ADVERTISEMENT

ಚುರ್ ಎನ್ನುವ ಮಿರ್ಚಿ ಮಂಡಕ್ಕಿ!

ಹಳ್ಳಿ ಹೋಟೆಲ್‌ಗಳಲ್ಲಿ ದುಪ್ಪಟ್ಟು ದರ...

ಕೆ.ನರಸಿಂಹ ಮೂರ್ತಿ
Published 28 ಮೇ 2015, 19:30 IST
Last Updated 28 ಮೇ 2015, 19:30 IST
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ಹೋಟೆಲ್‌ನಲ್ಲಿ ಅಭ್ಯರ್ಥಿ ಯೊಬ್ಬರು ಕಾರ್ಯಕರ್ತರಿಗೆ ಮಿರ್ಚಿ ಮಂಡಕ್ಕಿ ವ್ಯವಸ್ಥೆ ಮಾಡಿದ್ದರು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ಹೋಟೆಲ್‌ನಲ್ಲಿ ಅಭ್ಯರ್ಥಿ ಯೊಬ್ಬರು ಕಾರ್ಯಕರ್ತರಿಗೆ ಮಿರ್ಚಿ ಮಂಡಕ್ಕಿ ವ್ಯವಸ್ಥೆ ಮಾಡಿದ್ದರು   

ಬಳ್ಳಾರಿ: ಉತ್ತರ ಕರ್ನಾಟಕ ಭಾಗದ ಜನರ ಇಷ್ಟದ ತಿನಿಸಾದ ಮಿರ್ಚಿ ಮಂಡಕ್ಕಿಯ ದರವು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ಏಕಾಏಕಿ ದುಪ್ಪಟ್ಟಾಗಿದೆ.

ಸುಡುವ ಬಿಸಿಲ ನಡುವೆ ಏರಿದ ದರದ ಕಾವಿನಲ್ಲಿ ಅಭ್ಯರ್ಥಿಗಳು ಬಳಲಿದ್ದಾರೆ. ಕಾರ್ಯಕರ್ತರು ಮಾತ್ರ ‘ಅದು ನಮಗೆ ಸಂಬಂಧಿಸಿದ್ದಲ್ಲ’ ಎನ್ನುತ್ತಾ ಮಿರ್ಚಿ ಮೆಲ್ಲುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಹೋಟೆಲ್‌ಗಳಲ್ಲಿ ಚುನಾ ವಣೆ ಕಾರ್ಯಕರ್ತರಿಗೆಂದೇ ತಾತ್ಕಾ ಲಿಕವಾಗಿ ಪ್ರತ್ಯೇಕ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದೆ. ಕಾರ್ಯಕರ್ತರು ತಿನ್ನುವಷ್ಟೂ ಬಿಸಿ ಮಿರ್ಚಿ, ಮಂಡಕ್ಕಿ ಖಾಲಿಯಾಗುತ್ತಿದೆ.

ಚುನಾವಣೆಯ ಬಹಳಷ್ಟು ಅಭ್ಯ ರ್ಥಿಗಳು ಕಾರ್ಯಕರ್ತರಿಗೆ ಕಡಿಮೆ ದರದ ಮಿರ್ಚಿ ಮಂಡಕ್ಕಿಯನ್ನು ಉಣಬ ಡಿಸಿ ಖರ್ಚು ನಿಭಾಯಿಸಬಹುದು ಎಂದೇ ಲೆಕ್ಕ ಹಾಕಿದ್ದರು. ಆದರೆ ಹಳ್ಳಿ ಹೋಟೆ ಲ್‌ಗಳ ಮಾಲೀಕರು ಬೆಲೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಚುನಾವಣೆ ಘೋಷಣೆಯಾಗುವ ವರೆಗೂ ಹಳ್ಳಿಗಳಲ್ಲಿ ಮಿರ್ಚಿ–ಮಂಡಕ್ಕಿಯ ಒಂದು ಪ್ಲೇಟ್‌ಗೆ ಕೇವಲ ₨ 10 ಇತ್ತು. ನಾಮಪತ್ರ ವಾಪಸ್‌ ಪಡೆ ಯಲು ಕೊನೆಯ ದಿನವಾದ ಸೋಮ ವಾರದಿಂದಲೇ ಬೆಲೆ ₨ 20ಕ್ಕೆ ಏರಿದೆ.

ಹೋಟೆಲ್‌ ಭರ್ತಿ: ದರ ದುಪ್ಪಟ್ಟಾ ದರೂ, ಜನ ಇಷ್ಟಪಡುವುದರಿಂದ, ಅಭ್ಯರ್ಥಿಗಳು ಅನಿವಾರ್ಯವಾಗಿ ಅದೇ ಪದಾರ್ಥವನ್ನು ಹೋಟೆಲ್‌ಗಳಲ್ಲಿ ಕಾರ್ಯಕರ್ತರಿಗೆ ಉಣಬಡಿಸುತ್ತಿದ್ದಾರೆ, ಹೀಗಾಗಿ ಹಳ್ಳಿಯ ಹೋಟೆಲ್‌ಗಳು ಕಾರ್ಯಕರ್ತರಿಂದ ಭರ್ತಿಯಾಗಿಯೇ ಇರುವುದು ಕಂಡು ಬರುತ್ತಿದೆ.

ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಪಂಚಾಯಿತಿ ಕೇಂದ್ರವಾದ ಗುಡೇಕೋಟೆ ಗ್ರಾಮಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಹೋಟೆಲ್‌ನಲ್ಲಿ ಅಭ್ಯರ್ಥಿಯೊಬ್ಬರು ಮಿರ್ಚಿ ಮಂಡಕ್ಕಿ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ ಬಿಸಿಲೇರುವ ಮುನ್ನವೇ ಪ್ರಚಾರ ಆರಂಭಿಸಿದ್ದ ಕಾರ್ಯಕರ್ತರು  ಲಗುಬ ಗೆಯಿಂದ ಹೊಟ್ಟೆ ತುಂಬಿಸಿ ಕೊಳ್ಳು ತ್ತಿದ್ದರು.

‘ಒಂದ್‌ ಕಾಲ್‌ದಾಗ ಮಿರ್ಚಿ ಮಂಡಕ್ಕಿ, ಟೀ ಕೊಟ್ರೆ ಸಾಕು, ನಿಂಗೇ ಓಟ್‌ ಹಾಕ್ತೀವಿ ಅಂತಿದ್ರು ಜನ. ಆದ್ರೆ ಈಗ ಕಾಲ ಬದ್ಲಾಗೈತೆ. ಮಿರ್ಚಿ ಮಂಡಕ್ಕಿ ಜೊತ್ಗೆ ಟೀ ಕೊಟ್ರೆ ಸಾಲ್ದು ಅಂತಾರೆ. ಇನ್ನೂ ಚೆನ್ನಾಗ್‌ ನೋಡ್ಕಬೇಕ್ ಅಂತಾರೆ’ ಎಂದು ಅಭ್ಯರ್ಥಿಯು ತಮ್ಮ ಪರಿಸ್ಥಿತಿ ಯನ್ನು ವಿವರಿಸಿದರು.

ಜಿಲ್ಲೆಯ ಹೋಟೆಲ್‌ಗಳಲ್ಲಿ ಅಭ್ಯರ್ಥಿ ಗಳು ಉಪ್ಪಿಟ್ಟು, ಚಿತ್ರಾನ್ನದ ವ್ಯವಸ್ಥೆ ಮಾಡಿದರೂ, ಕಾರ್ಯಕರ್ತರು ಮಿರ್ಚಿ, ಮಂಡಕ್ಕಿಯೇ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಮಿರ್ಚಿ ಎಂಬುದು ಅಭ್ಯರ್ಥಿಗಳಿಗೆ ಎಂದಿಗಿಂತಲೂ ಹೆಚ್ಚು ಖಾರವಾದ ಪದಾರ್ಥವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.