ADVERTISEMENT

ಪಿಎಚ್‌ಡಿ ಪ್ರವೇಶ ನಿಯಮಕ್ಕೇ ತಿದ್ದುಪಡಿ !

ಕನ್ನಡ – ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಅನುಕೂಲ ಕಲ್ಪಿಸುವ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ­ವಿದ್ಯಾಲಯ (ಕೆಎಸ್‌ಒಯು) ಪಿಎಚ್‌.ಡಿ  ಪ್ರವೇಶ ನಿಯಮಕ್ಕೆ  ಮಾಡಿದ್ದ ತಿದ್ದುಪಡಿ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವ-ರಿಗೆ ಅನುಕೂಲ ಕಲ್ಪಿಸುವುದಕ್ಕಾಗಿಯೇ ಈ ತಿದ್ದು­ಪಡಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಿಎಚ್‌.ಡಿ ‘ಪ್ರವೇಶ ಪರೀಕ್ಷೆ’ ಬರೆದಿದ್ದ ಉಮಾಶ್ರೀ 43 ಅಂಕ ಗಳಿಸಿದ್ದರು. 
ಕಳೆದ ಜುಲೈ 15ರಂದು ವಿಶ್ವವಿದ್ಯಾಲಯವು ಹೊರಡಿಸಿದ್ದ ಅಧಿಸೂಚನೆಯಲ್ಲಿ ಪಿಎಚ್‌.ಡಿ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಶೇ 50 ಅಂಕ ಪಡೆದಿರಬೇಕು ಎಂದು ತಿಳಿಸಲಾಗಿತ್ತು. ಅದಕ್ಕೆ ಅನುಗುಣ­ವಾಗಿಯೇ ಅಕ್ಟೋಬರ್‌ 6ರಂದು ಪ್ರವೇಶ ಪರೀಕ್ಷೆ ನಡೆಸಿ ನ. 4ರಂದು ಫಲಿತಾಂಶ ಪ್ರಕಟಿಸಲಾಗಿತ್ತು.

ನಂತರ ನಡೆದ ಶೈಕ್ಷಣಿಕ ಮಂಡಳಿ ಸಭೆ ‘ಕರಾಮುವಿ ಪಿಎಚ್‌.ಡಿ ಪರಿನಿಯಮ 2012ರ ಕಂಡಿಕೆ 109ಕ್ಕೆ’ ತಿದ್ದುಪಡಿ ಮಾಡಿತು. ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದವರು ಶೇ 40 ಮತ್ತು ಎಸ್‌ಸಿ, ಎಸ್‌ಟಿ ವರ್ಗದವರು ಶೇ 35 ಅಂಕ ಪಡೆದರೆ ಮೌಖಿಕ ಪರೀಕ್ಷೆಗೆ ಅರ್ಹರು  ಎಂದು ಪರಿಷ್ಕರಿಸಿ ನವೆಂಬರ್‌ 25ರಂದು ಅಧಿಸೂಚನೆ ಹೊರಡಿಸಲಾಯಿತು.
ಇದರ ಲಾಭ ಪಡೆದು ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಏ. 19ರಂದು ನಡೆದ ಪಿಎಚ್‌.ಡಿ ಮೌಖಿಕ ಪರೀಕ್ಷೆಗೆ ಸಚಿವೆ ಉಮಾಶ್ರೀ ಹಾಜರಾದರು.

ನ. 25ರ ಅಧಿಸೂಚನೆ ಹೊರಬೀಳದಿದ್ದರೆ ಮೌಖಿಕ ಪರೀಕ್ಷೆಗೆ ಹಾಜರಾಗಲು ಉಮಾಶ್ರೀ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.