ADVERTISEMENT

ಬರಿಗಾಲಲ್ಲಿ ಏರಿದರು ಚಾಮುಂಡಿಬೆಟ್ಟ

ಸಾವಿರ ಮೆಟ್ಟಿಲು ಏರಿ ಹರಕೆ ತೀರಿಸಿದ ಜನಾರ್ದನ ರೆಡ್ಡಿ, ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:04 IST
Last Updated 4 ಜುಲೈ 2015, 20:04 IST

ಮೈಸೂರು: ಮಾಜಿ ಸಚಿವ ಜಿ. ಜನಾ ರ್ದನ  ರೆಡ್ಡಿ ಹಾಗೂ ಬಿಜೆಪಿ ಸಂಸದ ಬಿ. ಶ್ರೀರಾಮುಲು ಅವರು ಇಲ್ಲಿನ ಚಾಮುಂ ಡಿಬೆಟ್ಟದ ಸಾವಿರ ಮೆಟ್ಟಿಲು ಏರಿ ಚಾಮುಂಡೇಶ್ವರಿಗೆ ಶನಿವಾರ ಹರಕೆ ತೀರಿಸಿದರು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿದ್ದ ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗ ಡೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದರು.

ಸ್ನೇಹಿತ ಶ್ರೀರಾಮುಲು ಜೊತೆ ಚಾಮುಂಡಿಬೆಟ್ಟಕ್ಕೆ ತೆರಳಿ ಕುಟುಂಬ ಸಮೇತ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು–ನಂಜನಗೂಡು ರಸ್ತೆ ಬಳಿ ಇರುವ ಚಾಮುಂಡಿಬೆಟ್ಟದ ಪಾದಕ್ಕೆ ಇಬ್ಬರೂ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಂದರು. ಬೆಟ್ಟದ ಮೆಟ್ಟಿಲು ಗಳಿಗೆ ನಮಸ್ಕರಿಸಿ ಹೆಜ್ಜೆ ಹಾಕಲು ಆರಂಭಿಸಿದರು. ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದರು.

ಪರಸ್ಪರ ಮಾತನಾಡುತ್ತಾ ಬರಿಗಾಲಿನಲ್ಲಿ ಸಾವಿರ ಮೆಟ್ಟಿಲು ಏರಿದರು.  ಅಲ್ಲಲ್ಲಿ ಎದುರಾ ಗುತ್ತಿದ್ದ ಭಕ್ತರು ಮೊಬೈಲ್‌ ಕ್ಯಾಮೆರಾದಲ್ಲಿ ಇವರ ಚಿತ್ರ ಸೆರೆಹಿಡಿದರು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಚಾಮುಂಡೇಶ್ವರಿ ದೇಗುಲ ತಲುಪಿದರು. ಇಲ್ಲಿ ಜನಾರ್ದನ ರೆಡ್ಡಿ ಪತ್ನಿ ಶ್ರೀಲಕ್ಷ್ಮಿ ಹಾಗೂ ಪುತ್ರಿ ಜೊತೆಯಾದರು.

ಕುಟುಂಬ ಸಮೇತ ಗಣಪತಿ ಹಾಗೂ ಆಂಜನೇಯಸ್ವಾಮಿ ದರ್ಶನ ಪಡೆದರು. ಬಳಿಕ ಚಾಮುಂಡೇಶ್ವರಿ ದೇಗುಲ ಪ್ರವೇಶಿಸಿದರು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ಅವರು ಶ್ರೀರಾಮುಲು ಹೆಸರಿನಲ್ಲಿ ಪೂಜೆ ಸಲ್ಲಿಸಿದರು. ದೇಗುಲದ ಮುಂಭಾ ಗದಲ್ಲಿಯೇ ಕಾರು ಏರಿ ಮರಳಿದರು.
*
ಜೈಲಿನಿಂದ ಬಿಡುಗಡೆಯಾದ ಬಳಿಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದೆ. ಹೀಗಾಗಿ, ಚಾಮುಂಡಿ ಬೆಟ್ಟಕ್ಕೆ ಬಂದಿದ್ದೇನೆ. ರಾಜಕೀಯ ನಡೆಯ ಕುರಿತು ತೀರ್ಮಾನ ಕೈಗೊಂಡಿಲ್ಲ.
-ಜಿ. ಜನಾರ್ದನ ರೆಡ್ಡಿ,
ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.