ADVERTISEMENT

ನಿಧಿ ಆಸೆಗೆ ಮಗು ಬಲಿಗೆ ಯತ್ನ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಬೆಳಗಾವಿ: ಇಲ್ಲಿನ ಭಡಕಲ ಗಲ್ಲಿಯ ಮನೆಯೊಂದರಲ್ಲಿ ನಿಧಿ ಆಸೆಗಾಗಿ ನರಬಲಿಗೆ ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದ್ದು, ಪ್ರಕರಣ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.

ಮನೆಯ ಒಳಗೆ ಗುಂಡಿಯೊಂದನ್ನು ತೋಡಲಾಗಿದ್ದು ಕಪ್ಪು ಮುಖವಾಡ, ಪೂಜಾ ಸಾಮಗ್ರಿಗಳು, ನೀರು ತುಂಬಿದ ಬಿಂದಿಗೆಯಲ್ಲಿ ನಿಂಬೆ ಹಣ್ಣುಗಳು, ಗುದ್ದಲಿ, ಪಿಕಾಸಿ ಹಾಗೂ ಕುಡುಗೋಲು ಪತ್ತೆಯಾಗಿವೆ.

ಈ ಗಲ್ಲಿಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಕುಟುಂಬವೊಂದು, ಮಹಾಲಯ ಅಮಾವಾಸ್ಯೆ ದಿನ ಮನೆಯ ಮಾಲೀಕರ ಹೆಣ್ಣು ಮಗುವನ್ನು ಬಲಿ ನೀಡಲು ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ಮಂಗಳವಾರ ತಡರಾತ್ರಿವರೆಗೂ ದೂರು ದಾಖಲಾಗಿರಲಿಲ್ಲ.
ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾದ ಜಾವೇದ್‌ ಮುಲ್ಲಾ, ಫಾರೂಕ್‌ ಮುಲ್ಲಾ ಹಾಗೂ ಸೋನಾ ಮುಲ್ಲಾ ಎನ್ನುವವ
ರು ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಮಾಸಾಬಿ ಎನ್ನುವವರನ್ನು ಸ್ಥಳೀಯರು ಹಿಡಿದು ಮಾರ್ಕೆಟ್‌ ಠಾಣೆಗೆ ಒಪ್ಪಿಸಿದ್ದಾರೆ.

ADVERTISEMENT

ವಿವರ: ಮಹಮ್ಮದ್‌ ಗೌಸ್ ಪೀರಜಾದೆ ಎಂಬುವವರ ಮನೆಯನ್ನು ಜಾವೇದ್‌ ಮುಲ್ಲಾ ಬಾಡಿಗೆಗೆ ಪಡೆದಿದ್ದರು. ಇತ್ತೀಚೆಗೆ, ಮನೆ ಖಾಲಿ ಮಾಡುವುದಾಗಿ ಹೇಳಿದ್ದ ಜಾವೇದ್‌, ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಸಾಗಿಸಿದ್ದರು. ಇನ್ನುಳಿದವುಗಳನ್ನು ತೆಗೆದುಕೊಂಡು ಹೋಗಲೆಂದು ನಾಲ್ಕೈದು ಮಂದಿ ಸೋಮವಾರ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.

‘ನಮ್ಮ ಮಗುವನ್ನು ವಾರದ ಹಿಂದೊಮ್ಮೆ ಅವರು ಮನೆಗೆ ಕರೆದೊಯ್ದಿದ್ದರು. ಸೋಮವಾರವೂ ಮಗು ಕಾಣಿಸಲಿಲ್ಲ. ಗಲ್ಲಿಯಲ್ಲೆಲ್ಲ ಹುಡುಕಾಡುತ್ತಿದ್ದಾಗ ಆ ಮನೆಯಲ್ಲಿದ್ದ ಬಾಲಕಿ ಮಗುವನ್ನು ತಂದು ಬಿಟ್ಟಳು. ಮಗುವನ್ನು ಮೂರು ತಾಸು ಅವರ ಮನೆಯಲ್ಲಿ ಇರಿಸಿಕೊಂಡಿದ್ದು ಏಕೆ ಎಂಬ ಅನುಮಾನ ಬಂತು. ಕಿಟಕಿಯಲ್ಲಿ ಇಣುಕಿ ನೋಡಿದಾಗ ಗುಂಡಿ ತೆಗೆಯುತ್ತಿದ್ದುದು ಕಾಣಿಸಿತು. ಬಾಗಿಲು ಬಡಿದಾಗ, ಹಿಂದಿನ ಬಾಗಿಲಿನಿಂದ ಕೆಲವರು ಪರಾರಿಯಾದರು. ಮಾಸಾಬಿ ಮಾತ್ರ ಕೈಗೆ ಸಿಕ್ಕರು. ಅಮಾವಾಸ್ಯೆಯಂದು ಮಗುವನ್ನು ಬಲಿ ಕೊಡಲು ಅವರು ಸಂಚು ರೂಪಿಸಿದ್ದರು’ ಎಂದು ಮನೆ ಮಾಲೀಕ ಪೀರಜಾದೆ ದೂರಿದರು.
ಬಲಿಗೆ ಸಿದ್ಧತೆ ನಡೆಸಿರುವ ಬಗ್ಗೆ ಖಚಿತವಾಗಿಲ್ಲ ಎಂದು ಮಾರ್ಕೆಟ್‌ ಠಾಣೆ ಇನ್‌ಸ್ಪೆಕ್ಟರ್‌ ಅರುಣ್‌ ನಾಗೇಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.