ADVERTISEMENT

‘ಜಿಎಸ್‌ಟಿ’ಯತ್ತ ದೃಢ ಹೆಜ್ಜೆ...; ಸದ್ಯಕ್ಕೆ ಹೊಸ ತೆರಿಗೆ ಹೊರೆ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:52 IST
Last Updated 15 ಮಾರ್ಚ್ 2017, 19:52 IST
‘ಜಿಎಸ್‌ಟಿ’ಯತ್ತ ದೃಢ ಹೆಜ್ಜೆ...; ಸದ್ಯಕ್ಕೆ ಹೊಸ ತೆರಿಗೆ ಹೊರೆ ಇಲ್ಲ
‘ಜಿಎಸ್‌ಟಿ’ಯತ್ತ ದೃಢ ಹೆಜ್ಜೆ...; ಸದ್ಯಕ್ಕೆ ಹೊಸ ತೆರಿಗೆ ಹೊರೆ ಇಲ್ಲ   

ಬೆಂಗಳೂರು: ದೇಶದಾದ್ಯಂತ ಜುಲೈ ತಿಂಗಳಿನಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ  ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆಗಳನ್ನು  ವಿಧಿಸುವ ಗೋಜಿಗೆ ರಾಜ್ಯ ಸರ್ಕಾರ ಮುಂದಾಗಿಲ್ಲ.

ಆದರೆ, ಮದ್ಯ ಮತ್ತು ದ್ವಿಚ್ರಕ ವಾಹನ ತೆರಿಗೆಯನ್ನು ಮಾತ್ರ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿದೆ. ಈಗಾಗಲೇ ಜಾರಿಯಲ್ಲಿರುವ ತೆರಿಗೆ ವ್ಯವಸ್ಥೆಯಲ್ಲಿಯೇ ತೆರಿಗೆ ಪ್ರಮಾಣದಲ್ಲಿ ತುಸು ಹೆಚ್ಚಳ ಮಾಡುವ ಮೂಲಕ ₹137 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಯೋಜನೆ ರೂಪಿಸಿದೆ.

ಸ್ಥಿತ್ಯಂತರಕ್ಕೆ ಜಿಎಸ್‌ಟಿ ಅನುಕೂಲ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ರಾಜ್ಯವು ಸುಗಮವಾಗಿ ಸ್ಥಿತ್ಯಂತರಗೊಳ್ಳಲಿದೆ’ ಎಂದು ಸರ್ಕಾರ ತಿಳಿಸಿದೆ.

ADVERTISEMENT

‘ರಾಜ್ಯದಲ್ಲಿ ಜಿಎಸ್‌ಟಿ ಜಾರಿಗೆ ವಿಧಾನಸಭೆಯು  ಅಂಗೀಕಾರ ನೀಡಿದೆ. ಜಿಎಸ್‌ಟಿ ನೀತಿಯ ಚೌಕಟ್ಟನ್ನು ರಚಿಸುವ ಪ್ರಕ್ರಿಯೆಯಲ್ಲಿ ನಾವು ಸಕ್ರೀಯವಾಗಿ ಪಾಲ್ಗೊಂಡಿದ್ದೇವೆ.ತೆರಿಗೆದಾರರನ್ನು ಜಿಎಸ್‌ಟಿ ವ್ಯವಸ್ಥೆಯೊಳಗೆ ತರುವ ಕಾರ್ಯ ಪ್ರಗತಿಯಲ್ಲಿದೆ.

ಜಿಎಸ್‌ಟಿ ವ್ಯವಸ್ಥೆಯನ್ನು ಸುಗಮವಾಗಿ ಅನುಷ್ಠಾನಕ್ಕೆ ತರಲು ವಾಣಿಜ್ಯ ತೆರಿಗೆ ಇಲಾಖೆಯ 3 ಸಾವಿರಕ್ಕೂ ಹೆಚ್ಚಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ.

ತೆರಿಗೆ ವಿನಾಯ್ತಿ: ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು, ಸಂಸ್ಕರಿಸಿದ ರಾಗಿ ಮತ್ತು ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಯಲಿದೆ.

ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಮತ್ತು ಬರಗು ಇವುಗಳ ಹಿಟ್ಟುಗಳಿಗೆ ತೆರಿಗೆಯಿಂದ ವಿನಾಯ್ತಿ ಸಿಗಲಿದೆ. ದ್ವಿದಳಧಾನ್ಯಗಳು ಮತ್ತು ತೆಂಗಿನ ಕಾಯಿ ಸಿಪ್ಪೆಗೂ ತೆರಿಗೆ ವಿನಾಯ್ತಿ ನೀಡಲಾಗಿದೆ.

ನೋಟು ರದ್ದತಿಯಿಂದ ರಾಜ್ಯದ ಅರ್ಥ ವ್ಯವಸ್ಥೆ  ಮತ್ತು ತೆರಿಗೆ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಆಗಿದೆ.  ಹೀಗಿದ್ದರೂಜಿಎಸ್‌ಟಿ ಪರಿಗಣಿಸಿ ಈ ವರ್ಷ ವಾಣಿಜ್ಯ ತೆರಿಗೆಯಿಂದ ₹55 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಮಾಡಲಾಗಿದೆ.

ಕರಸಮಾಧಾನ ಯೋಜನೆ
ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬರುವುದರಿಂದ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿ ಇರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವ್ಯವಸ್ಥೆ ಕೈಬಿಡಲು ಸರ್ಕಾರ ನಿರ್ಧರಿಸಿದೆ.

ವರ್ತಕರ ಸಮುದಾಯವು ಹೊಸ ತೆರಿಗೆ ವ್ಯವಸ್ಥೆಗೆ ಸೇರಲು  ಅನುಕೂಲ ಆಗುವಂತಹ ‘ಕರ ಸಮಾಧಾನ’ ಯೋಜನೆ ಜಾರಿಗೆ ತರಲಾಗಿದೆ.

ವಾಣಿಜ್ಯೋದ್ಯಮಿಗಳು ಬಾಕಿ ಇರುವ ಪೂರ್ಣ ತೆರಿಗೆ ಹಾಗೂ ಬಾಕಿ ಇರುವ ದಂಡ ಮತ್ತು ಬಡ್ಡಿಯ ಶೇ 10 ರಷ್ಟನ್ನು 2017ರ ಮೇ 31ರ ಒಳಗೆ ಪಾವತಿಸಿದರೆ ಇನ್ನುಳಿದ ಶೇ 90ರಷ್ಟು ಮೊತ್ತಕ್ಕೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅನುಕೂಲ ಆಗುವಂತೆ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಜಿಎಸ್‌ಟಿ ಜಾರಿಗೆ ತರುವುದಕ್ಕೆ ಇರುವ ಅಡಚಣೆಗಳನ್ನು ದೂರ ಮಾಡಲು ಈ ಯೋಜನೆಯು ನೆರವಾಗಲಿದೆ.

‘ಜಿಎಸ್‌ಟಿ’ಯತ್ತ ದೃಢ ಹೆಜ್ಜೆ...
* ₹6,945ಕೋಟಿ 2017–18ನೇ ಸಾಲಿನಲ್ಲಿ ತೆರಿಗೆಯೇತರ ವರಮಾನಗಳಿಂದ ಸಂಗ್ರಹಿಸಬಹುದಾದ ಮೊತ್ತ. ಕೇಂದ್ರ ತೆರಿಗೆ ರೂಪದಲ್ಲಿ ₹31,908 ಕೋಟಿ ಮತ್ತು ಅನುದಾನ ರೂಪದಲ್ಲಿ

* ₹16,082 ಕೋಟಿ ಸಂಗ್ರಹವಾಗುವ ನಿರೀಕ್ಷೆ

* ₹11,279ಕೋಟಿ ಸರ್ಕಾರಿ ಒಡೆತನದ ವಿವಿಧ ಮಂಡಳಿ, ನಿಗಮ ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲಗಳ ಮೂಲಕ ಕ್ರೋಡೀಕರಣಗೊಳ್ಳಲಿರುವ ಮೊತ್ತ. ಇಥೆನಾಲ್ ಹೊರತುಪಡಿಸಿ, ಸ್ಪಿರಿಟ್ ರಫ್ತಿನ ಮೇಲೆ ಪ್ರತಿ ಲೀಟರ್‌ಗೆ ₹ 2 ರಂತೆ ಮತ್ತು ಆಮದಿನ ಮೇಲೆ ಲೀಟರ್‌ಗೆ ₹ 1 ರಂತೆ ವಿಧಿಸಲಾಗಿದ್ದ ಆಡಳಿತಾತ್ಮಕ ಶುಲ್ಕ ಹಿಂದೆ ಪಡೆಯಲಾಗಿದೆ.

* ₹1.31 ಲಕ್ಷ ಕೋಟಿ ತೆರಿಗೆ ವರಮಾನವು  ಏರಿಕೆ ಪ್ರಮಾಣ. ಆರ್ಥಿಕ ವರಮಾನದ ಕಾಯ್ದೆ ಜಾರಿಗೆ ತಂದಾಗಿನಿಂದ ತೆರಿಗೆ ಸುಧಾರಣೆ  ಮತ್ತು ತೆರಿಗೆ ಆಡಳಿತಾತ್ಮಕ ಕ್ರಮಗಳು ಹೆಚ್ಚಿನ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣಕ್ಕೆ ನೆರವಾಗಿವೆ.

ಆರ್ಥಿಕ ಮುನ್ನೋಟ
* ₹137 ಕೋಟಿ ಹೆಚ್ಚುವರಿ ತೆರಿಗೆಯಿಂದ ಸಂಗ್ರಹವಾಗುವ ಅಂದಾಜು ಮೊತ್ತ

* ₹2.42ಲಕ್ಷ ಕೋಟಿ ಒಟ್ಟು ಸಾಲದ ಪ್ರಮಾಣ. ಇದು ರಾಜ್ಯದ ಒಟ್ಟು ಜಿಡಿಪಿಯ  ಶೇ 18.93 ರಷ್ಟಾಗಲಿದೆ

* ₹33,359 ಕೋಟಿ ವಿತ್ತೀಯ ಕೊರತೆ (ವರಮಾನ ಮತ್ತು ವೆಚ್ಚದ ನಡುವಣ ಅಂತರ) ಅಂದಾಜು

* ₹89,957ಕೋಟಿ ರಾಜ್ಯದ  ಸ್ವಂತ ತೆರಿಗೆ ಸಂಗ್ರಹ ನಿರೀಕ್ಷೆ

ದ್ವಿಚಕ್ರ ವಾಹನ ದುಬಾರಿ
ಒಂದು ಲಕ್ಷಕ್ಕೂ ಅಧಿಕ ಬೆಲೆಯ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 18ರವರೆಗೂ ಹೆಚ್ಚಿಸಲಾಗಿದೆ. ಇದರಿಂದ ₹60 ಕೋಟಿಗಳವರೆಗೆ ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಲೆಕ್ಕಾಚಾರ ಹಾಕಲಾಗಿದೆ.

ವಾಹನ ನೋಂದಣಿ ಗುರಿ ಮೀರಿದ ಸಾಧನೆ

2016–17ನೇ ಹಣಕಾಸು ವರ್ಷದಲ್ಲಿ  ವಾಹನಗಳ ನೋಂದಣಿ ಮೂಲಕ ಸಂಗ್ರಹವಾಗುವ ತೆರಿಗೆಯಲ್ಲಿ ಗುರಿ ಮೀರಿದ ಸಾಧನೆ ಸಾಧ್ಯವಾಗಿದೆ.

ಈ ಬಾಬತ್ತಿನಲ್ಲಿ   ₹ 5,160 ಕೋಟಿಗಳಷ್ಟು ತೆರಿಗೆ ಸಂಗ್ರಹವಾಗುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, ವಾಹನಗಳ ನೋಂದಣಿಯಲ್ಲಿ ಏರಿಕೆ ಕಂಡು ಬಂದಿದ್ದರಿಂದ ₹ 290 ಕೋಟಿಗಳಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದೆ. ಹೀಗಾಗಿ ನಿಗದಿಪಡಿಸಿದ  ಗುರಿಗಿಂತ ಹೆಚ್ಚಿನ ಪ್ರಮಾಣದ ತೆರಿಗೆ (₹ 5,450 ಕೋಟಿ) ಸಂಗ್ರಹವಾಗಲಿದೆ ಎಂದು ರಾಜ್ಯ ಸರ್ಕಾರ ನಿರೀಕ್ಷೆ ಮಾಡಿದೆ. ದ್ವಿಚಕ್ರ  ವಾಹನಗಳಿಗೆ ಸಂಬಂಧಿಸಿದಂತೆ 2010ರಿಂದ ಮೋಟಾರು ವಾಹನ ತೆರಿಗೆ ಹೆಚ್ಚಳ ಮಾಡಿರುವುದಿಲ್ಲ.

ಮದ್ಯ ತುಟ್ಟಿ
‘ಮದ್ಯದ ಮೇಲಿನ ರಾಜ್ಯ ಅಬಕಾರಿ ಸುಂಕವನ್ನು ಶೇ 6 ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ಕೈಬಿಡಲಾಗಿದೆ’ ಎಂದು ಎಫ್‌ಕೆಸಿಸಿಐನ ತೆರಿಗೆ ಸಮಿತಿ ಅಧ್ಯಕ್ಷ ಮನೋಹರ್‌ ಬಿ.ಟಿ ಅವರು, ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಈ ಮೊದಲು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಗ್ರಾಹಕರು ಮದ್ಯದ ಜತೆಗೆ ಖರೀದಿಸುತ್ತಿದ್ದ ನೀರು, ಕುರುಕಲು ತಿನಿಸುಗಳ ಬೆಲೆಯನ್ನೂ ಸೇರಿಸಿ ಶೇ 5.5 ರಷ್ಟು ವ್ಯಾಟ್‌ ವಸೂಲಿ ಮಾಡುತ್ತಿದ್ದವು. ಆದರೆ, ಇದರಲ್ಲಿ ಮದ್ಯಕ್ಕೆ ವಿಧಿಸುವ ‘ವ್ಯಾಟ್‌’  ಮಾತ್ರ ಸರ್ಕಾರದ ಬೊಕ್ಕಸ  ಸೇರುತ್ತಿತ್ತು. ಏಪ್ರಿಲ್‌ 1 ರಿಂದ ‘ವ್ಯಾಟ್‌ ’ ಕೈಬಿಡಲಾಗಿದೆ. ಇದರಿಂದ ಮದ್ಯಕ್ಕೆ ವಿಧಿಸುವ ಶೇ 6 ರಷ್ಟು ಅಬಕಾರಿ ಸುಂಕ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ನೋಟು ರದ್ದತಿ: ತೆರಿಗೆ ನಷ್ಟ
ಕೇಂದ್ರ ಸರ್ಕಾರ ನವೆಂಬರ್‌ನಲ್ಲಿ ₹1000 ಮತ್ತು ₹500ರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ  ಪ್ರಸಕ್ತ ಹಣಕಾಸು ವರ್ಷದ ತೆರಿಗೆ ಸಂಗ್ರಹದಲ್ಲಿ ಇಳಿಕೆ ಕಂಡುಬರಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಸರ್ಕಾರ ಹೇಳಿದೆ.

2016–17ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ₹9,100 ಕೋಟಿ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿತ್ತು. ಆದರೆ, ನೋಟು ರದ್ದತಿಯಿಂದ 2016ರ ನಂತರ ದಾಖಲತೆಗಳ ನೋಂದಣಿ ಪ್ರಮಾಣ ಶೇ 25 ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮದಿಂದ ₹1,350 ಕೋಟಿಗಳಷ್ಟು ತೆರಿಗೆ ನಷ್ಟವಾಗಲಿದ್ದು, ತೆರಿಗೆ ಸಂಗ್ರಹ ಪ್ರಮಾಣ ₹7,750  ಕೋಟಿಗಳಿಗೆ ಇಳಿಕೆಯಾಗಲಿದೆ.

---

* ಅಕ್ಕಿ, ಗೋಧಿ, ರಾಗಿಗೆ ತೆರಿಗೆ ವಿನಾಯ್ತಿ ನೀಡಿರುವುದು ಸ್ವಾಗತಾರ್ಹ ಕ್ರಮ. ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ವ್ಯಾಟ್‌ ಕೈಬಿಟ್ಟಿರುವುದು ಉತ್ತಮ ನಡೆ
-ಎಂ.ಸಿ. ದಿನೇಶ್‌, ಎಫ್‌ಕೆಸಿಸಿಐ ಅಧ್ಯಕ್ಷ

* ಇದೊಂದು ಉತ್ತಮ ಬಜೆಟ್‌. ಜನಸಾಮಾನ್ಯರಿಗೆ ತೆರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ. ಉದ್ಯಮಿಗಳು ಕರಸಮಾಧಾನ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು
-ಮನೋಹರ್‌ ಬಿ.ಟಿ, ಎಫ್‌ಕೆಸಿಸಿಐನ  ತೆರಿಗೆ ಸಮಿತಿ ಅಧ್ಯಕ್ಷ

* ಜಿಎಸ್‌ಟಿ ಜಾರಿಗೆ ಸಂಬಂಧಿಸಿದಂತೆ  ಬಜೆಟ್ ನಿರ್ಧಾರ ಉತ್ತಮವಾಗಿದೆ. ಬಾಕಿ ಇರುವ ಸಾಲ ಮರುಪಾವತಿಗೆ ಕರಸಮಾಧಾನ ಯೋಜನೆ ಉದ್ಯಮಿಗಳಿಗೆ ನೆರವಾಗಲಿದೆ
-ಎಸ್‌. ವೆಂಕಟರಮಣಿ, ಬಿಸಿಐಸಿ, ರಾಜ್ಯ ತೆರಿಗೆ ತಜ್ಞರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.