ADVERTISEMENT

ಕೊಟ್ಟಿದ್ದು ಕುರಿ ಸಾಕಣೆಗೆ; ಬಳಸಿದ್ದು ಅನ್ಯ ಉದ್ದೇಶಕ್ಕೆ

ಜಿಲ್ಲಾಧಿಕಾರಿ ಶಿಫಾರಸು

ಮಂಜುನಾಥ್ ಹೆಬ್ಬಾರ್‌
Published 7 ಡಿಸೆಂಬರ್ 2017, 19:27 IST
Last Updated 7 ಡಿಸೆಂಬರ್ 2017, 19:27 IST
ಕೊಟ್ಟಿದ್ದು ಕುರಿ ಸಾಕಣೆಗೆ; ಬಳಸಿದ್ದು ಅನ್ಯ ಉದ್ದೇಶಕ್ಕೆ
ಕೊಟ್ಟಿದ್ದು ಕುರಿ ಸಾಕಣೆಗೆ; ಬಳಸಿದ್ದು ಅನ್ಯ ಉದ್ದೇಶಕ್ಕೆ   

ಬೆಂಗಳೂರು: ಕುರಿ ಸಾಕಲು ನೀಡಿದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿ ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಸಾತನೂರು ಗ್ರಾಮದ 397 ಎಕರೆ 10 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಮಂಗಳವಾರ ಶಿಫಾರಸು ಮಾಡಿದ್ದಾರೆ.

ಬಾಗಲಗುಂಟೆ ಸಮೀಪದ ಈ ಗ್ರಾಮದ ಸರ್ವೆ ಸಂಖ್ಯೆ 35ರಲ್ಲಿ 90 ಎಕರೆ ಹಾಗೂ ಸರ್ವೆ ಸಂಖ್ಯೆ 67ರಲ್ಲಿ 307 ಎಕರೆ 10 ಗುಂಟೆ ಜಾಗ ಇದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಪಕ್ಕದಲ್ಲೇ ಈ ಜಾಗ ಇದೆ. ಇಲ್ಲಿ ಪ್ರತಿ ಎಕರೆಗೆ ಮಾರ್ಗಸೂಚಿ ದರ ₹10 ಕೋಟಿ ಇದೆ. ಈ ಜಾಗದ ಒಟ್ಟು ಮೌಲ್ಯ ₹4,000 ಕೋಟಿ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಇಲ್ಲಿನ 150 ಎಕರೆ ಜಾಗದಲ್ಲಿ ಹೆಸರಾಂತ ಶಿಕ್ಷಣ ಸಂಸ್ಥೆಯ ಮೈದಾನ ಹಾಗೂ ವಾಹನ ನಿಲುಗಡೆ ತಾಣ, ಕ್ಲಬ್‌ ಹಾಗೂ ಹಲವು ಕಟ್ಟಡಗಳು ಇವೆ. ಉಳಿದ ಜಾಗ ಖಾಲಿ ಇದೆ. ಇದನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಬೇಕು ಎಂದು ಯಲಹಂಕ ತಹಶೀಲ್ದಾರ್‌ ಅವರು ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗೆ (ಎ.ಸಿ.) ಈ ವರ್ಷದ ನವೆಂಬರ್‌ 28ರಂದು ಪ್ರಸ್ತಾವ ಸಲ್ಲಿಸಿದ್ದರು. ಈ ಜಾಗವನ್ನು ಆದಷ್ಟು ಶೀಘ್ರ ಸ್ವಾಧೀನಕ್ಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಉಪವಿಭಾಗಾಧಿಕಾರಿ ಟಿಪ್ಪಣಿ ಕಳುಹಿಸಿದ್ದರು.

ADVERTISEMENT

ಏನಿದು ಪ್ರಕರಣ: ಕುರಿ ಸಾಕಣೆ ಹಾಗೂ ಹುಲ್ಲು ಬೆಳೆಸಲು 397 ಎಕರೆ ನೀಡುವಂತೆ ಹಾಜಿ ಹುಸೇನ್‌ ಸಾಬ್‌ ಎಂಬುವರು ಜಿಲ್ಲಾಧಿಕಾರಿಗೆ 1925ರಲ್ಲಿ ಮನವಿ ಸಲ್ಲಿಸಿದ್ದರು. ಪ್ರತಿ ಎಕರೆಗೆ ₹2ರಂತೆ ತಾತ್ಕಾಲಿಕ ಕಂದಾಯ ನಿಗದಿಪಡಿಸಿ ಈ ಜಾಗವನ್ನು ಮಂಜೂರು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದರು. ‘₹ 2 ಕಂದಾಯ ಕಟ್ಟಲು ಸಾಧ್ಯವಿಲ್ಲ. ಇದನ್ನು ಎಂಟಾಣೆಗೆ ಇಳಿಸಬೇಕು’ ಎಂದು ಹುಸೇನ್‌ ಕೋರಿದ್ದರು. ಇದಕ್ಕೆ ಸಮ್ಮತಿಸಿದ್ದ ಡಿ.ಸಿ ಅವರು ಮೈಸೂರು ಕಂದಾಯ ಆಯುಕ್ತ  ಸಿ.ಎಸ್‌. ಬಾಲಸುಂದರಂ ಅಯ್ಯರ್‌ ಅವರಿಗೆ 1925ರ ಜೂನ್‌ 1ರಂದು ಪ್ರಸ್ತಾವ ಸಲ್ಲಿಸಿದ್ದರು. ‘ಭೂ ಕಂದಾಯ ನಿಯಮ 46ರ ಅಡಿಯಲ್ಲಿ ಐದು ವರ್ಷಗಳ ತಾತ್ಕಾಲಿಕ ಅವಧಿಗೆ ಕುರಿ ಸಾಕಣೆಗೆ ಜಾಗ ನೀಡಬಹುದು’ ಎಂದು ಅವರು ಮೈಸೂರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಸಂಬಂಧ ಮೈಸೂರು ಮಹಾರಾಜರು 1925ರ ನವೆಂಬರ್‌ 13ರಂದು ಆದೇಶ (ಆರ್‌ 2441–2/ಎಲ್‌ಆರ್/20–25–2) ಹೊರಡಿಸಿದ್ದರು. ‘ಅನ್ಯ ಉದ್ದೇಶಕ್ಕೆ ಬಳಸಿದರೆ ಜಾಗವನ್ನು ಅವಧಿಗೆ ಮುನ್ನವೇ ವಾಪಸ್‌ ‍ಪಡೆಯಲಾಗುತ್ತದೆ’ ಎಂದು ಷರತ್ತು ವಿಧಿಸಿದ್ದರು.

‘ಈ ಮಂಜೂರಾತಿಯನ್ನೇ ಶಾಶ್ವತ ಮಂಜೂರಾತಿ ಎಂದು ಅರ್ಜಿದಾರರು ಭಾವಿಸಿದ್ದರು. ಐದು ವರ್ಷ ಕಳೆದ ಬಳಿಕ ಜಮೀನು ವಾಪಸ್‌ ಮಾಡಿರಲಿಲ್ಲ. ಅದಾದ ಮೇಲೆ ಅಧಿಕಾರಿಗಳೂ ಕ್ರಮ ಕೈಗೊಂಡಿರಲಿಲ್ಲ. ಆ ನಂತರ ಅನಧಿಕೃತ ಕ್ರಯಪತ್ರದ ಮೂಲಕ ಜಾಗವನ್ನು ಮಾರಾಟ ಮಾಡಲಾಗಿತ್ತು. ಜಿಲ್ಲಾಡಳಿತ ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿತ್ತು. ಈ ಜಾಗದಲ್ಲಿ ಕುರಿ ಸಾಕಣೆಯೂ ನಡೆಯುತ್ತಿಲ್ಲ. ಜಾಗದ ಮಾಲೀಕರಿಗೆ ನೋಟಿಸ್‌ ನೀಡಿದ್ದೇವೆ. ಅದಕ್ಕೆ ಅವರಿಂದ ಉತ್ತರ ಬಂದಿರಲಿಲ್ಲ. ಹಾಗಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮುಖ್ಯಾಂಶಗಳು

*ಪ್ರತಿ ಎಕರೆಗೆ ಎಂಟಾಣೆಯಂತೆ 1925ರಲ್ಲಿ ಜಾಗ ಮಂಜೂರು

*ಅನಧಿಕೃತ ಕ್ರಯಪತ್ರದ ಮೂಲಕ ಹಲವರಿಗೆ ಜಾಗ ಮಾರಾಟ

*ಪ್ರಸ್ತುತ ಪ್ರತಿ ಎಕರೆಯ ಮಾರ್ಗಸೂಚಿ ದರ ₹10 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.