ADVERTISEMENT

ಡಿಸಿಐಬಿ ಇನ್‌ಸ್ಪೆಕ್ಟರ್‌ ಹೊಸಪೇಟೆಗೆ ನಿಯೋಜನೆ

ಸಾಬೀತಾಗದ ಲೈಂಗಿಕ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬಳ್ಳಾರಿ: ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಎಎಸ್‌ಐ ಒಬ್ಬರು ನಗರದ ಗಾಂಧೀನಗರ ಠಾಣೆಯ ಇನ್‌ಸ್ಪೆಕ್ಟರ್‌ ಕಾಶೀನಾಥ ಅವರ ವಿರುದ್ಧ ನೀಡಿದ್ದ ದೂರಿನ ವಿಚಾರಣೆ ಪೂರ್ಣಗೊಂಡಿದ್ದು, ಆರೋಪ ಸಾಬೀತಾಗಿಲ್ಲ. ಆದರೆ ದೂರು ದಾಖಲಾದ ಬಳಿಕ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ನಿಯೋಜನೆಗೊಂಡಿದ್ದ ಕಾಶೀನಾಥ ಅವರನ್ನು ಮತ್ತೆ ಹೊಸಪೇಟೆ ವೃತ್ತಕ್ಕೆ ನಿಯೋಜಿಸಲಾಗಿದೆ.

‘ಸುಳ್ಳು ದೂರು ನೀಡಿದ ಎಎಸ್‌ಐ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರಣವೇನು?: ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪಕ್ಕೆ ಒಳಗಾಗಿರುವ ಪಾಲಿಕೆಯ 13ನೇ ವಾರ್ಡಿನ ಸದಸ್ಯ ಗಾಜಲು ಶ್ರೀನಿವಾಸ್‌ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಪೊಲೀಸ್‌ ಅಧಿಕಾರಿಯೊಬ್ಬರು ನೀಡಿದ್ದ ಸೂಚನೆಯನ್ನು ಕಾಶೀನಾಥ ಅವರು ಪಾಲಿಸದೇ ಇದ್ದುದರಿಂದಲೇ ಎಎಸ್‌ಐ ಮೂಲಕ ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ.

ಬೆಟ್ಟಿಂಗ್‌ ದಂಧೆಗೆ ಸಂಬಂಧಿಸಿ ಮೇ 22ರಂದು ಸತ್ಯನಾರಾಯಣಪೇಟೆಯ ಮನೆಯೊಂದರ ಮೇಲೆ ಕಾಶಿನಾಥ್‌ ಸಿಬ್ಬಂದಿಯೊಂದಿಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು.
ಹೇಳಬೇಕಿತ್ತು: ‘ಪ್ರಭಾವಿ ಜನಪ್ರತಿನಿಧಿ ಹಾಗೂ ಪಾಲಿಕೆ ಸದಸ್ಯರ ಕುಮ್ಮಕ್ಕಿನಿಂದಲೇ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ನೀಡಲಾಗಿದೆ ಎಂದು ಇನ್‌ಸ್ಪೆಕ್ಟರ್‌ ಅವರು ದೂರಿನ ವಿಚಾರಣೆ ವೇಳೆ ಹೇಳಬಹುದಾಗಿತ್ತು. ಆದರೆ ಹೇಳಿಲ್ಲ. ಹೀಗಾಗಿ ಊಹಾಪೋಹಗಳನ್ನು ನಂಬಲಾಗುವುದಿಲ್ಲ. ಯಾವ ಜನಪ್ರತಿನಿಧಿಯೂ ತಮಗೆ ಪ್ರಕರಣ ಸಂಬಂಧ ಇದುವರೆಗೂ ಕರೆ ಮಾಡಿಲ್ಲ’ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾಶಿನಾಥ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ವ್ಯಾಪ್ತಿ ಪ್ರದೇಶದ ಹೊರಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.