ADVERTISEMENT

ಪರಿಷತ್‌ಗೆ ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2015, 19:30 IST
Last Updated 26 ಡಿಸೆಂಬರ್ 2015, 19:30 IST

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ   ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಭಾನುವಾರ   (ಡಿಸೆಂಬರ್‌ 27) ರ್ಬೆಳಿಗ್ಗೆ 8 ರಿಂದ  ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ.

ದ್ವಿಸದಸ್ಯ ಕ್ಷೇತ್ರಗಳು ಸೇರಿ ಒಟ್ಟು 20 ಕ್ಷೇತ್ರಗಳಿಂದ 25 ಸದಸ್ಯರನ್ನು ಆಯ್ಕೆ  ಮಾಡಬೇಕಾಗಿದೆ. 125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಾಗರಾಜ ಛಬ್ಬಿ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಕಾಶ ಶೆಟ್ಟಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ.

20 ದೂರು: ‘ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ರಾಜ್ಯದಾದ್ಯಂತ ಒಟ್ಟು 20 ದೂರುಗಳು ದಾಖಲಾಗಿವೆ. ಈ ಪೈಕಿ 4 ದೂರುಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ ಚಲಾವಣೆ ಹೇಗೆ?: ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ‘ಪ್ರಾಶಸ್ತ್ಯ’ದ ಮತಗಳನ್ನು ಚಲಾಯಿಸುವುದಕ್ಕೆ ಅವಕಾಶ ಇದೆ.

ಮೊದಲ ಪ್ರಾಶಸ್ತ್ಯದ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು  ನಮೂದಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಅವರ ಹೆಸರಿನ ಮುಂದೆ  ಅಂಕಿಗಳಲ್ಲಿ ನಮೂದಿಸಬಹುದು. ಒಬ್ಬ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಉಳಿದ ಅಭ್ಯರ್ಥಿಗಳಿಗೆ ಮತ ನೀಡದೆಯೂ ಇರಬಹುದು. ಯಾವುದೇ ಅಭ್ಯರ್ಥಿ (ನೋಟಾ ಸೇರಿದಂತೆ) ಹೆಸರಿನ ಮುಂದೆ  ‘1’ ಎಂದು ಸೂಚಿಸದಿದ್ದರೆ ಅಥವಾ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ನಮೂದಿಸಿದರೆ ಮತ ಅಸಿಂಧು ಆಗಲಿದೆ.

* ರೋಮನ್‌ ಅಂಕೆ ಅಥವಾ ಸಂವಿಧಾನದಲ್ಲಿ ಮಾನ್ಯ ಮಾಡಿರುವ ಭಾರತೀಯ ಭಾಷೆಗಳ ಅಂಕಿಗಳಲ್ಲಿ ಗುರುತು ಹಾಕಬಹುದು. ಆದರೆ, ಅಂಕಿಗಳನ್ನು ಅಕ್ಷರ ರೂಪದಲ್ಲಿ ನಮೂದಿಸಿದರೆ ಮತ ಅಸಿಂಧು ಆಗಲಿದೆ. 

* ಮತಪತ್ರದಲ್ಲಿ ಮತದಾರ ಹೆಸರು ಬರೆದರೆ, ಸಹಿ ಮಾಡಿದರೆ, ಹೆಬ್ಬೆಟ್ಟು ಹಾಕಿದರೆ ಅದು ಅಸಿಂಧು ಆಗಲಿದೆ

* ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಒಂದು ಅಂಕಿಯನ್ನು ಮಾತ್ರ ನಮೂದಿಸಬೇಕು. ಒಂದಕ್ಕಿಂತ ಹೆಚ್ಚು ಅಂಕಿಗಳನ್ನು ನಮೂದಿಸಿದರೂ ಮತ ಅಸಿಂಧು ಆಗಲಿದೆ.

* ಮತಪತ್ರದಲ್ಲಿ ಅಂಕಿಗಳನ್ನು ಗುರುತಿಸಲು ಚುನಾವಣಾಧಿಕಾರಿ ನೀಡಿದ ನೇರಳೆ ಬಣ್ಣದ ಸ್ಕೆಚ್‌ ಪೆನ್‌ ಮಾತ್ರ ಬಳಸಬೇಕು. ಅದರ ಬದಲು ಬೇರೆ ಪೆನ್ ಬಳಸಿದರೂ ಮತ ಅಸಿಂಧು ಆಗಲಿದೆ.

ನೋಟಾಗೆ ಅವಕಾಶ
ಪರಿಷತ್‌ ಚುನಾವಣೆಯಲ್ಲಿ ಇದೇ ಮೊದಲ ಬಾರಿ ‘ನೋಟಾ’ (ಮೇಲ್ಕಂಡ ಯಾರೂ ಅಲ್ಲ) ಚಲಾವಣೆಗೂ ಅವಕಾಶ ಕಲ್ಪಿಸಲಾಗಿದೆ. 

ನೋಟಾ ಆಯ್ಕೆಯ ಮುಂದೆ 1 ಅಂಕಿಯನ್ನು ನಮೂದಿಸುವ ಮೂಲಕ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು  ತಿರಸ್ಕರಿಸಬಹುದು.

ಅಂಕಿ ಅಂಶ
1.07 ಲಕ್ಷ ಮತದಾರರು
6,314 ಮತಗಟ್ಟೆಗಳು
30  ಸಾವಿರ ಚುನಾವಣಾ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT