ADVERTISEMENT

ನೀರು ಖಾಲಿ ಮಾಡಲು ಬಿರುಸಿನ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2016, 5:16 IST
Last Updated 25 ಮಾರ್ಚ್ 2016, 5:16 IST
ದೊಣೆಹಳ್ಳಿ ಸಮೃದ್ಧ ಜಲಹೊಂಡ
ದೊಣೆಹಳ್ಳಿ ಸಮೃದ್ಧ ಜಲಹೊಂಡ   

ಜಗಳೂರು:  ಬರದ ತಾಲ್ಲೂಕಿನ ಜೀವಸೆಲೆ ಎನಿಸಿರುವ ದೊಣೆಹಳ್ಳಿ ಸಮೀಪದ ಕಲ್ಲುಗಣಿ ಹೊಂಡದ ಅಪಾರ ಪ್ರಮಾಣದ ನೀರನ್ನು ಜಿಲ್ಲಾಡಳಿತ  ತರಾತುರಿಯಲ್ಲಿ ಭಾರಿ ಯಂತ್ರಗಳನ್ನು ಬಳಸಿ ಹೊರಕ್ಕೆ ಪಂಪ್‌ ಮಾಡಲಾಗುತ್ತಿದೆ.

ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದುರಾಗಿರುವ ಸಂದರ್ಭದಲ್ಲಿ ಇಲ್ಲಿನ ನೀರನ್ನು  ವ್ಯರ್ಥವಾಗಿ ಹೊರ ಚೆಲ್ಲುತ್ತಿರುವ ಬಗ್ಗೆ ಸಾರ್ವಜನಿಕರು, ಜಲ
ತಜ್ಞರು ಮತ್ತು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಇದಾವುದನ್ನೂ ಲೆಕ್ಕಿಸದೇ ಹಠಕ್ಕೆ ಬಿದ್ದಂತೆ ಜಿಲ್ಲಾಡಳಿತ ನೀರನ್ನು ಖಾಲಿ ಮಾಡಲು ಮುಂದಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಾಲ್ಕು ದಿನಗಳ ಹಿಂದೆ ನೀರನ್ನು ಹೊರಕ್ಕೆ ಪಂಪ್‌ ಮಾಡುವ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದ ಕಾರಣ ಎರಡು ದಿನ ಸ್ಥಗಿತವಾಗಿದ್ದ ಹೊರ ಚೆಲ್ಲುವ ಕಾರ್ಯ ಗುರುವಾರ ದೊಡ್ಡ ಮಟ್ಟದಲ್ಲಿ ಮತ್ತೆ ಪ್ರಾರಂಭವಾಗಿದೆ.

ದೈತ್ಯ ಜನರೇಟರ್‌ ಬಳಸಿ  ಸುಮಾರು 10 ಇಂಚು ಹಾಗೂ 5 ಇಂಚಿನ ಎರಡು ಪೈಪ್‌ಗಳ ಮೂಲಕ ಹಗಲು ರಾತ್ರಿ ಎನ್ನದೆ ನೀರನ್ನು ಎತ್ತಿ ಹೊರಕ್ಕೆ ಚೆಲ್ಲುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಇಂದಿನಿಂದ ಮೂರು ದಿನಗಳ ಕಾಲ ವಿವಿಧ ಜಾತ್ರೆಗಳು ಮತ್ತು ಸರಣಿ  ರಜಾ ದಿನಗಳ ಕಾರಣ ಹಗಲೂ ರಾತ್ರಿ ಸಾರ್ವ ಜನಿಕರ ಗಮನಕ್ಕೆ ಬಾರದಂತೆ ಸದ್ದಿಲ್ಲದೆ ಹೊಂಡ ಸಂಪೂರ್ಣ ಖಾಲಿ ಮಾಡಿಬಿಡ ಬೇಕು ಎಂಬ ಧಾವಂತದಲ್ಲಿ ತಾಲ್ಲೂಕು ಮತ್ತು ಜಿಲ್ಲಾಆಡಳಿತ ಕಾರ್ಯಾಚರಣೆ ಕೈಗೊಂಡಿವೆ ಎನ್ನುವುದು ಸಾರ್ವಜನಿಕರ  ಶಂಕೆಯಾಗಿದೆ.

‘ನಮ್ಮ ಗ್ರಾಮದಲ್ಲಿ 6 ಸಾವಿರ ಕುರಿಗಳು, ಒಂದು ಸಾವಿರ ದನಗಳಿವೆ. ಎರಡು  ತಿಂಗಳಿಂದ ಈ ಹೊಂಡದ ಶುದ್ಧ ನೀರು ಕುಡಿದು ಜಾನುವಾರು ಆರೋಗ್ಯವಾಗಿವೆ. ಆದರೆ ಈಗ ಅಧಿಕಾರಿಗಳು ನೀರು ಖಾಲಿ ಮಾಡಿಸಲು ಹೊರಟಿದ್ದಾರೆ. ಹೊಂಡ ಖಾಲಿಯಾದರೆ ಅಷ್ಟೊಂದು ಕುರಿ ಮೇಕೆ, ದನಗಳಿಗೆ ಎಲ್ಲಿಂದ ನೀರು ತರಬೇಕು. ನೀರು, ಮೇವು ಕೊಡಬೇಕಾದವರೇ ಹೀಗೆ ನೀರನ್ನು ನೆಲಕ್ಕೆ ವ್ಯರ್ಥವಾಗಿ ಹರಿಸುವುದು ಯಾಕೆ? ಅವರ ಉದ್ದೇಶವಾದರೂ ಏನು’ ಎಂದು ಬೆಣ್ಣೆಹಳ್ಳಿ ಕುರಿಗಾರರಾದ ಕೆಂಚಪ್ಪ ಮತ್ತು ರೇವಣ್ಣ   ಅವರು ಪ್ರಶ್ನಿಸುತ್ತಾರೆ.

‘ಹೊಂಡದಲ್ಲಿ ಕೆಲ ದಿನಗಳ ಹಿಂದೆ ನಡೆದ ಅವಘಡವನ್ನೇ ನೆಪವಾಗಿಟ್ಟುಕೊಂಡು   ಹೊಂಡ ಖಾಲಿ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ತಹಶೀಲ್ದಾರ್‌ ಎಸ್‌.ರವಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ‘ಪ್ರಜಾವಾಣಿ’ ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಕಳೆದ ಮುಂಗಾರು ಹಾಗೂ ಹಿಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆ, ಚೆಕ್‌ಡ್ಯಾಂ, ಹಳ್ಳಗಳು ಹನಿ ನೀರಿಲ್ಲದಂತೆ ಬರಿದಾಗಿ ಭೀಕರ ಬರ ನಿರ್ಮಾಣವಾಗಿದೆ. ಕೆಂಡದಂತ ಬಿಸಿಲಿಗೆ ಜನ ಜಾನುವಾರು ಹೈರಾಣಾಗಿದ್ದು, ಜಿಲ್ಲಾಡಳಿತ ಈವರೆಗೂ ಪರಿ ಹಾರ ಕಾರ್ಯ ಕೈಗೊಂಡಿಲ್ಲ.

ಹೊಂಡದಲ್ಲಿ ಅವಘಡಗಳು ಸಂಭವಿಸದಂತೆ ಸುತ್ತಾ ತಂತಿಬೇಲಿ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಪ್ರಕೃತಿ ದತ್ತವಾಗಿ ದೊರೆತಿರುವ  ಅಮೂಲ್ಯ ನೀರಿನ ಸಂಗ್ರಹವನ್ನು ಖಾಲಿ ಮಾಡುವ ಮೂಲಕ ಮತ್ತೆ ಕಲ್ಲು ಗಣಿಗಾರಿಕೆಗೆ ಅವ ಕಾಶ ನೀಡುವ ಜಿಲ್ಲಾಡಳಿತದ ಹುನ್ನಾರ ಇದರ ಹಿಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.