ADVERTISEMENT

ಬೃಹತ್‌ ಯೋಜನೆ ವಿಭಜಿಸಿ ಅನುಷ್ಠಾನ: ಆಕ್ರೋಶ

ಸುಪ್ರೀಂಕೋರ್ಟ್‌ ನಿರ್ದೇಶನ ಪಾಲಿಸದ ಪ್ರಾಧಿಕಾರಗಳು; ಅನುಮತಿ ಪಡೆಯಲು ಇಲಾಖೆಗಳ ಅನ್ಯ ತಂತ್ರ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:34 IST
Last Updated 18 ಮೇ 2017, 19:34 IST
ಬೃಹತ್‌ ಯೋಜನೆ ವಿಭಜಿಸಿ ಅನುಷ್ಠಾನ: ಆಕ್ರೋಶ
ಬೃಹತ್‌ ಯೋಜನೆ ವಿಭಜಿಸಿ ಅನುಷ್ಠಾನ: ಆಕ್ರೋಶ   

ಯತೀಶ್‌ ಕುಮಾರ್‌ ಜಿ.ಡಿ, ಮಂಜುನಾಥ ಹೆಬ್ಬಾರ್

ಬೆಂಗಳೂರು: ‘ಬೃಹತ್‌ ಯೋಜನೆಗಳಿಗೆ ಒಂದೇ ಕಂತಿನಲ್ಲಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿ ಆರು ವರ್ಷಗಳು ಕಳೆದಿವೆ. ಆದರೆ, ಯೋಜನೆ ಅನುಷ್ಠಾನ ಮಾಡುವ ಪ್ರಾಧಿಕಾರಗಳು ಇದನ್ನು ಪಾಲಿಸುತ್ತಿಲ್ಲ’ ಎಂದು ಪರಿಸರತಜ್ಞರು ಆರೋಪಿಸಿದ್ದಾರೆ.

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ನಿರ್ಮಾಣದಲ್ಲೂ ರೈಲ್ವೆ ಇಲಾಖೆ ಇದೇ ರೀತಿಯ ಧೋರಣೆ ತಳೆದಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ADVERTISEMENT

‘ಅರಣ್ಯದೊಳಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಸುಸ್ಥಿರ ಅಭಿವೃದ್ಧಿಯ ಜತೆಗೆ ಪರಿಸರದ ಹಿತವನ್ನು ಕಾಯಬೇಕಿದೆ. ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತಿಸಬೇಕಿದೆ. ಇವುಗಳ ಪರಿಶೀಲನೆಗೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್‌ 3 (3) ಅಡಿಯಲ್ಲಿ ಕೇಂದ್ರ ಸರ್ಕಾರ ನಿಯಂತ್ರಣಾ ಪ್ರಾಧಿಕಾರ ರಚಿಸಬೇಕು. ಸುಪ್ರೀಂ ಕೋರ್ಟ್‌ 2011ರಲ್ಲಿ, ಯಾವುದೇ ಯೋಜನೆಗಳಿಗೆ ಒಪ್ಪಿಗೆ ನೀಡುವ ಮೊದಲು ತಜ್ಞರಿಂದ ವರದಿ ತರಿಸಿಕೊಳ್ಳಬೇಕು ಎಂದು ತಿಳಿಸಿತ್ತು. ಇದನ್ನು ಪಾಲಿಸಬೇಕು’ ಎಂದರು.

‘ಅರಣ್ಯ ಪ್ರದೇಶ ಬಳಸಿ ಬೃಹತ್‌ ಯೋಜನೆಗೆ ಅನುಷ್ಠಾನ ಮಾಡಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಆರಂಭಿಕ ಹಂತದಲ್ಲಿ ಅನುಷ್ಠಾನ ಮಾಡುವ ಇಲಾಖೆಗಳು ಅರಣ್ಯ ಭಾಗವನ್ನು ಬಿಟ್ಟು ಪ್ರಸ್ತಾವ ಸಿದ್ಧಪಡಿಸುತ್ತವೆ. ಅದು ಪೂರ್ಣಗೊಂಡ ಬಳಿಕ ಅರಣ್ಯ ಪ್ರದೇಶದ ಕಾಮಗಾರಿಗೆ ಅನುಮತಿ ಕೋರುತ್ತವೆ. ಯೋಜನೆಗಾಗಿ ಈಗಾಗಲೇ ನೂರಾರು ಕೋಟಿ ಖರ್ಚು ಮಾಡಲಾಗಿದ್ದು, ಯೋಜನೆ ಕೈಬಿಡಲು ಸಾಧ್ಯವಿಲ್ಲ ಎಂದೂ ಹೇಳುತ್ತವೆ. ಆಗ ಸುಲಭದಲ್ಲಿ ಅನುಮತಿ ಸಿಗುತ್ತದೆ. ಇದು ಒಂದು ರೀತಿಯಲ್ಲಿ ಒತ್ತಡ ಹೇರುವ ತಂತ್ರ’ ಎಂದು ಪರಿಸರತಜ್ಞರೊಬ್ಬರು ವಿಶ್ಲೇಷಿಸುತ್ತಾರೆ.

‘ಕುದುರೆಮುಖ ಉದ್ಯಾನದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ, ಎತ್ತಿನಹೊಳೆ ಯೋಜನೆ, ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ–7ರ ವಿಸ್ತರಣೆ, ಮೈಸೂರು– ಚಾಮರಾಜನಗರ ರೈಲು ಮಾರ್ಗವನ್ನು ಸತ್ಯಮಂಗಲದವರೆಗೆ ವಿಸ್ತರಣೆ ಇದಕ್ಕೆ ಕೆಲವು ಉದಾಹರಣೆಗಳು’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಕೇರಳದ ನೀಲಂಬೂರು– ನಂಜನಗೂಡು ರೈಲು ಮಾರ್ಗ ಪ್ರಸ್ತಾವವೂ ಈ ಪಟ್ಟಿಗೆ ಸೇರುತ್ತದೆ. ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರಿನಿಂದ ಮೈಸೂರು ಜಿಲ್ಲೆ ನಂಜನಗೂಡು ಸಂಪರ್ಕಿಸುವ ರೈಲು ಮಾರ್ಗ ರಾಜ್ಯದಲ್ಲಿ ಬಂಡೀಪುರ ಅರಣ್ಯವೂ ಸೇರಿದಂತೆ 74 ಕಿ.ಮೀ ಹಾದು ಹೋಗಲಿದೆ. ಕೇರಳ– ಮಂಗಳೂರು ನಡುವೆ ರೈಲು ಮಾರ್ಗ ಇದೆ. ಈ ಮಾರ್ಗವನ್ನು ಬಳಸುವ ಬದಲು  ನಂಜನಗೂಡಿನ ಮೂಲಕವೇ ಸಾಗಬೇಕು ಎಂದು ಕೇರಳ ಸರ್ಕಾರ ಈ ವಿಷಯದಲ್ಲಿ ಹಠಕ್ಕೆ ಬಿದ್ದಿದೆ. ಇದು ಸಹ ಕಾಡು ಹಾಳುಮಾಡುವ ಯೋಜನೆ’ ಎಂದೂ ಅವರು ತಿಳಿಸುತ್ತಾರೆ.

ದ್ವಿಪಥ ಕಾಮಗಾರಿ ನಡೆಸಲು  ಪ್ರಸ್ತಾವ
ನೈರುತ್ಯ ರೈಲ್ವೆ ವಿಭಾಗದವರು ಈಗಾಗಲೇ ಹೊಸಪೇಟೆ– ತಿನೈಘಾಟ್‌ ರೈಲು ಮಾರ್ಗದ ದ್ವಿಪಥ ಕಾಮಗಾರಿಯನ್ನು ಆರಂಭಿಸಿದ್ದು, ಈ ಮಾರ್ಗದಲ್ಲಿ ಅನೇಕ ಕಾಡುಪ್ರಾಣಿಗಳು ಸತ್ತಿವೆ. ಅಲ್ಲದೆ ಈಗಾಗಲೇ ರೈಲ್ವೆ ಇಲಾಖೆಯು ತಿನೈಘಾಟ್‌– ಕ್ಯಾಸಲ್‌ರಾಕ್‌ ಮತ್ತು ಕ್ಯಾಸಲ್‌ರಾಕ್‌– ಕುಲೆಂ ಮಧ್ಯೆ ದ್ವಿಪಥ ಕಾಮಗಾರಿಯನ್ನು ನಡೆಸಲು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಇದೇ ಮಾರ್ಗದ ಮೂಲಕ ಧಾರವಾಡದಿಂದ ಬೆಳಗಾವಿಗೆ ರೈಲಿನಲ್ಲಿ ಪ್ರಯಾಣಿಸಬೇಕಿದೆ. ಪ್ರಯಾಣದ ಅವಧಿ ಮೂರು ಗಂಟೆ. ಬೆಳಗಾವಿ– ಕಿತ್ತೂರು– ಧಾರವಾಡ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ದಶಕಗಳಿಂದ ಇದೆ. ಈ ಯೋಜನೆ ಅನುಷ್ಠಾನಗೊಂಡರೆ ಪ್ರಯಾಣದ ಅವಧಿ ಬಹುಪಾಲು ಕಡಿಮೆಯಾಗಲಿದೆ. ಇದರಿಂದಾಗಿ ಹತ್ತಾರುಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ.
ಬೆಳಗಾವಿ, ಧಾರವಾಡ ನಗರಗಳ ಆರ್ಥಿಕ ಬೆಳವಣಿಗೆಯಾಗುತ್ತದೆ.

‘ವನ್ಯಜೀವಿ ಕಾರಿಡಾರ್ ಮೂಲಕ ಸಾಗುವ ಹಾಗೂ ಪ್ರಯಾಣಿಕರಿಗೆ ಹೊರೆಯಾಗಿರುವ ಹೊಸಪೇಟೆ– ತಿನೈಘಾಟ್‌ ಮಾರ್ಗದ ದ್ವಿಪಥ ಕಾಮಗಾರಿಯನ್ನು ಕೈಬಿಟ್ಟು ಬೆಳಗಾವಿ– ಕಿತ್ತೂರು– ಧಾರವಾಡ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕು. ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಾಡುಪ್ರಾಣಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಒತ್ತಾಯಿಸಿದ್ದಾರೆ.

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.