ADVERTISEMENT

ಬಿಜೆಪಿ ಬಿಕ್ಕಟ್ಟು: ತೇಪೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:23 IST
Last Updated 29 ಏಪ್ರಿಲ್ 2017, 20:23 IST
ಬಿಜೆಪಿ ಬಿಕ್ಕಟ್ಟು: ತೇಪೆಗೆ ಯತ್ನ
ಬಿಜೆಪಿ ಬಿಕ್ಕಟ್ಟು: ತೇಪೆಗೆ ಯತ್ನ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ನಡುವಿನ ಕಿತ್ತಾಟದಿಂದ ಉದ್ಭವಿಸಿರುವ ಪರಿಸ್ಥಿತಿ  ಕುರಿತು ವರದಿ ನೀಡುವಂತೆ ರಾಜ್ಯದ ಉಸ್ತುವಾರಿ ಮುರಳೀಧರರಾವ್‌ ಅವರಿಗೆ ವರಿಷ್ಠರು ಸೂಚಿಸಿದ್ದಾರೆ.

ಹೈದರಾಬಾದ್‌ನಿಂದ ಶನಿವಾರ ಬೆಂಗಳೂರಿಗೆ ಧಾವಿಸಿದ ಮುರಳೀಧರರಾವ್‌,  ಪಕ್ಷದ ನಾಯಕರ ಜೊತೆ ಚರ್ಚಿಸಿದರು. ಅವರು ದೆಹಲಿಗೆ ಹಿಂತಿರುಗಿದ ಬಳಿಕ ವರದಿ ನೀಡಲಿದ್ದಾರೆ.

ದೆಹಲಿಯಿಂದ ಸಂಜೆ ನಗರಕ್ಕೆ ಹಿಂತಿರುಗಿದ ಯಡಿಯೂರಪ್ಪ, ಮುರಳೀಧರರಾವ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಅನಂತರ ಅವರು ಶಿವಮೊಗ್ಗಕ್ಕೆ ಪ್ರಯಾಣಿಸಿದರು. 

ADVERTISEMENT

ಈಶ್ವರಪ್ಪ ಹಾಗೂ ಅವರ ಬೆಂಬಲಿಗರ  ವಿರುದ್ಧ ಯಡಿಯೂರಪ್ಪ ದೂರುಗಳ ಸುರಿಮಳೆಗರೆದಿದ್ದಾರೆ. ವರಿಷ್ಠರ ಸೂಚನೆ ಧಿಕ್ಕರಿಸಿ,  ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಈಶ್ವರಪ್ಪ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಬಹಿರಂಗ ಸಮಾವೇಶ ಸಂಘಟಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಉಳಿದಿರುವಾಗ ಈ ರೀತಿಯ ಚಟುವಟಿಕೆ ನಡೆಸಿದರೆ  ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದೂ ಅವರು ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿದ್ದ ಈಶ್ವರಪ್ಪ ಅವರಿಗೂ  ಮುರಳೀಧರರಾವ್‌ ಅವರನ್ನು ಭೇಟಿ ಮಾಡುವಂತೆ ಸೂಚಿಸಲಾಗಿದೆ. ರಾತ್ರಿ ಈಶ್ವರಪ್ಪ ನಗರಕ್ಕೆ ಬಂದರಾದರೂ ರಾವ್‌ ಅವರನ್ನು ಭೇಟಿ ಮಾಡಲಿಲ್ಲ.  ಭಾನುವಾರ ಭೇಟಿ ಮಾಡುವ ಸಾಧ್ಯತೆಯಿದೆ.

ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟವಾದ ಬಳಿಕ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿದೆ. ಯಡಿಯೂರಪ್ಪನವರು ಸಂಘಟನೆಗಾಗಿ ದುಡಿದ ನಿಷ್ಠಾವಂತರನ್ನು ಕಡೆಗಣಿಸಿ, ಹೊರಗಿನಿಂದ ಬಂದವರಿಗೆ ಮಣೆ ಹಾಕಿದ್ದಾರೆಂದು ಈಶ್ವರಪ್ಪನವರು ದೂರು ಹೇಳುವ ಸಂಭವವಿದೆ.

‘ಜನವರಿ 28ರಂದು ನಮ್ಮನ್ನು ದೆಹಲಿಗೆ ಕರೆಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಫೆಬ್ರುವರಿ 10ರೊಳಗೆ ಬಿಕ್ಕಟ್ಟು ಪರಿಹಾರಕ್ಕೆ ಸೂಚಿಸಿದ್ದರು. ಈ ಉದ್ದೇಶಕ್ಕೆ ನಾಲ್ವರ ಸಮಿತಿಯನ್ನೂ ರಚಿಸಿದ್ದರು. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಸಮಿತಿ ಒಮ್ಮೆಯೂ ಸಭೆ ಸೇರಿಲ್ಲ. ಯಡಿಯೂರಪ್ಪನವರು ಕಿಂಚಿತ್ತೂ ತಮ್ಮ ಕಾರ್ಯಶೈಲಿ ಬದಲಿಸಿಲ್ಲ. ತಮ್ಮ ಸುತ್ತಮುತ್ತಲಿರುವ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟು ಬೇರೆಯವರನ್ನು ಲೆಕ್ಕಕ್ಕೆಇಟ್ಟುಕೊಂಡಿಲ್ಲ’ ಎಂದು ಈಶ್ವರಪ್ಪ ಹೇಳಲಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.

ಹಾನಿ ತಪ್ಪಿಸಿ: ಈ ಮಧ್ಯೆ, ರಾವ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಹಿರಿಯ ಮುಖಂಡರಾದ ಆರ್. ಅಶೋಕ್‌ ಹಾಗೂ ಸಿ.ಎಂ. ಉದಾಸಿ, ಕೆಲವು ದಿನಗಳಿಂದ ಪಕ್ಷ ಎದುರಿಸುತ್ತಿರುವ ಬಿಕ್ಕಟ್ಟು ಕುರಿತು ಮಾಹಿತಿ ನೀಡಿದ್ದಾರೆ.

‘ಕೂಡಲೇ ಇಬ್ಬರೂ ನಾಯಕರ ಹದ್ದು ಮೀರಿದ ನಡವಳಿಕೆಗೆ ಕಡಿವಾಣ ಹಾಕದಿದ್ದರೆ ಪಕ್ಷಕ್ಕೆ ಹಾನಿಯಾಗುತ್ತದೆ. ತಡಮಾಡದೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಕೆಲವು ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿಕೊಂಡು ಸುಮ್ಮನೆ ಕೂರುವುದು ಸರಿ
ಯಲ್ಲ’  ಎಂದು ಅಶೋಕ್‌ ನೇರವಾಗಿ ಹೇಳಿದ್ದಾರೆ.

ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ‘ಸಂಘಟನೆ ಉಳಿಸಿ’ ಸಮಾವೇಶದ ವಿರುದ್ಧವೂ ಅಶೋಕ್‌ ದೂರು ಸಲ್ಲಿಸಿದ್ದಾರೆ.  

‘ಇಬ್ಬರೂ ನಾಯಕರು ವೈಯಕ್ತಿಕ ಜಗಳವನ್ನು ಪಕ್ಷದೊಳಕ್ಕೆ ತಂದಿದ್ದಾರೆ. ಇದು ಬರೀ ಶಿವಮೊಗ್ಗ ಜಿಲ್ಲೆಯ ಕಿತ್ತಾಟ. ಅದನ್ನು ರಾಜ್ಯಕ್ಕೆ ವಿಸ್ತರಿಸಲು ಬಿಡಬಾರದು’ ಎಂದೂ ಅಶೋಕ್‌ ಹೇಳಿದ್ದಾರೆ. ಬಿಕ್ಕಟ್ಟು ಬಗೆಹರಿಯುವವರೆಗೂ ಇಬ್ಬರು ನಾಯಕರು ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡುವಂತೆ ರಾವ್‌ ಅವರಿಗೆ ಅಶೋಕ್‌ ಒತ್ತಾಯ ಮಾಡಿದ್ದಾರೆ.

ಭಾನುಪ್ರಕಾಶ್‌,  ಸುರಾನ ವಿರುದ್ಧ ಕ್ರಮ?: ಈಶ್ವರಪ್ಪನವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನಪರಿಷತ್‌ ಸದಸ್ಯರಾದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್ ಸುರಾನ ಅವರನ್ನು ಅಮಾನತು ಮಾಡುವ ಕುರಿತು ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆಂಬ ಸುದ್ದಿ ಬಿಜೆಪಿ ವಲಯದಲ್ಲಿ ಹರಡಿದೆ.

ಅಶೋಕ್‌ ಮನೆಯಲ್ಲಿ ಸಭೆ
ಇದಕ್ಕೂ ಮೊದಲು ಅಶೋಕ್‌ ಅವರ ಮನೆಯಲ್ಲಿ ಬೆಂಗಳೂರಿನ ಹತ್ತು  ಬಿಜೆಪಿ  ಶಾಸಕರು ಸಭೆ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು. ಕೆಲವರು ಈಶ್ವರಪ್ಪನವರ ಮೇಲೆ ವಾಗ್ದಾಳಿ ನಡೆಸಿದರು.

ತಮ್ಮ ಭಾವನೆಯನ್ನು ರಾವ್‌ ಅವರಿಗೆ ತಿಳಿಸುವಂತೆ ಅಶೋಕ್‌ ಅವರಿಗೆ ಮನವಿ ಮಾಡಿದರು. ಒಂದು ಹಂತದಲ್ಲಿ ಸೋಮಣ್ಣ ಹಾಗೂ ಅಶ್ವತ್ಥ ನಾರಾಯಣ ಅವರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಆರ್‌ಎಸ್‌ಎಸ್‌ನ ಮುಕುಂದ ಭಾಗವಹಿಸಿದ್ದ ಸಭೆಯಲ್ಲಿ, ಶಾಸಕರಾದ ಬಿ.ಎನ್‌. ವಿಜಯ ಕುಮಾರ್‌, ಸುರೇಶ್‌ ಕುಮಾರ್‌, ಎಸ್‌.ಆರ್‌. ವಿಶ್ವನಾಥ್‌, ಸತೀಶ್‌ ರೆಡ್ಡಿ, ಎಂ. ಕೃಷ್ಣಪ್ಪ, ಅರವಿಂದ ಲಿಂಬಾವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.