ADVERTISEMENT

ದಲಿತರ ಮನೆಯಿಂದ ಹೆಣ್ಣು ತನ್ನಿ

‘ನೃಪತುಂಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಚಿದಾನಂದಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್‌ ಯಾದವ್‌ (ಎಡದಿಂದ ಎರಡನೆಯವರು) ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ (ಎಡದಿಂದ), ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿಎಂಟಿಸಿ ಉಪಾಧ್ಯಕ್ಷ ಗೋವಿಂದರಾಜು, ಪರಿಷತ್ತಿನ ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನ ಹಾಗೂ ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ವ.ಚ.ಚನ್ನೇಗೌಡ ಇದ್ದರು –ಪ್ರಜಾವಾಣಿ ಚಿತ್ರ
ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್‌ ಯಾದವ್‌ (ಎಡದಿಂದ ಎರಡನೆಯವರು) ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ (ಎಡದಿಂದ), ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿಎಂಟಿಸಿ ಉಪಾಧ್ಯಕ್ಷ ಗೋವಿಂದರಾಜು, ಪರಿಷತ್ತಿನ ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನ ಹಾಗೂ ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ವ.ಚ.ಚನ್ನೇಗೌಡ ಇದ್ದರು –ಪ್ರಜಾವಾಣಿ ಚಿತ್ರ   
ಬೆಂಗಳೂರು: ‘ದಲಿತರ ಮನೆಗೆ ಹೋಗಿ ಊಟ ಮಾಡುವುದರಿಂದ ಜಾತಿಭೇದ ನಾಶವಾಗುವುದಿಲ್ಲ’ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಹೇಳಿದರು.
 
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೊಡಮಾಡುವ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಗುರುವಾರ ಇಲ್ಲಿ ಸ್ವೀಕರಿಸಿ ಅವರು ಮಾತನಾಡಿದರು. 
 
‘ಜಾತಿಪದ್ಧತಿ ಆಚರಣೆಯಲ್ಲಿರುವುದಕ್ಕೆ ನನ್ನ ವಿಷಾದವಿದೆ. ದಲಿತರ ಮನೆಗೆ ಹೆಣ್ಣು ಕೊಡಬೇಕು. ಅವರ ಮನೆಯಿಂದ ಹೆಣ್ಣು ತರಬೇಕು. ಆಗ ಜಾತಿ ತಾರತಮ್ಯ ಕಡಿಮೆ ಆಗಲಿದೆ’ ಎಂದು ಅವರು ತಿಳಿಸಿದರು.
 
‘ಬೆಳಗಾವಿ ನಮ್ಮದು’:  ‘ಗೋದಾವರಿಯಿಂದ ಕಾವೇರಿ ನದಿಯವರೆಗೂ ಕನ್ನಡ ನಾಡಿತ್ತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ.  ಮಹಾರಾಷ್ಟ್ರದ ಉತ್ತರ ತುದಿಯ ಜಿಲ್ಲೆಯಾದ ನಾಸಿಕ್‌ನಲ್ಲಿ ಹಳಗನ್ನಡ ಮಾತನಾಡುವ ಅಲೆಮಾರಿ ಸಮುದಾಯಗಳು ಈಗಲೂ ಇವೆ.
 
ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಜನ್‌ ಆಯೋಗದ ವರದಿ ಒಪ್ಪಿಕೊಳ್ಳುತ್ತಿಲ್ಲ. ವರದಿಯನ್ವಯ ಬೆಳಗಾವಿ, ನಿಪ್ಪಾಣಿ, ಸೊಲ್ಲಾಪುರ ನಮ್ಮ ರಾಜ್ಯಕ್ಕೆ ಸೇರಬೇಕು’ ಎಂದು ಪ್ರತಿಪಾದಿಸಿದರು. 
 
ಅಭಿನಂದನಾ ನುಡಿಗಳನ್ನಾಡಿದ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಜೀವಿತಾವಧಿಯ ಹೆಚ್ಚು ಸಮಯವನ್ನು ಚಿದಾನಂದ ಮೂರ್ತಿ ಅವರು ಗ್ರಂಥಾಲಯ ಮತ್ತು ವಿಶ್ವವಿದ್ಯಾಲಯದ ತರಗತಿಗಳಲ್ಲಿ ಕಳೆದಿದ್ದಾರೆ. ಇವರು ಗಂಭೀರ ವಿಷಯಗಳನ್ನು ಲೋಪವಿಲ್ಲದಂತೆ ಅರ್ಥೈಸಬಲ್ಲರು. ಭಾರತದಲ್ಲಿನ ಶ್ರೇಷ್ಠ ಸಂಶೋಧಕರಲ್ಲಿ ಇವರು ಒಬ್ಬರು’ ಎಂದರು. 
 
‘ಅಧಿಕಾರ ಪಡೆಯಲು ಇಂದು ಪೈಪೋಟಿ ಇದೆ. ವಿಧಾನ ಪರಿಷತ್‌ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಾಗುವಂತೆ ಆಹ್ವಾನ ಬಂದಿದ್ದರೂ, ಅದನ್ನು ನಯವಾಗಿ ನಿರಾಕರಿಸಿ ಸಂತಗುಣ ಪ್ರದರ್ಶಿಸಿದ್ದಾರೆ.
 
ಸತ್ಯನಿಷ್ಠೆ, ಪ್ರಾಮಾಣಿಕತೆ, ಅನಿಸಿದ್ದನ್ನು ಹೇಳುವುದು ಮತ್ತು ವಿಚಾರದಲ್ಲಿ ರಾಜಿ ಮಾಡಿಕೊಳ್ಳದಿರುವುದು ಚಿದಾನಂದ ಮೂರ್ತಿ ಅವರ ಶ್ರೇಷ್ಠ ಗುಣಗಳು’ ಎಂದು ಗುಣಗಾನ ಮಾಡಿದರು. 
 
‘ಯಾವುದೇ ಕ್ಷೇತ್ರ ಬೆಳೆಯಲು ಸಂಶೋಧನಾ ವಿಭಾಗ ಅಗತ್ಯ. ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿಭಾಗ ಇಂದು ಸೊರಗಿದೆ. ಹಾಗಾಗಿ, ಉಪಯುಕ್ತವಾದ ಪಿಎಚ್‌.ಡಿ. ಪ್ರಬಂಧಗಳು ಹೊರಬರುತ್ತಿಲ್ಲ.
 
ಅವನ್ನು ಪ್ರಕಟಿಸಿ ಜನರಿಗೆ ತಲುಪಿಸುವ ಹಂಬಲವೂ ಸಂಶೋಧಕರಿಗೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ನೃಪತುಂಗ ಸಾಹಿತ್ಯ ಪ್ರಶಸ್ತಿಯು ₹ 7 ಲಕ್ಷ ಒಳಗೊಂಡಿದೆ.
****
‘ಸಮ್ಮೇಳನಾಧ್ಯಕ್ಷರ ಸ್ಥಾನ ನೀಡಿ’

‘ಸಂಶೋಧನೆ, ಬೋಧನೆ, ಸಂಘಟನೆಯ ಕೆಲಸ ಮಾಡುತ್ತಿರುವ ಚಿದಾನಂದಮೂರ್ತಿ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಈಗಾಗಲೇ ಸಲ್ಲಬೇಕಿತ್ತು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದಾಗ ಕೆಲ ಸಭಿಕರು ‘ಈ ಬಾರಿ ಅಧ್ಯಕ್ಷ ಸ್ಥಾನ ನೀಡಿ’ ಎಂದು ಧ್ವನಿಗೂಡಿಸಿದರು.

****
ಸಾರಿಗೆ ಸಂಸ್ಥೆ ಬೆಂಗಳೂರಿನಲ್ಲಿ ರಂಗಮಂದಿರ ನಿರ್ಮಿಸಬೇಕು. ಸಾರಿಗೆ ನೌಕರರ ಸಾಹಿತ್ಯ ಸಮ್ಮೇಳನ ಮಾಡಬೇಕು. ಪ್ರಶಸ್ತಿ ಮೊತ್ತವನ್ನು ₹ 10 ಲಕ್ಷಕ್ಕೆ ಹೆಚ್ಚಿಸಬೇಕು.
ಮನು ಬಳಿಗಾರ್‌, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT