ADVERTISEMENT

ತಮಿಳುನಾಡಿಗೆ 46 ಟಿಎಂಸಿ ಅಡಿ ನೀರು

ಕಾವೇರಿ: ಆಗಸ್ಟ್‌ ಮಳೆಯಿಂದ ಜಲಾಶಯಗಳ ಸ್ಥಿತಿ ಸುಧಾರಣೆ

ಎಸ್.ರವಿಪ್ರಕಾಶ್
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ತಮಿಳುನಾಡಿಗೆ 46 ಟಿಎಂಸಿ ಅಡಿ ನೀರು
ತಮಿಳುನಾಡಿಗೆ 46 ಟಿಎಂಸಿ ಅಡಿ ನೀರು   

ಬೆಂಗಳೂರು: ಇದೇ ಜೂನ್‌ನಿಂದ ಈವರೆಗೆ ಒಟ್ಟು 46 ಟಿಎಂಸಿ ಅಡಿ ಕಾವೇರಿ ನೀರು ತಮಿಳುನಾಡಿಗೆ ಹರಿದಿದೆ.

ತಮಿಳುನಾಡಿಗೆ 46 ಟಿಎಂಸಿ ಅಡಿ ನೀರು ಹರಿದು ಹೋಗಿರುವುದು ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಆಯೋಗದ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ನಿಗಮದ ತಾಂತ್ರಿಕ ನಿರ್ದೇಶಕ ಎಂ.ಬಂಗಾರು ಸ್ವಾಮಿ ‘‍‍‍ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ ಕಾವೇರಿ ನದಿ ನೀರಿನ ವಿಷಯವಾಗಿ ಕರ್ನಾಟಕ– ತಮಿಳುನಾಡು ನಡುವೆ ಸಂಘರ್ಷ ತಾರಕಕ್ಕೆ ಏರಿತ್ತು.
ಸೆಪ್ಟಂಬರ್‌ನಲ್ಲಿ 50 ಟಿಎಂಸಿ ಅಡಿ ನೀರು ಬಿಡುವಂತೆಯೂ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ರಾಜ್ಯದ ವಿವಿಧೆಡೆ ಮತ್ತು ತಮಿಳುನಾಡಿನಲ್ಲೂ ಹಿಂಸಾಚಾರ ನಡೆದಿತ್ತು.

ADVERTISEMENT

ಈ ವರ್ಷದ ಆರಂಭದಲ್ಲಿ ಮುಂಗಾರು ಕೈಕೊಟ್ಟಿತ್ತು. ಆಗಸ್ಟ್‌ ಮೊದಲ ವಾರದವರೆಗೂ ಕಾವೇರಿ ಅಚ್ಚುಕಟ್ಟಿನ ಜಲಾಶಯಗಳಲ್ಲಿ 40 ವರ್ಷಗಳಲ್ಲೇ ಅತಿಕಡಿಮೆ ನೀರಿನ ಸಂಗ್ರಹ ಇತ್ತು. ‘ಕುಡಿಯುವ ಉದ್ದೇಶಕ್ಕಲ್ಲದೆ, ಬೇರೆ ಉದ್ದೇಶಗಳಿಗೆ ನೀರು ನೀಡಲು ಸಾಧ್ಯವೆ ಇಲ್ಲ’ ಎಂದು ಸರ್ಕಾರವೇ ಸ್ಪಷ್ಟಪಡಿಸಿತ್ತು. ಹೀಗಾಗಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು.

ಆಗಸ್ಟ್‌ 14ರ ಬಳಿಕ ಸುರಿದ ಮಳೆಯಿಂದಾಗಿ ಪರಿಸ್ಥಿತಿ ಸುಧಾರಣೆಯಾಗಿದೆ. ಕಾವೇರಿ, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ನೀರಿನ ಮಟ್ಟವೂ ಏರಿಕೆ ಆಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ  ಭಾರಿ ಮಳೆ ಆಗಿದ್ದರಿಂದ ತಮಿಳುನಾಡಿಗೆ ಹೆಚ್ಚು ನೀರು ಹರಿದು ಹೋಗಿದೆ. ಇದರಿಂದಾಗಿ ಉಭಯ ರಾಜ್ಯಗಳ ಮಧ್ಯೆ ‘ಶಾಂತಿ’ ನೆಲೆಸಲು ಸಾಧ್ಯವಾಗಿದೆ ಎಂದು ನೀರಾವರಿ ನಿಗಮದ ಮೂಲಗಳು ಹೇಳಿವೆ.

ಸೋಮವಾರ ಕೆಆರ್‌ಎಸ್‌ನಲ್ಲಿ 19.98 ಟಿಎಂಸಿ ಅಡಿ, ಹೇಮಾವತಿಯಲ್ಲಿ 11.17 ಟಿಎಂಸಿ ಅಡಿ, ಹಾರಂಗಿಯಲ್ಲಿ 7.47 ಟಿಎಂಸಿ ಅಡಿ ಮತ್ತು ಕಬಿನಿಯಲ್ಲಿ 13.73 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲ್ಕು ಅಣೆಕಟ್ಟುಗಳಲ್ಲಿ ಒಟ್ಟು ಲಭ್ಯವಿರುವ ನೀರಿನ ಪ್ರಮಾಣ 52.35 ಟಿಎಂಸಿ ಅಡಿಯಷ್ಟು (ಲೈವ್‌ ಸ್ಟೋರೇಜ್) ಇದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ವರ್ಷ ಬಳಿಕ ಕಬಿನಿ ಭರ್ತಿ: ನಾಲ್ಕು ವರ್ಷಗಳ ಬಳಿಕ ಕಬಿನಿ ಜಲಾಶಯ ಭರ್ತಿ ಆಗುವ ಹಂತ ತಲುಪಿದ್ದು, ಇನ್ನು ಒಂದೆರಡು ದಿನಗಳಲ್ಲಿ ಕ್ರಸ್ಟ್‌ ಗೇಟ್‌ ತೆರೆಯಲಾಗುವುದು. ಹಾರಂಗಿ ಈಗಾಗಲೇ ತುಂಬಿದೆ. ಕೆ.ಆರ್‌.ಎಸ್‌ ಮತ್ತು ಕಬಿನಿಯಿಂದ ಕ್ರಮವಾಗಿ 6,000 ಕ್ಯೂಸೆಕ್‌ ಮತ್ತು 2,000 ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಮಳೆ ಇನ್ನೂ ಬರುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಇನ್ನಷ್ಟು ಉತ್ತಮಗೊಳ್ಳಲಿದೆ ಮೂಲಗಳು ಹೇಳಿವೆ.

ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ರಾಜ್ಯದಿಂದ ತಮಿಳುನಾಡಿಗೆ ಹರಿದು ಹೋಗಬೇಕಾದ ನೀರಿನ ಪ್ರಮಾಣ 192 ಟಿಎಂಸಿ ಅಡಿ. ಇದರಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಒಟ್ಟು 94 ಟಿಎಂಸಿ ಅಡಿ ನೀರು ಬಿಡಬೇಕು. ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಯವರ ಮಧ್ಯಸ್ಥಿಕೆಯಿಂದ ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಮಂಡಳಿ ಸೂಚಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ನ್ಯಾಯಮಂಡಳಿ ಸೂಚಿಸಿದಷ್ಟು ನೀರು ಬಿಡಲು ಸಾಧ್ಯವೇ ಆಗುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ.

ಜೂನ್‌ನಿಂದ ಆಗಸ್ಟ್‌ ಅವಧಿಯಲ್ಲಿ ಕೊಡಗು, ಹಾಸನ ಮತ್ತು ಮೈಸೂರು ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿತ್ತು. ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಣೆ ಆಗಲು ಕಾರಣ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.