ADVERTISEMENT

ಟಿಪ್ಪು ಜಯಂತಿ ಹಗ್ಗ ಜಗ್ಗಾಟ

ಶಿಷ್ಟಾಚಾರ ಪಾಲಿಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:47 IST
Last Updated 21 ಅಕ್ಟೋಬರ್ 2017, 19:47 IST
ಟಿಪ್ಪು ಜಯಂತಿ ಹಗ್ಗ ಜಗ್ಗಾಟ
ಟಿಪ್ಪು ಜಯಂತಿ ಹಗ್ಗ ಜಗ್ಗಾಟ   

ಬೆಂಗಳೂರು: ಟಿಪ್ಪು ಜಯಂತಿ ಕುರಿತಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪುನಾ ಹಗ್ಗಜಗ್ಗಾಟ ಆರಂಭವಾಗಿದೆ.

‘ಇದು ಕೋಮು ಗಲಭೆಗೆ ಪ್ರಚೋದನೆ ನೀಡುವುದರಿಂದ ಆಚರಣೆ ಮಾಡಬಾರದು’ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಆದರೆ, ‘ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ನಾಯಕರಾದ ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ ಟಿಪ್ಪು ಜಯಂತಿ ಆಚರಣೆ ಕೂಡದು ಎಂದು ಪಟ್ಟು ಹಿಡಿದಿದ್ದಾರೆ.

ADVERTISEMENT

‘ಸರ್ಕಾರದ ವತಿಯಿಂದ ಈ ಆಚರಣೆ ನಡದೇ ತೀರುತ್ತದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದ ಅನ್ವಯ ಗಣ್ಯರ ಹೆಸರು ಹಾಕಲಾಗುವುದು. ಬರುವುದು ಅಥವಾ ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

‘ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಪತ್ರಕ್ಕೆ ರಾಜ್ಯದ ಸಚಿವರು ಮತ್ತು ಕಾಂಗ್ರೆಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಬಿಜೆಪಿ ನಾಯಕರ ನಿಲುವನ್ನು ಖಂಡಿಸಿದ್ದಾರೆ.

ಬಿಜೆಪಿ ವಿರೋಧ:
‘ಯಾರಿಗೂ ಬೇಡವಾಗಿರುವ ಟಿಪ್ಪುಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಅಶೋಕ್ ಆರೋ‍ಪಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಜಯಂತಿ ಆಚರಿಸಲಿ. ಅದನ್ನು ಬಿಟ್ಟು ಜಾತಿ, ಧರ್ಮಗಳ ಮಧ್ಯೆ ಗಲಭೆ ಮಾಡಲು ಇಂತಹ ಜಯಂತಿ ಆಚರಣೆ ಬೇಡ. ಮುಖ್ಯಮಂತ್ರಿ ‘ಶಾಂತಿ ಸಿದ್ದರಾಮಯ್ಯ’ ಆಗಬೇಕೆ ವಿನಾ ‘ಬೆಂಕಿ ಸಿದ್ದರಾಮಯ್ಯ’ ಆಗಬಾರದು ಎಂದು ಲೇವಡಿ ಮಾಡಿದರು.

‘ಟಿಪ್ಪು ಜಯಂತಿಗೆ ಯಾರೂ ನನ್ನನ್ನು ಕರೆದಿಲ್ಲ. ಕರೆದರೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ’ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಣದಲ್ಲಿ ಆಚರಿಸಲಿ:
‘ರಾಜ್ಯದ ಜನರ ತೆರಿಗೆ ಹಣದಲ್ಲಿ ಟಿಪ್ಪು ಜಯಂತಿ ಆಚರಿಸಬಾರದು. ಬೇಕಿದ್ದರೆ ಕಾಂಗ್ರೆಸ್ ಪಕ್ಷದ ನಿಧಿಯಿಂದ ಕಾರ್ಯಕ್ರಮ ಮಾಡಲಿ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

‘ಮುಸ್ಲಿಂ ಸಮುದಾಯದಲ್ಲಿ ಮೂರ್ತಿ ಪೂಜೆ ಇಲ್ಲ. ಆ ಸಮುದಾಯದವರೇ ಜಯಂತಿ ಆಚರಿಸುವುದಿಲ್ಲ. ಅಲ್ಲದೆ, ಅವರು ಸರ್ಕಾರ ಆಚರಣೆ ಮಾಡಬೇಕು ಎಂದು ಬೇಡಿಕೆಯನ್ನೂ ಸಲ್ಲಿಸಿಲ್ಲ. ಮುಸ್ಲಿಮರ ಓಲೈಕೆಗಾಗಿ ಜಯಂತಿ ಆಚರಿಸುತ್ತಿದೆ’ ಎಂದು ಟೀಕಿಸಿದರು.

‘ಟಿಪ್ಪು ಜಯಂತಿಗೆ ಚಿತ್ರದುರ್ಗದ ನಾಯಕ ಸಮುದಾಯ, ಮಂಗಳೂರಿನ ಕ್ರೈಸ್ತ ಸಮುದಾಯ ವಿರೋಧಿಸುತ್ತಿದೆ. ಟಿಪ್ಪು ಜಯಂತಿಯಿಂದಾಗಿ ನನ್ನ ಕ್ಷೇತ್ರ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಕೆಡುತ್ತದೆ. ಹಾಗಾಗಿ ಈ ಕಾರ್ಯಕ್ರಮ ಬೇಡ’ ಎಂದೂ ಆಗ್ರಹಿಸಿದರು.

***
ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ
‘ಸರ್ಕಾರದ ವಿರುದ್ಧ ಟೀಕೆ ಮಾಡುವುದಕ್ಕೆ ಬಿಜೆಪಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಟಿಪ್ಪು ಜಯಂತಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕುವುದು ಬೇಡವೆಂದರೆ,  ಹಾಕಬಾರದು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಆರ್ಥಿಕ ಸಂಕಷ್ಟ, ನಿರುದ್ಯೋಗ ಹೆಚ್ಚಳದಿಂದ ಕೇಂದ್ರ ಸರ್ಕಾರ ಕಂಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯ ಬಿಜೆಪಿಯವರು ಟಿಪ್ಪು ವಿಷಯ ಕೈಗೆತ್ತಿಕೊಂಡಿದ್ದಾರೆ ಎಂದರು.

‘ಬಿಜೆಪಿಯವರು ಇದುವರೆಗೆ ಅಯೋಧ್ಯೆ ಬಗ್ಗೆ ಮಾತನಾಡುತ್ತಿದ್ದರು. ಈಗ ತಾಜ್‌ಮಹಲ್ ಭಾರತಕ್ಕೆ ಬೇಡ ಎನ್ನುತ್ತಿದ್ದಾರೆ. ಮುಂದೆ ಕೆಂಪುಕೋಟೆ ಬೀಳಿಸಬೇಕು ಎಂದೂ ಹೇಳುತ್ತಾರೆ’ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

***
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ‘ತಾಕತ್ತಿದ್ದರೆ ಸಿದ್ದರಾಮಯ್ಯ ಎದುರಿಸಲಿ’

ಶಿರಸಿ:
‘ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದೇ ಆದಲ್ಲಿ, ಕಾರ್ಯಕ್ರಮಕ್ಕೆ ಹಾಜರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವ ವೇದಿಕೆಯಲ್ಲೇ ಟಿಪ್ಪುವಿನ ಸಂಪೂರ್ಣ ಇತಿಹಾಸ ಬಿಚ್ಚಿಡುತ್ತೇನೆ. ತಾಕತ್ತಿದ್ದರೆ ಸಿದ್ದರಾಮಯ್ಯ ಇದನ್ನು ಎದುರಿಸಲಿ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು.

ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಪ್ಪು ಮತಾಂಧ ವ್ಯಕ್ತಿಯಾಗಿದ್ದು, ಆತನ ಜಯಂತಿ ಆಚರಿಸುವುದೇ ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದರು.

‘ಕಳೆದ ಬಾರಿಯಂತೆ ಈ ಬಾರಿಯೂ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕದಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಶಿಷ್ಟಾಚಾರದ ಹೆಸರಿನಲ್ಲಿ ನನ್ನ ಹೆಸರನ್ನು ಹಾಕಿದ್ದೇ ಆದಲ್ಲಿ ಕಾರ್ಯಕ್ರಮಕ್ಕೆ ಹೋಗಿ ಸಿದ್ದರಾಮಯ್ಯ ಅವರ ಎದುರಲ್ಲೇ ಟಿಪ್ಪು ಸುಲ್ತಾನನ ಸಂಪೂರ್ಣ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಜೊತೆಗೆ ಟಿಪ್ಪುವಿನ ವಿರುದ್ಧ ಧಿಕ್ಕಾರ ಕೂಗಿ ವೇದಿಕೆಯಿಂದ ನಿರ್ಗಮಿಸುತ್ತೇನೆ’ ಎಂದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದರು.

***
ಟಿಪ್ಪು ಜಯಂತಿ ನೆಪದಲ್ಲಿ  ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಅವಕಾಶ ನೀಡುವುದಿಲ್ಲ
– ರಾಮಲಿಂಗಾರೆಡ್ಡಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.