ADVERTISEMENT

ಕೊಡಗಿನಲ್ಲಿ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 10 ಜೂನ್ 2016, 19:30 IST
Last Updated 10 ಜೂನ್ 2016, 19:30 IST

ಬೆಂಗಳೂರು: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಬಿಡುವು ನೀಡದೇ ಸುರಿಯುತ್ತಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುರುವಾರ ರಾತ್ರಿ ಸುರಿದ ಮಳೆ, ಗಾಳಿಗೆ ಕೆಲವು ಬಡಾವಣೆಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಮಡಿಕೇರಿ ತಾಲ್ಲೂಕಿನಾದ್ಯಂತ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಕೆ.ನಿಡುಗಣೆ ಸಮೀಪದ ಅಬ್ಬಿಫಾಲ್ಸ್‌ ನಿಧಾನವಾಗಿ ಮೈದುಂಬುತ್ತಿದೆ. ಬೇಸಿಗೆಯಲ್ಲಿ ಸೊರಗಿದ್ದ ಫಾಲ್ಸ್‌ ಈಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲೂ ಮಳೆ ರಭಸದಿಂದ ಸುರಿಯುತ್ತಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು ಭಾಗದಲ್ಲಿ ಸತತ ಮಳೆ ಸುರಿದಿದೆ.
ಮಲೆನಾಡಿನಲ್ಲಿ ಮಳೆ ಸಿಂಚನ: ಮಲೆನಾಡು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶುಕ್ರವಾರ ಮುಂಗಾರು ಮಳೆಯ ಸಿಂಚನ ಮುಂದುವರಿದೆ.

ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಹೊರನಾಡು, ಬಾಳೆಹೊನ್ನೂರು, ವಸ್ತಾರೆ, ಆಲ್ದೂರು, ಆವತಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯಿತು. ರಾತ್ರಿ 7.30ರ ನಂತರ ಮತ್ತೆ ಜಿಟಿಜಿಟಿ ಮಳೆ ಸುರಿಯಲಾರಂಭಿಸಿದೆ. ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ, ತರೀಕೆರೆ ಹಾಗೂ ಕಡೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಆಗಾಗ್ಗೆ ಮಳೆ ಸುರಿಯಿತು.

ಜಿಟಿಜಿಟಿ ಮಳೆ: ಶಿವಮೊಗ್ಗ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿದಿದೆ. ಸಾಗರ, ಭದ್ರಾವತಿ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ ತಾಲ್ಲೂಕುಗಳಲ್ಲಿ ಮಳೆಯಾಗಿದೆ.

ಕೆಲವೆಡೆ ಮಳೆ: ಉತ್ತರ ಕರ್ನಾಟಕ ಭಾಗದಲ್ಲಿ ಶುಕ್ರವಾರ ಮಳೆ ಕ್ಷೀಣಿಸಿದ್ದು, ಉತ್ತರ ಕನ್ನಡ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯಲ್ಲಿ ಮಾತ್ರ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಮಳೆ ಮುಂದುವರಿದಿದ್ದು, ಕಾರವಾರ, ಗೋಕರ್ಣ, ಸಿದ್ದಾಪುರ, ಹಳಿಯಾಳದಲ್ಲಿ ಸಾಧಾರಣ ಮಳೆಯಾಗಿದೆ.   ಧಾರವಾಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದ್ದು, ಹುಬ್ಬಳ್ಳಿ ನಗರದಲ್ಲಿ ಸುಮಾರು 15 ನಿಮಿಷ ರಭಸದ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.