ADVERTISEMENT

ಪಾಠ ಬೋಧನೆ ವಿಳಂಬ ಶಿಕ್ಷಕಿ ಅಮಾನತು!

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:46 IST
Last Updated 1 ಜುಲೈ 2016, 19:46 IST

ಬಾಗಲಕೋಟೆ: ನಿಗದಿತ ಅವಧಿಯಲ್ಲಿ ಪಾಠ ಮಾಡದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ದೃಢಪಟ್ಟ ಕಾರಣ ಬಾದಾಮಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿಜ್ಞಾನ ಶಿಕ್ಷಕಿ ರೇಷ್ಮಾ ಕಲಿಹಾಳ ಅವರನ್ನು ಅಮಾನತು ಮಾಡಲಾಗಿದೆ.

‘ನಿಗದಿತ ಸಮಯದಲ್ಲಿ ಪಠ್ಯಕ್ರಮ ಮುಕ್ತಾಯಗೊಳಿಸದೇ ಪರೀಕ್ಷೆ ಹತ್ತಿರ ಇದ್ದಾಗ ಶಿಕ್ಷಕಿ ಪಾಠ ಮಾಡಿದ್ದಾರೆ. ಇದರಿಂದ ನಮಗೆ ಪರೀಕ್ಷೆಗೆ ಸಿದ್ಧವಾಗಲು ಸಾಧ್ಯವಾಗಿಲ್ಲ’ ಎಂದು ಆರೋಪಿಸಿ  ಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರು ಕಳೆದ ಮಾರ್ಚ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಪರೀಕ್ಷೆ ಬರೆಯಲು ನಿರಾಕರಿಸಿದ್ದರು.

ಕೊನೆಗೆ ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳ ಮನವೊಲಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಯವರು,  ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಬೆಂಗಳೂರಿನ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಜೂನ್ 29ರಂದು ಅಮಾನತು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.