಿ ಬಂಟೇನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಕೊಳವೆ ಬಾವಿಯೊಂದು ಬಾಯ್ದೆರೆದು ನಿಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಸರ್ಕಾರವೇ ಕೊರೆಸಿರುವ ಕೊಳವೆ ಬಾವಿ ವಿಫಲವಾಗಿದ್ದರೂ, ಅದನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ.

ಬೇಲೂರು– ಹಾಸನ ರಸ್ತೆಯಿಂದ ಅಡವಿ ಬಂಟೇನಹಳ್ಳಿಗೆ ಹೋಗುವ ರಸ್ತೆಯಲ್ಲಿ ಅರ್ಧ ಕಿ.ಮೀ ಕ್ರಮಿಸಿದರೆ ಈ ಕೊಳವೆ ಬಾವಿ ಸಿಗುತ್ತದೆ. ಕೊಳವೆ ಬಾವಿಗೆ ಕೇಸಿಂಗ್‌ ಪೈಪ್‌ ಅಳವಡಿಸಲಾಗಿದ್ದು, ಮುಚ್ಚಳ ಹಾಕಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

‘ಕೊಳವೆ ಬಾವಿಯೊಳಕ್ಕೆ ಬಿದ್ದು ಮಕ್ಕಳು ಸಾಯುವ ಘಟನೆಗಳು ಆಗಾಗ ಸಂಭವಿಸುತ್ತಿದ್ದರೂ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಮುಚ್ಚುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮುನ್ನ ಕೊಳವೆ ಬಾವಿ ಮುಚ್ಚಿಸಲು ಮುಂದಾಗಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ
ಬೆಳಗಾವಿ:
ಜಿಲ್ಲೆಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯೊಳಗೆ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಕಾವೇರಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ.

‘ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಗ್ರಾಮದಿಂದ ಉದ್ಯೋಗ ಅರಸಿ ಝುಂಜರವಾಡಕ್ಕೆ ಕಾವೇರಿ ಅವರ ತಂದೆ ಅಜಿತ್‌ ಮಾದರ ಹಾಗೂ ತಾಯಿ ಸಾವಿತ್ರಿ ಬಂದಿದ್ದರು. ಪರಿಶಿಷ್ಟ ಜಾತಿ– ಪಂಗಡಕ್ಕೆ ಸೇರಿದ ಕುಟುಂಬ ಇದಾಗಿದ್ದು, ಅತ್ಯಂತ ಕಡುಬಡತನದಲ್ಲಿದೆ. ಮಾನವೀಯತೆ ಆಧಾರದ ಮೇಲೆ ಇವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಆರ್ಥಿಕ ನೆರವು ನೀಡಬೇಕೆಂದು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ತಿಳಿಸಿದರು.

* ಜಿಲ್ಲಾಡಳಿತ ಗುಂಡಿ ಮುಚ್ಚದಿದ್ದರೂ, 15 ಅಡಿ ಆಳದ ಸುರಂಗ ಮುಚ್ಚಿರುವುದು ನಮ್ಮ ಪುಣ್ಯ. ರಾತ್ರಿಯೇ ಈ ಕೆಲಸ ಮುಗಿಸಿದ್ದು ಒಳ್ಳೆಯ ಬೆಳವಣಿಗೆ

– ಅಶೋಕ ಅಣ್ಣಪ್ಪ ಭಜಂತ್ರಿ, ಝುಂಜರವಾಡ ಪುನರ್ವಸತಿ ಕೇಂದ್ರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.