ADVERTISEMENT

ಪರಮೇಶ್ವರ್‌ ಅಧ್ಯಕ್ಷತೆ ಇನ್ನೆಷ್ಟು ದಿನ?

ಕೆಪಿಸಿಸಿ ಅಧ್ಯಕ್ಷರಿಗೆ ಸಿ.ಎಂ ಪರೋಕ್ಷ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಬೆಂಗಳೂರು: ‘ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ವಿಶ್ವಾಸ ಇರುವವರೆಗೆ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿ­ಯಲಿ­ದ್ದಾರೆ’ ಎಂದು ಹೇಳುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಪರಮೇಶ್ವರ್‌ಗೆ ಕಟಕಿಯಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ವಿ.ಎಸ್‌. ಕೌಜಲಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ನಾಲ್ಕು ವರ್ಷಗಳಿಂದ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇನ್ನು ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಅದನ್ನು ನಿರ್ಧರಿಸುವುದು ಹೈಕಮಾಂಡ್‌. ನಾವೆಲ್ಲ ಸೋನಿಯಾ ಮತ್ತು ರಾಹುಲ್‌ ಅವರ ವಿಶ್ವಾಸದಲ್ಲಿ ಇರುವವರೆಗೆ ಅಧಿಕಾರದಲ್ಲಿ ಇರುತ್ತೇವೆ. ಪರಮೇ­ಶ್ವರ್‌ ಅವರು ಈಗ ಇವರಿಬ್ಬರ ವಿಶ್ವಾಸ­ದಲ್ಲಿ ಇದ್ದಾರೆಂದು ಅಂದು­ಕೊಳ್ಳ­ಬ­ಹುದು’ ಎಂದು ನಗುತ್ತಲೇ ಹೇಳಿದರು.

ಈ ಸಂದರ್ಭದಲ್ಲಿ ಸ್ವತಃ ಪರಮೇ­ಶ್ವರ್‌, ಸಚಿವರಾದ ಆಂಜನೇಯ, ಎಸ್‌.ಆರ್‌. ಪಾಟೀಲ್‌, ಡಿ.ಕೆ. ಶಿವ­ಕುಮಾರ್‌, ದಿನೇಶ್‌ ಗುಂಡೂರಾವ್, ಉಮಾಶ್ರೀ, ಹಿರಿಯ ಮುಖಂಡರಾದ ಕೆ.ಎಚ್‌. ಮುನಿಯಪ್ಪ, ಎಂ.ವಿ. ರಾಜ­ಶೇಖರನ್‌ ಸೇರಿದಂತೆ ಹಲವು ಮುಖಂಡರು ಇದ್ದರು. ಸಿದ್ದರಾಮಯ್ಯ ಅವರ ಹೇಳಿಕೆಯು ಇಬ್ಬರ ನಡುವಣ ಶೀತಲ ಸಮರದ ಮುಂದು­ವರಿದ ಭಾಗ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸ­ಲಾಗುತ್ತಿದೆ.

ಬುಧವಾರ ಬೆಳಿಗ್ಗೆ ತಮ್ಮ ನಿವಾಸ­ದಲ್ಲಿ ಸುದ್ದಿಗಾರರೊಂದಿಗೆ ಮಾತ-­ನಾಡಿದ ಪರಮೇಶ್ವರ್‌, ‘ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿ­ಪ್ರಾಯ ಇಲ್ಲ. ಪಕ್ಷದ ಅಭಿವೃದ್ಧಿ ನನ್ನ ಮೊದಲ ಆದ್ಯತೆ. ಅಧಿಕಾರಕ್ಕಾಗಿ ಯಾವತ್ತೂ ಆಸೆ ಪಟ್ಟಿಲ್ಲ. ಪಕ್ಷ ಸಾಕಷ್ಟು ಅಧಿಕಾರ ಕೊಟ್ಟಿದೆ. ನನಗೆ ಹುದ್ದೆ ಕೊಡುವುದು ಬಿಡುವುದು ಹೈಕ­ಮಾಂಡ್‌ಗೆ ಬಿಟ್ಟ ವಿಚಾರ’ ಎಂದರು. ಸ್ವಾಗತಾರ್ಹ: ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಇಟ್ಟಿರುವವರ ಹೆಸರುಗಳ ಪಟ್ಟಿ­ಯನ್ನು ಸುಪ್ರೀಂಕೋರ್ಟ್‌ಗೆ ಕೊಟ್ಟಿರುವುದು ಸ್ವಾಗತಾರ್ಹ ಎಂದು ಸಿದ್ದರಾಮಯ್ಯ ಹೇಳಿದರು.

ಶ್ರದ್ಧಾಂಜಲಿ: ಬುಧವಾರ ನಿಧನ ಹೊಂದಿದ ಕೌಜಲಗಿ ಸ್ಮರಣಾರ್ಥ ಕೆಪಿಸಿಸಿ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಪರಮೇಶ್ವರ್‌ ಮತ್ತು ಸಿದ್ದರಾಮಯ್ಯ ಸೇರಿದಂತೆ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕೆಪಿಸಿಸಿ ಭವನ ಶಂಕುಸ್ಥಾಪನೆ ಕಾರ್ಯಕ್ರಮ ರದ್ದು
ಕಾಂಗ್ರೆಸ್‌ ಮುಖಂಡ ವಿ.ಎಸ್‌. ಕೌಜಲಗಿ ಅವರ ನಿಧನದ ಕಾರಣದಿಂದ ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿ ನಿರ್ಮಿ­ಸಲು ಉದ್ದೇಶಿಸಿರುವ ‘ಕಾಂಗ್ರೆಸ್‌ ಭವನ’ದ ಶಂಕು­ಸ್ಥಾಪನೆ ರದ್ದು ಗೊಳಿಸಿ, ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಪಿಸಿಸಿ ಅಧ್ಯಕ್ಷರಾಗಿ ನಾಲ್ಕು ವರ್ಷ ಪೂರೈಸಿದ್ದಕ್ಕಾಗಿ ಪರಮೇಶ್ವರ್‌ ಅವರು ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಮುಖಂಡರಿಗೆ ಆಯೋಜಿಸಿದ್ದ ಭೋಜನಕೂಟ­ವನ್ನೂ ಕೊನೆಗಳಿಗೆಯಲ್ಲಿ ರದ್ದುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT