ADVERTISEMENT

ದಸರಾ ಉದ್ಘಾಟನೆ ಗೌರವ ರೈತ ಪುಟ್ಟಯ್ಯಗೆ

14ರಿಂದ ರೈತ ದಸರಾ ಆರಂಭ *l ಎರಡು ದಿನ ಕವಿಗೋಷ್ಠಿ * 2 ಗಂಟೆ ಮಾತ್ರ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಮೈಸೂರು: ಎಚ್‌.ಡಿ. ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮದ ಮಲಾರ ಕಾಲೋನಿಯ ಪರಿಶಿಷ್ಟ ಜಾತಿಗೆ ಸೇರಿದ ರೈತ ಪುಟ್ಟಯ್ಯ ಅವರು ಈ ಬಾರಿ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.

ರೈತ ದಸರಾ ಇದೇ 14ರಿಂದ ಆರಂಭವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಮಾಹಿತಿ ನೀಡಿದರು. ಅ. 14ರಿಂದ 16ರವರೆಗೆ ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಆಯೋಜಿಸಲಾಗುತ್ತದೆ.

ರೈತರೊಂದಿಗೆ ಬರ ಪರಿಹಾರ ಸಮಾಲೋಚನೆ, ಸಂವಾದ, ಕಿರುನಾಟಕ ಪ್ರದರ್ಶನ, ವಸ್ತುಪ್ರದರ್ಶನ, ಗ್ರಾಮೀಣ ಕ್ರೀಡೆ ಹಾಗೂ ಗ್ರಾಮೀಣ ವಸ್ತುಪ್ರದರ್ಶನ ಕೂಡಾ ಇರುತ್ತದೆ ಎಂದು ಅವರು ವಿವರಣೆ ನೀಡಿದರು.

ಎರಡು  ಕವಿಗೋಷ್ಠಿ: ಈ ಬಾರಿ ಎರಡು ಕವಿಗೋಷ್ಠಿಗಳಿರುತ್ತವೆ. ಮೈಸೂರು ವಿಶ್ವವಿದ್ಯಾಲಯದ ಮಾನವಿಕ ಸಭಾಂಗಣದಲ್ಲಿ ಮೊದಲ ಕವಿಗೋಷ್ಠಿ ನಡೆಯಲಿದೆ. ಇದರಲ್ಲಿ ಮೈಸೂರು ಭಾಗದ ಕವಿಗಳಿಗೆ ಅವಕಾಶ ಇರುತ್ತದೆ. ಮಧ್ಯಾಹ್ನ ‘ಉಳುವ ಯೋಗಿಯ ಬದುಕು–ಬವಣೆ’ ಕುರಿತು ವಿಚಾರಗೋಷ್ಠಿ ಆಯೋಜಿಸಲಾಗಿದೆ.

ಮರುದಿನ ಜಗನ್ಮೋಹನ ಅರಮನೆಯಲ್ಲಿ ‘ಕೃಷಿಕ ಕಾವ್ಯಸಿರಿ’ ಶೀರ್ಷಿಕೆಯಡಿ ಪ್ರಧಾನ ಕವಿಗೋಷ್ಠಿ ಏರ್ಪಡಿಸಲಾಗಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗದ ಕವಿಗಳು ಭಾಗವಹಿಸುವರು.

ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದುಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಎಂ.ಆರ್. ರವಿ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: 13ರಂದು ಸಂಜೆ ಅರಮನೆ ಆವರಣದ ಎದುರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸುವರು.

13ರಿಂದ 20ರವರೆಗೆ ನಿತ್ಯ 2 ಗಂಟೆ ಮಾತ್ರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

18ರಂದು ಬೆಳಿಗ್ಗೆ 6.30ಕ್ಕೆ ಹಾಫ್‌ ಮ್ಯಾರಥಾನ್‌ ನಡೆಯಲಿದ್ದು, 19ರಂದು ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ನಾಡಕುಸ್ತಿಗಳು ಜರುಗಲಿವೆ ಎಂದು ಸಚಿವರು ಹೇಳಿದರು.

ಬೇಸಾಯವೇ ಅವಿಭಕ್ತ ಕುಟುಂಬದ ಮೊದಲ ಆಯ್ಕೆ
ತಾಲ್ಲೂಕಿನ ಮಲಾರ ಕಾಲೊನಿಯ ಪ್ರಗತಿಪರ ರೈತ ಪುಟ್ಟಯ್ಯ ಅವರು ದಸರಾ ಉದ್ಘಾಟಿಸಲು ಆಯ್ಕೆಯಾಗಿರುವುದು ತಾಲ್ಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.

ಪುಟ್ಟಯ್ಯ ಅವರದ್ದು 40 ಸದಸ್ಯರಿರುವ ಅವಿಭಕ್ತ ಕುಟುಂಬ. ಒಟ್ಟು 40 ಎಕರೆ ಕೃಷಿ ಭೂಮಿ ಇದ್ದು, ಎಲ್ಲರೂ ಒಟ್ಟಿಗೆ ಸೇರಿ ಬೇಸಾಯ ಮಾಡುವುದು ಈ ಕುಟುಂಬದ ವಿಶೇಷ. ಸಾವಯವ, ನೈಸರ್ಗಿಕ ಹಾಗೂ ಆಧುನಿಕ ಕೃಷಿ ಸಹ ಮಾಡುವುದರೊಂದಿಗೆ ಜಮೀನಿನಲ್ಲಿ ಅರಣ್ಯ ರೀತಿಯಲ್ಲಿ ಗಿಡಮರ ಬೆಳೆಸಿದ್ದಾರೆ. ಮನೆಗೆ ಬೇಕಿರುವ ಆಹಾರ ಧಾನ್ಯ , ತರಕಾರಿ, ಸೊಪ್ಪು ಸೇರಿದಂತೆ ಇತರೆ ಎಲ್ಲ ಬೆಳೆಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಾರೆ. ಹಸು, ಕುರಿ, ಕೋಳಿ, ಆಡು ಸಾಕುತ್ತಿದ್ದಾರೆ. ಜತೆಗೆ, ಹೈನುಗಾರಿಕೆ ನಡೆಸುತ್ತಿದ್ದಾರೆ.

‘ವ್ಯವಸಾಯ ಎಂಬುದು ಸ್ವಾಭಿಮಾನಿಗಳು ಆಯ್ಕೆ ಮಾಡಿಕೊಳ್ಳುವ ವೃತ್ತಿ. ರೈತ ಈ ದೇಶದ ಉಸಿರು. ಬೇಸಾಯ ಬಿಟ್ಟರೆ ರೈತರಿಗೆ ಬೇರೆ ದಾರಿ ಗೊತ್ತಿಲ್ಲ. ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ನನಗೆ ತೀವ್ರ ಸಂತಸ ತಂದಿದೆ. ಇದು ರೈತರಿಗೆ ಸಂದ ಗೌರವ. ಸರ್ಕಾರಕ್ಕೆ ಅಭಿನಂದನೆಗಳು’ ಎಂದು ಪುಟ್ಟಯ್ಯ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT