ADVERTISEMENT

ತನಿಖೆಗೆ ಸಮಿತಿ ರಚಿಸಲು ಸರ್ಕಾರ ಆದೇಶ

ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ತನಿಖೆಗೆ ಸಮಿತಿ ರಚಿಸಲು ಸರ್ಕಾರ ಆದೇಶ
ತನಿಖೆಗೆ ಸಮಿತಿ ರಚಿಸಲು ಸರ್ಕಾರ ಆದೇಶ   
ಬೆಂಗಳೂರು: ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಆರೋಪಗಳ ತ್ವರಿತ ತನಿಖೆಗೆ ಮೂವರು ಸದಸ್ಯರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಸಿ. ಖುಂಟಿಆ ಆದೇಶಿಸಿದ್ದಾರೆ. 
 
‘ಸ್ವಾಮೀಜಿ ಮಠದಲ್ಲಿದ್ದು ಅಧಿಕಾರ ಚಲಾಯಿಸುವುದನ್ನು ತಡೆಯಬೇಕು ಮತ್ತು ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು’ ಎಂದು ಒತ್ತಾಯಿಸಿ ಎದುರ್ಕಳ ಈಶ್ವರ ಭಟ್‌ ಮತ್ತು  ಜೈಕೃಷ್ಣ  ಅವರು 2016ರ ಏಪ್ರಿಲ್‌ 30 ರಂದು ಅಂದಿನ ಮುಖ್ಯಕಾರ್ಯದರ್ಶಿ ಅರವಿಂದ್‌ ಜಾಧವ್‌ ಅವರಿಗೆ  ಮನವಿ ಸಲ್ಲಿಸಿದ್ದರು.
 
‘ಶ್ರೀಗಳ ವಿರುದ್ಧ ಆರೋಪಗಳನ್ನು  ಪರಿಶೀಲಿಸಿದಾಗ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಕಂಡುಬಂದಿದೆ. ಮಠದ ಕಾರ್ಯ ನಿರ್ವಹಣೆಯ ಪರ ಮತ್ತು ವಿರುದ್ಧ ಎರಡು ಗುಂಪುಗಳಿವೆ. ಆದ್ದರಿಂದ, ವಿಸ್ತೃತ ತನಿಖೆ ಆಗಬೇಕು.
 
ಮುಜರಾಯಿ ಇಲಾಖೆ ಆಯುಕ್ತರು ಇಂತಹ ಸೂಕ್ಷ್ಮ ವಿಷಯಗಳನ್ನು ತನಿಖೆ ನಡೆಸಲು ಅಗತ್ಯ ತಜ್ಞತೆ ಹೊಂದಿರುತ್ತಾರೆ. 1927ರ ಮೈಸೂರು ಕಾಯ್ದೆಯಡಿ ಈ ಹಿಂದೆಯೂ ಇಂತಹ ಪ್ರಕರಣಗಳನ್ನು ನಿಭಾಯಿಸಿದ್ದಾರೆ’ ಎಂದು ಖುಂಟಿಆ ಆದೇಶದಲ್ಲಿ ತಿಳಿಸಿದ್ದಾರೆ.
 
‘ಮೂವರು ಸದಸ್ಯರ ಸಣ್ಣ ಸಮಿತಿ ರಚಿಸಿ ವರದಿ ಸಲ್ಲಿಸಿದ ಬಳಿಕ ಸರ್ಕಾರ ಆಡಳಿತಾಧಿಕಾರಿ ನೇಮಕವೂ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಬಹುದಾಗಿದೆ’ ಎಂದು ಖುಂಟಿಆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.
 
ಮನವಿಯಲ್ಲಿ  ಏನಿದೆ?: ‘ಸ್ವಾಮೀಜಿ ವಿರುದ್ಧ ಇರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸಬೇಕು. ಪದಚ್ಯುತಿ ಆಗುವವರೆಗೆ ಅವರು ಮಠ ಪ್ರವೇಶಿಸಬಾರದು. ಮಠದ ಸ್ಥಿರ ಮತ್ತು ಚರಾಸ್ತಿ ಮೇಲೆ ನಿಯಂತ್ರಣ ಹೊಂದದಂತೆ ಸೂಚಿಸಬೇಕು’ ಎಂದು ಈಶ್ವರ ಭಟ್‌ ಮತ್ತು ಜೈಕೃಷ್ಣ ದೂರಿನಲ್ಲಿ ಹೇಳಿದ್ದರು.
 
‘ಪೂಜಾ ಕೈಂಕರ್ಯಗಳನ್ನು ಹೊರತುಪಡಿಸಿ ಮಠದ ವ್ಯವಹಾರಗಳನ್ನು ನೋಡಿಕೊಳ್ಳಲು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಬೇಕು.
 
ಅಲ್ಲದೆ, ಮಠದ ಸ್ಥಿರ ಮತ್ತು ಚರ ಆಸ್ತಿಗಳ ಪಟ್ಟಿ ಸಿದ್ಧಪಡಿಸಬೇಕು’ ಎಂದೂ ಆಗ್ರಹಿಸಿದ್ದರು.‘ಮಠಗಳ  ಮೇಲ್ವಿಚಾರಣೆ, ಮಠಾಧಿಪತಿಗಳ ನೇಮಕ ಹಾಗೂ 
ಅವರ ಅಮಾನತಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಸಿಬೇಕು’ ಎಂದು ಮನವಿ ಮಾಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.