ADVERTISEMENT

ಗೋಡೆ ಕುಸಿದು ತಾಯಿ–ಮಗಳು ಸಾವು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಚಾಮರಾಜನಗರದ ಚಿಕ್ಕಹೊಳೆ ಜಲಾಶಯ 10 ವರ್ಷದ ನಂತರ ಭರ್ತಿಯಾಗಿದ್ದು, ಬುಧವಾರ ಗೇಟ್ ತೆರೆದು ನೀರು ಹೊರಬಿಡಲಾಯಿತು
ಚಾಮರಾಜನಗರದ ಚಿಕ್ಕಹೊಳೆ ಜಲಾಶಯ 10 ವರ್ಷದ ನಂತರ ಭರ್ತಿಯಾಗಿದ್ದು, ಬುಧವಾರ ಗೇಟ್ ತೆರೆದು ನೀರು ಹೊರಬಿಡಲಾಯಿತು   

ಬೆಂಗಳೂರು: ರಾಜ್ಯದ ಹಲವೆಡೆ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ವಿಜಯಪುರ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿದು ತಾಯಿ– ಮಗಳು ಬುಧವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ. ರಾಜ್ಯದ ಕೆಲವು ಕಡೆಗಳಲ್ಲೂ ಮನೆ ಗೋಡೆ ಕುಸಿದು ಹಲವರು ಗಾಯಗೊಂಡಿದ್ದಾರೆ. ನದಿ, ಹಳ್ಳ–ಕೊಳ್ಳಗಳು, ಕೆರೆ–ಕಟ್ಟೆಗಳು ಭರ್ತಿಯಾಗಿವೆ. ಕೆಲವು ಕಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಬೈರವಾಡಗಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು, ಪತ್ರಾಸ್‌ (ತಗಡು) ಶೆಡ್‌ನಲ್ಲಿದ್ದ ಶಂಕ್ರಮ್ಮ ರಾಮಚಂದ್ರ ಅವರಾದಿ (60) ಹಾಗೂ ಅವರ ಪುತ್ರಿ ಮಹಾದೇವಿ ರಾಮಚಂದ್ರ ಅವರಾದಿ (30) ಮೃತಪಟ್ಟಿದ್ದಾರೆ ಎಂದು ಬಸವನ ಬಾಗೇವಾಡಿ ತಹಶೀಲ್ದಾರ್ ಎಂ.ಎನ್‌.ಚೋರಗಸ್ತಿ ತಿಳಿಸಿದರು.

ಪ್ರವಾಹ: ವಿಜಯಪುರ ಜಿಲ್ಲೆಯ ಡೋಣಿ ನದಿಗೆ ಮತ್ತೆ ಪ್ರವಾಹ ಬಂದಿದೆ. ತಾಳಿಕೋಟೆ ಸಮೀಪದ ಹಡಗಿನಾಳ ಕೆಳಮಟ್ಟದ ಸೇತುವೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಸಿಂದಗಿ ತಾಲ್ಲೂಕಿನ ಮದನಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಹಶೀಲ್ದಾರ್ ವೀರೇಶ ಬಿರಾದಾರ ತಿಳಿಸಿದರು.

ADVERTISEMENT

ಆಲಮಟ್ಟಿ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ. ಮಂಗಳವಾರ 25,080 ಕ್ಯುಸೆಕ್‌ ಇದ್ದ ಒಳಹರಿವು ಬುಧವಾರ 35,080 ಕ್ಯುಸೆಕ್‌ಗೆ ಏರಿದೆ. ಜಲಾಶಯ ಭರ್ತಿಯಾಗಿರುವ ಕಾರಣ ಒಳ ಹರಿವಿನಷ್ಟೇ, ಹೊರ ಹರಿವು ಇದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆ: ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಗಳಲ್ಲಿ ಅತಿ ಹೆಚ್ಚು ಮಳೆ ಬಿದ್ದಿದೆ. ಹಾರೋಹಳ್ಳಿಯ ಗಾಣಾಳುದೊಡ್ಡಿ ಕೆರೆಯ ಕೋಡಿ ತುಂಬಿ ನೀರು ರಸ್ತೆಗೆ ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 209 ಜಲಾವೃತಗೊಂಡಿತ್ತು. ಇದರಿಂದ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಿದ್ದವು.

ಹಾರೋಹಳ್ಳಿಯ ಚಿಕ್ಕಕೆರೆ ಹಾಗೂ ಗಾಣಾಳುದೊಡ್ಡಿಯ ಕೆರೆ ನೀರು ಕೈಗಾರಿಕಾ ಪ್ರದೇಶಕ್ಕೆ ನುಗ್ಗಿತ್ತು. ಅರ್ಕಾವತಿ, ವೃಷಭಾವತಿ, ಸನಂದಾ, ಕಣ್ವ ಮೊದಲಾದ ನದಿಗಳಲ್ಲಿ ನೀರಿನ ಪ್ರವಾಹ ಹೆಚ್ಚಿದೆ.

ಮಹದೇಶ್ವರ ದೇವಸ್ಥಾನ ಮುಂಭಾಗ ಜಲಾವೃತ: ಚಾಮರಾಜನಗರ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಮಳೆ ಅಬ್ಬರಿಸಿದ್ದು, ಮಲೆಮಹದೇಶ್ವರಬೆಟ್ಟದ ಮಹದೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಲಾವೃತವಾಗಿದೆ.

ಬೆಟ್ಟದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬಂಡೆಗಲ್ಲು ಮತ್ತು ಮಣ್ಣು ಕುಸಿದು ಬಿದ್ದ ಪರಿಣಾಮ ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೂ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ 7 ಮಂದಿ ಗಾಯಗೊಂಡಿದ್ದಾರೆ.

ಭರ್ತಿಯಾದ ಜಲಾಶಯ: ಚಾಮರಾಜನಗರ ತಾಲ್ಲೂಕಿನ ಚಿಕ್ಕಹೊಳೆ ಜಲಾಶಯ ಹತ್ತು ವರ್ಷದಲ್ಲಿ ಮೊದಲ ಬಾರಿಗೆ ಭರ್ತಿಯಾಗಿದೆ.

ಧಾರಾಕಾರ ಮಳೆಗೆ ಮೈಸೂರಿನ ಶ್ರೀರಾಂಪುರದ ಹತ್ತಾರು ಮನೆಗಳಿಗೆ ನೀರು ನುಗ್ಗಿತ್ತು. ಪೀಠೋಪಕರಣ ಸೇರಿ ಹಲವು ವಸ್ತುಗಳು ನೀರಿನಲ್ಲಿ ತೇಲುತ್ತಿದ್ದವು. ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಸ್ಥಳೀಯರು ಮಾನಾಂದವಾಡಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಚಿನಗಿರಿಕೊಪ್ಪಲುವಿನಲ್ಲಿ ಮನೆಯೊಂದು ಕುಸಿದಿದೆ.

ಹೆಚ್ಚು ಮಳೆ: ಬೀದರ್‌ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ. ಔರಾದ್‌ ತಾಲ್ಲೂಕಿನ ಕಮಲ ನಗರದಲ್ಲಿ 10.5 ಸೆಂ.ಮೀ., ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಖಜೂರಿಯಲ್ಲಿ 8.8 ಸೆಂ.ಮೀ. ಮಳೆ ಸುರಿದಿದೆ.

ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ: ಕಲಬುರ್ಗಿ ಜಿಲ್ಲೆ ಸೇಡಂ ಸಮೀಪದ ಕಮಲಾವತಿ ನದಿಗೆ ನಿರ್ಮಿಸಿದ್ದ ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ₹40 ಲಕ್ಷ ವೆಚ್ಚದಲ್ಲಿ ಮೂರು ತಿಂಗಳ ಹಿಂದಷ್ಟೇ ಈ ಸೇತುವೆ ನಿರ್ಮಿಸಲಾಗಿತ್ತು. ರಾಯಚೂರು ಜಿಲ್ಲೆ ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಯರಗುಂಟದಲ್ಲಿ ನಾಲ್ಕು, ಜೇಗರಕಲ್ ಗ್ರಾಮದಲ್ಲಿ 5 ಮನೆಗಳು ಭಾಗಶಃ ಕುಸಿದಿವೆ.

ಕವಿತಾಳ ಸಮೀಪದ ಹುಸೇನಪುರ ರಸ್ತೆಯಲ್ಲಿ ಹಳ್ಳ ತುಂಬಿ ಹರಿದು ಹುಸೇನಪುರ, ಸೈದಾಪುರ, ಕಡ್ಡೋಣಿ ತಿಮ್ಮಾಪುರ, ತೊಪ್ಪಲದೊಡ್ಡಿ ಗ್ರಾಮಸ್ಥರು ಪರದಾಡಿದರು. ತೊಪ್ಪಲದೊಡ್ಡಿ ಹಳ್ಳದ ನೀರು ಸೇತುವೆ ಮೇಲೆ ಹರಿದು ನೂರಾರು ಎಕರೆಯಲ್ಲಿ ಬೆಳೆದ ಹತ್ತಿ, ತೊಗರಿ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಬಿರುಸಿನ ಮಳೆ: ಚಿತ್ರದುರ್ಗ ಹಾಗೂ ದಾವಣಗೆರೆ ನಗರದಾದ್ಯಂತ ಬುಧವಾರ ಸಂಜೆ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು. ನಗರದ ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡು, ವಾಹನ ಸವಾರರು ಪರದಾಡಿದರು.

ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ಬಿರುಸಿನ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಕೆಲವೆಡೆ ಹದ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.