ADVERTISEMENT

ಬ್ರಾಹ್ಮಣರು, ಲಿಂಗಾಯತರಾಗಿ ಹುಟ್ಟುವುದು ತಪ್ಪೇ?

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST

ಬೆಳಗಾವಿ: ‘ಬ್ರಾಹ್ಮಣರು, ಲಿಂಗಾಯತರಾಗಿ ಹುಟ್ಟುವುದೇ ತಪ್ಪು ಎನ್ನುವ ಸ್ಥಿತಿ ರಾಜ್ಯದಲ್ಲಿದೆ. ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣರನ್ನು ಜಿಲೇಬಿ ಎಂದು ಕರೆಯಲಾಗುತ್ತಿದೆ’ ಎಂದು ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡನೆಯಾದ ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸಲು ಅವಕಾಶ ಕಲ್ಪಿಸುವ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.

‘ಐಎಎಸ್‌ ಮಾಡಿದ ದಲಿತರು ಅವರ ಕೇರಿಯಲ್ಲಿ ಮನೆಕಟ್ಟಿಕೊಂಡು ಇರುತ್ತಾರೆಯೇ? ಐಎಎಸ್‌ ಆದವರ ಕುಟುಂಬದವರಿಗೂ ಮೀಸಲಾತಿ ಕೊಡಲಾಗುತ್ತಿದೆ. ಬಡವರು ಎಲ್ಲ ಜಾತಿಯಲ್ಲಿಯೂ ಇದ್ದಾರೆ. ಜಾತಿ ಬಿಟ್ಟು ಹಿಂದುಳಿದಿರುವಿಕೆ, ದಕ್ಷತೆ ಆಧಾರದ ಮೇಲೆಯೇ ಪಟ್ಟಿ ಮಾಡಿ’ ಎಂದು ಆಗ್ರಹಿಸಿದರು.

ADVERTISEMENT

‘ಶೇ 18 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದನ್ನು ಶೇ 25ಕ್ಕೆ ಹೆಚ್ಚು ಮಾಡಿದರೆ ವಿರೋಧವಿಲ್ಲ. ನ್ಯಾಯ ಒದಗಿಸುವ ಪ್ರಾಮಾಣಿಕತೆಯಿಂದ ಮಸೂದೆ ಮಂಡಿಸಿಲ್ಲ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಲಾಗಿದೆ. ಉಳಿದ ಶೇ 82ರಷ್ಟು ಜನರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ಮೀಸಲಾತಿಗೆ ಬಹಳಷ್ಟು ಸಲ ಕೊಡಲಿ ಏಟುಗಳು ಬಿದ್ದಿವೆ. ಬುಡ ಭದ್ರವಾಗಿದೆ. ಅಂಬೇಡ್ಕರ್‌ ಸಮಾನತೆ ಆಶಯ ಎತ್ತಿ ಹಿಡಿಯುವ ಕೆಲಸ ಆಗಿದೆ. ಬಡ್ತಿಯಲ್ಲಿ ಮೀಸಲಾತಿ ಜಾರಿ ಮಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ’ ಎಂದು ಬಿಜೆಪಿಯ ಡಿ.ಎಸ್‌. ವೀರಯ್ಯ ಹೇಳಿದರು.

‘ಪವಿತ್ರಾ ಪ್ರಕರಣದಲ್ಲಿ ಸರ್ಕಾರದ ವತಿಯಿಂದ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡದ್ದರಿಂದ ಮಸೂದೆ ಮಂಡಿಸಬೇಕಾದ ಸ್ಥಿತಿ ಬಂದಿದೆ. ಸರ್ಕಾರ ತುಳಿತಕ್ಕೆ ಒಳಗಾದವರ ಪರ ನಿಂತಿರುವುದು ಸ್ವಾಗತಾರ್ಹ. ಇದೊಂದು ಕ್ರಾಂತಿಕಾರಕ ಹೆಜ್ಜೆ’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಮಸೂದೆ ತಂದಿರುವುದು ಸರಿಯಲ್ಲ. ಕೋರ್ಟ್‌ ಹಾಗೂ ಸಂವಿಧಾನಕ್ಕೆ ವಿರೋಧವಾಗಿದೆ. ಇದು ಕಣ್ಣೊರೆಸುವ ತಂತ್ರ’ ಎಂದು ಜೆಡಿಎಸ್‌ನ ಕಾಂತರಾಜು ಟೀಕಿಸಿದರು.

‘ನ್ಯಾಯಾಲಯ ಆದೇಶ ಪಾಲನೆ ಮಾಡದಿರುವುದು ಈ ಸದನ ಸಂವಿಧಾನಕ್ಕೆ ವಿರುದ್ಧ ಎನಿಸುತ್ತಿದೆ. ಸರ್ಕಾರ ದೊಡ್ಡದೋ, ಸುಪ್ರೀಂ ಕೋರ್ಟ್‌ ದೊಡ್ಡದೋ. ನಾವೇ ಪಾಲನೆ ಮಾಡದಿದ್ದರೆ ಹೊರಗಡೆ ಏನು ಸಂದೇಶ ಹೋಗುತ್ತದೆ’ ಎಂದು ಪ್ರಶ್ನಿಸಿದರು.

‘ನಿಜವಾದ ಕಾಳಜಿ ಇದ್ದರೆ, ರಾಜ್ಯದಲ್ಲಿ ₹ 3 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿ ಅವಕಾಶ ನೀಡಿ. ಜಾತಿ ಆಧಾರದ ಮೇಲೆ ನೌಕರರ ಸಂಘಗಳು ಆಗುತ್ತಿವೆ. ಮತಕ್ಕಾಗಿ ಜಾರಿ ಮಾಡಬೇಡಿ. ಸದನ ಸಮಿತಿ ರಚಿಸಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ’ ಎಂದು ಸಲಹೆ ಮಾಡಿದರು.

‘ಮೀಸಲಾತಿ ಭಿಕ್ಷೆ ಅಲ್ಲ. ಅದು ಆ ವರ್ಗದ ಜನರ ಹಕ್ಕು. ಮಸೂದೆ ಸಾಮಾಜಿಕ ನ್ಯಾಯದ ಪರವಾಗಿದೆ. ರಾಜ್ಯ ಸರ್ಕಾರವು ಎಲ್ಲರಿಗೂ ನ್ಯಾಯ ಒದಗಿಸಲು ಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ’ ಎಂದು ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಹೇಳಿದರು.

‘ಬ್ಯಾಕ್‌ಲಾಗ್‌ ತುಂಬಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಅದು ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸುವವರಿಗೆ ಅವಕಾಶ ಒದಗಿಸಲಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಜಾತಿ ಹೇಳಿಕೊಳ್ಳಲಿಕ್ಕೆ ಯಾರೂ ಹಿಂಜರಿಯಬಾರದು. ಇಂಥದ್ದೇ ಜಾತಿಗೆ ಎಂದು ಅರ್ಜಿ ಹಾಕಲು ಅವಕಾಶವಿದ್ದರೆ ಹಾಕುತ್ತಿದ್ದೆ. ಶೇ 50ಕ್ಕೂ ಹೆಚ್ಚು ಮೀಸಲಾತಿ ಮೀರಬಾರದು ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನ ಹೇಳಿಲ್ಲ. ರಾಜ್ಯದಲ್ಲಿ ಇದನ್ನು ಶೇ 70ಕ್ಕೆ ಹೆಚ್ಚಿಸಬೇಕಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.