ADVERTISEMENT

ಗಾಜಿನ ಪುಡಿ ಎರಚಿದ ಕಪಿಲ್‌ ಮೋಹನ್‌ ?

ಅಕ್ರಮ ಆಸ್ತಿ ಸಂಪಾದನೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST

ಬೆಂಗಳೂರು:   ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಐಎಎಸ್‌ ಅಧಿಕಾರಿ ಕಪಿಲ್ ಮೋಹನ್‌ ಅವರು ಏಕಾಏಕಿ ಲೋಕಾಯುಕ್ತ ಐಜಿಪಿ ಹಾಗೂ ಎಸ್ಪಿ ಕೊಠಡಿ ಎದುರು ಸೋಮವಾರ ಗಾಜು ಮಿಶ್ರಿತ ಪುಡಿ ಎರಚಿದರೆಂದು ಹೇಳಲಾಗಿದೆ.

ಕಪಿಲ್‌ ಮೋಹನ್‌ ಸೋಮವಾರ ಮಧ್ಯಾಹ್ನ 1.45 ಕ್ಕೆ ಲೋಕಾಯುಕ್ತ ಎಸ್ಪಿ ಅಬ್ದುಲ್‌ ಅಹದ್‌ ಅವರನ್ನು ಭೇಟಿಯಾಗಲು ಬಂದರು. ಆದರೆ, ಈ ಸಂದರ್ಭದಲ್ಲಿ ಲೋಕಾಯುಕ್ತ ಐಜಿಪಿ  ಪ್ರಣಬ್‌ ಮೊಹಾಂತಿ ಹಾಗೂ ಎಸ್ಪಿ ಅಬ್ದುಲ್‌ ಅಹದ್‌  ಕಚೇರಿಯಲ್ಲಿ ಇರಲಿಲ್ಲ. ಇವರಿಬ್ಬರೂ ಎಡಿಜಿಪಿ  ಎಸ್‌.ಪರಶಿವಮೂರ್ತಿ ಅವರ ಕಚೇರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

ಅಧಿಕಾರಿಗಳು ಸ್ವಲ್ಪ ಸಮಯದಲ್ಲಿ ವಾಪಸ್‌ ಬರಲಿದ್ದು, ಕೊಠಡಿ ಮುಂಭಾಗ ಕಾಯುವಂತೆ ಕಪಿಲ್ ಮೋಹನ್  ಅವರಿಗೆ ಸಿಬ್ಬಂದಿ ತಿಳಿಸಿದರು.
‘ ಆದರೆ, ಕಪಿಲ್‌ ಮೋಹನ್ ಅಲ್ಲಿ ನಿಲ್ಲದೆ ವಾಪಸ್ ಹೊರಟರು. ಹಾಗೆ ಹೋಗುವ ಮುನ್ನ ಐಜಿಪಿ ಮತ್ತು ಎಸ್ಪಿ ಕೊಠಡಿ ಎದುರು ಗಾಜು ಮಿಶ್ರಿತ ಪುಡಿಯನ್ನು ಚೆಲ್ಲಿದರು’ ಎಂದು ಸಿಬ್ಬಂದಿ ಸುದ್ದಿಗಾರರಿಗೆ ಹೇಳಿದರು.

ಪುಡಿಯನ್ನು ಸಂಗ್ರಹಿಸಿರುವ ಲೋಕಾಯುಕ್ತ ಪೊಲೀಸರು, ಅದನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.  ಕಪಿಲ್‌ ಮೋಹನ್‌ ಲೋಕಾಯುಕ್ತ ಕಚೇರಿಗೆ ಆಗಮಿಸಿ  ಹೊರ ಹೋಗಿರುವುದು ಸಿಸಿಟಿವಿಯಲ್ಲಿ  ಸೆರೆಯಾಗಿದ್ದು, ಅದನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ನಡುವೆ ಕಪಿಲ್‌ ಮೋಹನ್‌ ಪರವಾಗಿ ಅವರ ಸಿಬ್ಬಂದಿ 3.30ರ ವೇಳೆಗೆ ಲೋಕಾಯುಕ್ತ ಕಚೇರಿಗೆ ಬಂದು ಪತ್ರವೊಂದನ್ನು ಹಸ್ತಾಂತರಿಸಿದರು.   ‘ತಮ್ಮ ನೋಟೀಸ್‌ಗೆ ಉತ್ತರ ನೀಡುವ ಸಲುವಾಗಿ ಬಂದಿದ್ದಾಗ ಯಾರೂ ಇಲ್ಲದ ಕಾರಣ ವಾಪಸ್‌ ತೆರಳಿದೆ’ ಪತ್ರದಲ್ಲಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ  ಕಪಿಲ್‌ ಮೋಹನ್‌ ವಿರುದ್ಧ ಲೋಕಾಯುಕ್ತದಲ್ಲಿ ಮೊಕದ್ದಮೆ ದಾಖಲಾಗಿದೆ. ಜೂ.23 ರೊಳಗೆ ಉತ್ತರ ನೀಡುವಂತೆ 7 ರಂದೇ ಲೋಕಾಯುಕ್ತ ಪೊಲೀಸರು ನೋಟೀಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.