ADVERTISEMENT

ಚಾಮರಾಜನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST
ಚಾಮರಾಜನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಚಾಮರಾಜನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ   

ಚಾಮರಾಜನಗರ: ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರಸ್ವಾಮಿ ಬ್ರಹ್ಮರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಕೃತ್ಯ ಖಂಡಿಸಿ ಭಕ್ತ ಮಂಡಳಿಯಿಂದ ಸೋಮವಾರ ಕರೆ ನೀಡಿದ್ದ ಚಾಮರಾಜನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿತ್ತು. ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪೆಟ್ರೋಲ್‌ ಬಂಕ್‌, ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲಿಲ್ಲ. ಬ್ಯಾಂಕ್ ಚಟುವಟಿಕೆ ಸ್ಥಗಿತಗೊಂಡಿತ್ತು. ಇದರಿಂದ ಗ್ರಾಹಕರು ಪರದಾಡುವಂತಾಯಿತು.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ಸಂಚಾರಕ್ಕೆ ಯಾವುದೇ ಧಕ್ಕೆಯಾಗಿರಲಿಲ್ಲ. ಜನನಿಬಿಡ ಸ್ಥಳವಾಗಿರುವ ದೊಡ್ಡಅಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಬಿ.ರಾಚಯ್ಯ ಜೋಡಿರಸ್ತೆ, ಗುಂಡ್ಲುಪೇಟೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೃತ್ಯ ಖಂಡಿಸಿ ಶ್ರೀಕೆಂಪನಾಂಜಾಂಬ ಸಮೇತ ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಭಕ್ತ ಮಂಡಳಿಯ ನೇತೃತ್ವದಡಿ ಪ್ರತಿಭಟನೆ ನಡೆಯಿತು. ಮೆರವಣಿಗೆ ನಡೆಸಿದ ಭಕ್ತರು ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ದೇವಸ್ಥಾನದ ಆವರಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಬಾರದು. ದೇಗುಲದ ಜೀರ್ಣೋದ್ಧಾರಕ್ಕೆ ₹ 5 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಮನವಿ ಸಲ್ಲಿಸಿದರು.

3 ತಂಡ ರಚನೆ: ದುಷ್ಕರ್ಮಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರು 3 ವಿಶೇಷ ತಂಡ ರಚಿಸಿದ್ದಾರೆ. ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.