ADVERTISEMENT

ನೇರ ನೇಮಕಾತಿಗೆ ಚಿಂತನೆ: ಕಾಗೋಡು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ   

ಮಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಕೆಳಹಂತದ ಹುದ್ದೆಗಳನ್ನು ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡುವ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಕಂದಾಯ ದಿನಾಚರಣೆ– 2017’ ಉದ್ಘಾಟಿಸಿ ಮಾತನಾಡಿದ ಅವರು, ‘ಹಲವು ವರ್ಷಗಳಿಂದ ಸರಿಯಾಗಿ ನೇಮಕಾತಿ ನಡೆಯದ ಕಾರಣದಿಂದ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಉಳಿದಿವೆ.

ಇದರಿಂದಾಗಿ ಇಲಾಖೆಯ ಕಾರ್ಯನಿರ್ವಹಣೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕೆಳಹಂತದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಯೋಚಿಸಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ’ ಎಂದರು.

*
ಐಎಸ್ ಸೇರಿದ ಕೇರಳೀಯರು ಜೀವಂತ?
ಕಾಸರಗೋಡ:
ಅಫ್ಘಾನಿಸ್ತಾನದಲ್ಲಿರುವ ನಂಗರ್‌ಹಾರ್‌ ಐಎಸ್‌ ನೆಲೆಗೆ ತೆರಳಿದ್ದಾರೆ ಎನ್ನಲಾದ ಕಾಸರಗೋಡಿನ 18 ಮಂದಿಯ ಸಹಿತ ಕೇರಳದ ಒಟ್ಟು 22 ಮಂದಿಯಲ್ಲಿ ಬಹುತೇಕ ಮಂದಿ ಅಮೆರಿಕದ ಬಾಂಬ್‌ ದಾಳಿಯಿಂದ ಸತ್ತಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದು ನಂಗರ್‌ಹಾರ್‌ನಿಂದ ಸಂದೇಶವೊಂದು ಬಂದಿದೆ.

ADVERTISEMENT

ಕಾಸರಗೋಡಿನ ಪಡನ್ನ ಮತ್ತು ತ್ರಿಕರಿಪುರದಿಂದ ಐಎಸ್ ಶಿಬಿರಕ್ಕೆ ಹೋದ 18 ಮಂದಿಯ ಪೈಕಿ ಒಬ್ಬನಾದ ಆಶ್ಫಾಕ್ ಮಜೀದ್ ಎಂಬಾತ ಪಡನ್ನದ ಸಾಮಾಜಿಕ ಕಾರ್ಯಕರ್ತ ಬಿ.ಸಿ. ಅಬ್ದುಲ್ ರಹಿಮಾನ್ ಎಂಬುವವರಿಗೆ ಟೆಲಿಗ್ರಾಂ ಆ್ಯಪ್‌ ಮೂಲಕ ಶುಕ್ರವಾರ ರಾತ್ರಿ ಈ  ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ.

*
13 ಹಸುಗಳು ಸಾವು
ಹನೂರು (ಚಾಮರಾಜನಗರ ಜಿಲ್ಲೆ): ಜೋಳದ (ಕೆಂಪು ಮಿಶ್ರಿತ ) ಹಸಿಮೇವು ತಿಂದು 13 ಹಸುಗಳು ಸತ್ತಿರುವ ಘಟನೆ ಇಲ್ಲಿಗೆ ಸಮೀಪದ ಕೆ.ವಿ.ಎನ್ ದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಗ್ರಾಮದ ರೈತ ಈರಯ್ಯ ಅವರು ಸಾಕಿಕೊಂಡಿದ್ದ 8 ಹಾಗೂ ನಾಗರಾಜು ಅವರು ಸಾಕಿಕೊಂಡಿದ್ದ 5 ಹಸುಗಳು ಮೃತಪಟ್ಟಿವೆ.

‘ಕಡುಬಿಸಿಲು ಇದ್ದಾಗ ಜಾನುವಾರುಗಳಿಗೆ ಹಸಿಮೇವನ್ನು ನೇರವಾಗಿ ತಿನ್ನಿಸುವುದು ಅಪಾಯಕಾರಿ. ಏಕೆಂದರೆ ಹಸಿಮೇವಿನಲ್ಲಿ ಸಯನೈಡ್ ಅಂಶ ಇರುತ್ತದೆ. ಇಲ್ಲಿ ಹಸುಗಳು ಇದೇ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂಬ ಶಂಕೆ ಇದೆ. ಆದರೆ, ಕಾರಣ ತಿಳಿಯಲು ಪರೀಕ್ಷೆಗೆ ಹಸುಗಳ ಮಾದರಿಯನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವೆಂಕಟರಾಮ್‌ ತಿಳಿಸಿದ್ದಾರೆ.

*
ಸಾಲ ಮನ್ನಾಕ್ಕೆ ಒತ್ತಾಯ
ಬಾಗಲಕೋಟೆ:
‘ಉತ್ತರ ಪ್ರದೇಶ ಸರ್ಕಾರದ ರೀತಿಯಲ್ಲೇ, ರಾಜ್ಯ ಸರ್ಕಾರವೂ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರ ಶಾಂತಕುಮಾರ ಆಗ್ರಹಿಸಿದರು.

‘ರಾಜ್ಯದಲ್ಲಿ ಸತತ ಬರಗಾಲ ಆವರಿಸಿದೆ.  ರೈತರ ಕೃಷಿ ಸಾಲ ಮನ್ನಾ ಮಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೈತರು ಸಂಘಟಿತರಾಗಿ ರಾಜ್ಯದಾದ್ಯಂತ ಘೇರಾವ್ ಚಳವಳಿ ಮಾಡಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.