ADVERTISEMENT

ಬಾಲಕಿ ಕೊಲೆ: ಆರೋಪಿಗೆ ಗಲ್ಲು ಶಿಕ್ಷೆ, ರೂ10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 16 ಜುಲೈ 2015, 20:25 IST
Last Updated 16 ಜುಲೈ 2015, 20:25 IST

ಕಾಸರಗೋಡು: ಕೊಡಗು ಅಯ್ಯಂಗೇರಿಯ 14 ವರ್ಷದ ಬಾಲಕಿ ಸಫಿಯಾಳನ್ನು ಗೋವಾಕ್ಕೆ ಕರೆದೊಯ್ದು ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದ ಪ್ರಕರಣದ ಮೊದಲ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಮುಳಿಯಾರು ಪೊವ್ವಲ್‌ನ ಮಾಸ್ತಿಕುಂಡು ನಿವಾಸಿ ಹಾಗೂ ಗೋವಾದಲ್ಲಿ ಗುತ್ತಿಗೆದಾರ ಹಂಸ (50) ನನ್ನು ನೇಣಿಗೇರಿಸಲು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಂ.ಜೆ. ಶಕ್ತಿಧರನ್ ಗುರುವಾರ ಆದೇಶ ನೀಡಿದ್ದಾರೆ.

ಕೊಲೆ ಅಪರಾಧಕ್ಕೆ ಗಲ್ಲು ಶಿಕ್ಷೆ ಹಾಗೂ ರೂ10 ಲಕ್ಷ ದಂಡ ವಿಧಿಸಲಾಗಿದೆ. ಸಾಕ್ಷ್ಯ ನಾಶದ ಅಪರಾಧಕ್ಕೆ 7 ವರ್ಷ ಕಠಿಣ ಸಜೆ  ಹಾಗೂ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದ ಅಪರಾಧಕ್ಕಾಗಿ ಆರು ವರ್ಷ ಕಠಿಣ ಸಜೆ ವಿಧಿಸಲಾಗಿದೆ. ದಂಡದ ಹಣದಿಂದ 8 ಲಕ್ಷವನ್ನು ಬಾಲ ಕಿಯ ತಂದೆ ತಾಯಂದಿರಿಗೆ ನೀಡ ಬೇಕೆಂದು ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯ ಅಪರಾಧಿಯೆಂದು ಘೋಷಿಸಿರುವ ಆರೋಪ ಹೊತ್ತಿದ್ದ ಹಂಸನ ಪತ್ನಿ ಮೈಮೂನಾ (37)ಳಿಗೆ ಸಾಕ್ಷ್ಯಾಧಾರ ನಾಶಪಡಿಸಿದ ಅಪರಾಧಕ್ಕೆ 3 ವರ್ಷದ ಸಜೆ ಹಾಗೂ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದ ಅಪರಾಧಕ್ಕೆ ಮೂರು ವರ್ಷದ ಸಜೆಯನ್ನೂ ವಿಧಿಸಲಾಗಿದೆ. ಎರಡೂ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕಾಗುವುದು. ಇದರ ಹೊರತಾಗಿ ರೂ5 ಸಾವಿರ ದಂಡ ವಿಧಿಸಲಾಗಿದೆ.

ಪ್ರಕರಣದ ಇನ್ನೊಬ್ಬ ಆರೋಪಿ ಆರಿಕ್ಕಾಡಿ ಗುಡ್ಡೆಯ ಅಬ್ದುಲ್ಲನಿಗೆ ಮೂರು ವರ್ಷ ಕಠಿಣ ಸಜೆ ಹಾಗೂ ಐದು ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿ ಸದಿದ್ದಲ್ಲಿ ಮತ್ತೂ ಒಂದು ವರ್ಷ ಸಜೆ  ಶಿಕ್ಷೆ ಅನುಭವಿಸಬೇಕು ಎಂದು ಸೂಚಿಸಲಾಗಿದೆ. ಹಂಸನನ್ನು ಪೊಲೀಸ್  ಬಂದೋ ಬಸ್ತಿನಲ್ಲಿ ಜೈಲಿಗೆ ಒಯ್ಯಲಾಯಿತು. ಪ್ರಕರಣದ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.

ಕೆ.ಪಿ.ಹಂಸನ ಮನೆ ಕೆಲಸದಾಕೆ ಸಫಿಯಾ ನಿಗೂಢವಾಗಿ ಕೊಲೆಯಾ ಗಿದ್ದಳು. 2006ರ ಡಿಸೆಂಬರ್‌ನಲ್ಲಿ ಸಫಿಯಾ ಕಾಣೆಯಾಗಿದ್ದಳು. ಹಂಸ ಮತ್ತು ಆತನ ಕುಟುಂಬದ ಜತೆಯಲ್ಲಿ ಸಫಿಯಾ ಗೋವಾದಲ್ಲಿದ್ದಳು. ಅಲ್ಲಿಂದ ಆಕೆ ಕಾಸರಗೋಡಿನ ಮಾಸ್ತಿಕುಂಡಿಗೆ ಬಂದ ಬಳಿಕ ಕಾಣೆಯಾಗಿದ್ದಳು ಎಂದು ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಒಂದೂವರೆ ವರ್ಷದ ಬಳಿಕ 2008ರ ಜುಲೈ ಒಂದರಂದು ಪ್ರಕರಣದ ಮೊದಲ ಆರೋಪಿಯಾದ ಹಂಸನನ್ನು ಬಂಧಿಸಲಾಗಿತ್ತು. 2008 ಜುಲೈ 6 ರಂದು ಸಫಿಯಾಳ ತಲೆ ಬುರುಡೆ ಮತ್ತು ದವಡೆಯ ಎಲುಬುಗಳನ್ನು ಗೋವಾದ ಕಾಲುವೆಯಿಂದ ಪತ್ತೆಹಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.