ADVERTISEMENT

ದತ್ತಪೀಠ ವಿವಾದ: ರಾಜ್ಯ ಸರ್ಕಾರದ ಅಂಗಳಕ್ಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ಅಲಿಯಾಸ್‌ ಹಜರತ್ ದಾದಾ ಹಯತ್‌ ಮಿರ್‌ ಕಲಂದರ್‌ ದರ್ಗಾ ವಿವಾದ ಬಗೆಹರಿಸುವ ಹೊಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಕರ್ನಾಟಕ ಸರ್ಕಾರಕ್ಕೆ ವಹಿಸಿತು. ಇದರೊಂದಿಗೆ ಮೂರು ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ವಿವಾದ ರಾಜ್ಯ ಸರ್ಕಾರದ ಅಂಗಳಕ್ಕೆ ವರ್ಗಾವಣೆಯಾಗಿದೆ.

ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠವು, ಧಾರ್ಮಿಕ ಹಾಗೂ ದತ್ತಿ ಇಲಾಖೆ ಕಮಿಷನರ್‌ 2010ರಲ್ಲಿ ನೀಡಿರುವ ವರದಿ ಪರಿಶೀಲಿಸಿದ ಬಳಿಕ ಅರ್ಜಿದಾರ ಸಜ್ಜದ ನಶೀನ್‌ ಶಾಖಾದ್ರಿ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕರ್ನಾಟಕ ಸಚಿವ ಸಂಪುಟವು ಈ  ವಿವಾದ ಬಗೆಹರಿಸಬೇಕು ಎಂದು ಆದೇಶಿಸಿತು.

ರಾಜ್ಯ ಸರ್ಕಾರದ ತೀರ್ಮಾನದಿಂದ ಸಮಾಧಾನವಾಗದಿದ್ದರೆ ಉಭಯತರರು ಪುನಃ ಕೋರ್ಟ್‌ಗೆ ಬರುವ ಅವಕಾಶವನ್ನು ನ್ಯಾಯಪೀಠವು ಮುಕ್ತವಾಗಿರಿಸಿದೆ. ಆದರೆ,  ದರ್ಗಾದಲ್ಲಿ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲು ಮುಜಾವರ್‌ ಅವರನ್ನು ನೇಮಕ ಮಾಡಲು ಶಾಖಾದ್ರಿ ಅವರಿಗೆ ಕೋರ್ಟ್‌ ಅನುಮತಿ ನೀಡಿತು.

ದರ್ಗಾದಲ್ಲಿ ಮುಜಾವರ್‌ ನಡೆಸುವ ಧಾರ್ಮಿಕ ಆಚರಣೆಗಳ ಮೇಲುಸ್ತುವಾರಿ ನೋಡಲು ಶಾಖಾದ್ರಿ ಅವರಿಗೆ ಅವಕಾಶ ಇರಬೇಕೆಂದೂ ಕೋರ್ಟ್‌ ರಾಜ್ಯದ ವಕೀಲ ಬಸವಪ್ರಭು ಪಾಟೀಲ ಅವರಿಗೆ ಸೂಚಿಸಿತು. ಶಾಖಾದ್ರಿ ಅವರ ವಕೀಲರಾದ ನೀಲಾ ಗೋಖಲೆ, ರಾಜ್ಯ ಸರ್ಕಾರ ಈ ಮೊದಲು ದರ್ಗಾದಲ್ಲಿ ‘ಉರುಸ್‌’ ನಡೆಸಲು ಅನುಮತಿ ನಿರಾಕರಿಸಿತ್ತು ಎಂದು ವಾದಿಸಿದರು. ಈ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸರ್ಕಾರ ನಿರಾಕರಿಸಿತು.

ವಿವಾದಿತ ಸ್ಥಳದಲ್ಲಿರುವ ಮಸೀದಿ ಕೆಡವಲು ಸರ್ಕಾರ ಮುಂದಾಗಿದೆ ಎಂದು ಶಾಖಾದ್ರಿ ಮಾಡಿದ್ದ ಆರೋಪವನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ತಳ್ಳಿ ಹಾಕಿತ್ತು. ಈ ಸ್ಥಳದಲ್ಲಿ ಯಾವುದೇ ಮಸೀದಿ ಇರಲಿಲ್ಲ ಎಂದೂ ಸರ್ಕಾರ 2013ರಲ್ಲಿ ಹೇಳಿತ್ತು. ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ಅಲಿಯಾಸ್‌ ಹಜರತ್ ದಾದಾ ಹಯಾತ್‌ ಮಿರ್‌ ಕಲಂದರ್‌ ದರ್ಗಾದ ಹೆಸರನ್ನು ಧಾರ್ಮಿಕ ದತ್ತಿ ಇಲಾಖೆ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾ ಎಂದು 2012ರಲ್ಲಿ ಬದಲಾಯಿಸಿ ಫಲಕ ಹಾಕಲಾಗಿದೆ ಎಂದೂ ಶಾಖಾದ್ರಿ ದೂರಿದ್ದರು.

ವಿವಾದದ ಸ್ಥಳದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪ್ರಾರ್ಥನಾ ಸಭಾಂಗಣವೊಂದಿದೆ. ಅರ್ಜಿದಾರರು ವಾದಿಸುತ್ತಿರುವಂತೆ ಮಸೀದಿ ಕಟ್ಟಡ ಅಲ್ಲಿರಲಿಲ್ಲ ಎಂದೂ ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಪ್ರಾರ್ಥನಾ ಸಭಾಂಗಣ ಕಟ್ಟಡದಿಂದ ನೀರು ಸೋರುತ್ತಿರುವುದರಿಂದ ರಿಪೇರಿ ಮಾಡಿಸಬೇಕು ಅಥವಾ ಅದನ್ನು ಕೆಡವಬೇಕೆಂದು ಪ್ರಾಚ್ಯ ವಸ್ತು ಸರ್ವೇಕ್ಷಣಾ ಇಲಾಖೆ ಅಭಿಪ್ರಾಯಪಟ್ಟಿದೆ. ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ಪ್ರತಿ ವರ್ಷ ಸಾವಿರಾರು ಹಿಂದೂಗಳು ಹಾಗೂ ಮುಸ್ಲಿಮರು ಭೇಟಿ ಕೊಡುತ್ತಾರೆ.
*
ದತ್ತ ಪೀಠ ವಿವಾದದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ನಿರಾಶಾದಾಯಕ. ಸರ್ಕಾರ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು.
- ಸಿ.ಟಿ. ರವಿ,
ಚಿಕ್ಕಮಗಳೂರು ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.