ADVERTISEMENT

ನ. 21ರಂದು ಕುಮಟಾದಲ್ಲಿ ಕಾಂಗ್ರೆಸ್‌ ಸಮಾವೇಶ

ಕರಾವಳಿ ಮೀನುಗಾರ ಮತದಾರರ ಓಲೈಕೆಗೆ ಕೆಪಿಸಿಸಿ ತಂತ್ರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಪರಮೇಶ್ವರ
ಪರಮೇಶ್ವರ   

ಬೆಂಗಳೂರು: ಕರಾವಳಿ ಭಾಗದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ), ಮೊದಲ ಹಂತದಲ್ಲಿ ಮೀನುಗಾರರ ಓಲೈಕೆಗೆ ತಂತ್ರ ರೂಪಿಸುತ್ತಿದೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ನ ಮೀನುಗಾರರ ಘಟಕದ ಮೊದಲ ಕಾರ್ಯಕಾರಿಣಿಯಲ್ಲಿ ಕರಾವಳಿ ಭಾಗದ ಮೀನುಗಾರರ ಜೊತೆ ಸಂಪರ್ಕ ಸಾಧಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಸದ್ಯ ಬಿಜೆಪಿ ಮತ್ತು ಸಂಘ ಪರಿವಾರದ ಜೊತೆ ಮೀನುಗಾರರು ಗುರುತಿಸಿಕೊಂಡಿದ್ದು ಅವರನ್ನು ಪಕ್ಷದತ್ತ ‌ಸೆಳೆಯಲು ಏನೇನು ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆಯಿತು.

ADVERTISEMENT

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ‘ನ. 21ರಂದು ವಿಶ್ವ ಮೀನುಗಾರರ ದಿನ. ಅಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮೀನುಗಾರರ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗುವುದು’ ಎಂದರು.

‘ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಮೀನುಗಾರರ ಘಟಕ ಆರಂಭಿಸಲಾಗಿದೆ. ಕೆಪಿಸಿಸಿಯಲ್ಲೂ ಮೀನುಗಾರರ ಘಟಕ ರಚಿಸಲಾಗಿದೆ. ಈ ಘಟಕದ ಸಭೆ ನಡೆಸಿ ಸಮಾವೇಶ ನಡೆಸುವ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಈ ಸಮುದಾಯ ಅಭಿವೃದ್ಧಿಗೆ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ಮೀನುಗಾರರ ಘಟಕದ ರಾಷ್ಟ್ರೀಯ ಅಧ್ಯಕ್ಷ ಟಿ.ಎನ್. ಪ್ರತಾಪನ್ ಸೇರಿದಂತೆ ಕರಾವಳಿ ಭಾಗದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.


‘ಪಕ್ಷ ತ್ಯಜಿಸುವವರ ಬಗ್ಗೆ ಚಿಂತೆ ಇಲ್ಲ’
‘ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಹೀಗಾಗಿ ಚುನಾವಣಾ ಪ್ರಣಾಳಿಕೆ ಸಮಿತಿ ಹೊಸದಾಗಿ ರಚಿಸಲಾಗಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆಗೆ ಒತ್ತಡ ಇದ್ದುದರಿಂದ ಕೆಲವು ಜಿಲ್ಲೆಗಳ ಅಧ್ಯಕ್ಷರನ್ನು ಬದಲಿಸಲಾಗಿದೆ’ ಎಂದು ಪರಮೇಶ್ವರ ತಿಳಿಸಿದರು.

‘ಪಕ್ಷದ ಸಂಭಾವ್ಯ ಅಭ್ಯರ್ಥಿಗಳಿಗೆ ಅವರವರ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ. ಯೋಗೀಶ್ವರ ಸೇರಿದಂತೆ ಕೆಲವರು ಪಕ್ಷ ಬಿಡುವ ಸೂಚನೆ ಇರಲಿಲ್ಲ. ಆದರೆ, ಪಕ್ಷ ತ್ಯಜಿಸುವವರ ಬಗ್ಗೆ ಚಿಂತೆಯೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.