ADVERTISEMENT

ಭದ್ರಕೋಟೆ ಭೇದಿಸಿ ‘ಚಲೋ’

ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 19:32 IST
Last Updated 7 ಸೆಪ್ಟೆಂಬರ್ 2017, 19:32 IST
ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಗುಂಪುಗೂಡಿದ್ದ ದೃಶ್ಯ.
ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಗುಂಪುಗೂಡಿದ್ದ ದೃಶ್ಯ.   

ಮಂಗಳೂರು: ನಿಷೇಧಾಜ್ಞೆ ಮತ್ತು ಪೊಲೀಸ್‌ ಭದ್ರಕೋಟೆಯನ್ನು ಭೇದಿಸಿ ಬಿಜೆಪಿ ಕಾರ್ಯಕರ್ತರು ಹಿಂದೂ ಕಾರ್ಯಕರ್ತರ ಹತ್ಯೆಯ ವಿರುದ್ಧ ಗುರುವಾರ ಮಂಗಳೂರು ಚಲೋ ರ‍್ಯಾಲಿ ನಡೆಸಿದರು. ಮೂರು ಗಂಟೆಗಳ ಕಾಲ ನಗರದ ಜ್ಯೋತಿ ವೃತ್ತದಲ್ಲಿ ಕಾದು ನಿಂತಿದ್ದ ಪ್ರತಿಭಟನಾಕಾರರು, ಬಂಧನವನ್ನು ಲೆಕ್ಕಿಸದೆ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆಯಲ್ಲಿ ಸಾಗಿ ಮುತ್ತಿಗೆ ಹಾಕಲು ಯತ್ನಿಸಿದರು.

ಗುರುವಾರ ಮುಂಜಾನೆಯಿಂದಲೇ ಜ್ಯೋತಿ ವೃತ್ತವನ್ನು ಸಂಪೂರ್ಣವಾಗಿ ಸುಪರ್ದಿಗೆ ಪಡೆದಿದ್ದ ಪೊಲೀಸರು, ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್‌ ರ‍್ಯಾಲಿ ಮತ್ತು ಪಾದಯಾತ್ರೆ ನಡೆಸದಂತೆ ತಡೆಯಲು ಸಿದ್ಧವಾಗಿದ್ದರು. ಜ್ಯೋತಿ ವೃತ್ತದಿಂದ ಹಂಪನಕಟ್ಟೆಗೆ ಹೋಗುವ ಮತ್ತು ಅಲ್ಲಿಂದ ವಾಪಸು ಬರುವ ಬಾವುಟ ಗುಡ್ಡೆ ರಸ್ತೆ ಸಂಪೂರ್ಣವಾಗಿ ಪೊಲೀಸರ ಹಿಡಿತದಲ್ಲಿತ್ತು. ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು.

ಇದನ್ನು ಅರಿತ ಬಿಜೆಪಿ ಮುಖಂಡರು ಜ್ಯೋತಿ ವೃತ್ತದಲ್ಲೇ ಬಹಿರಂಗ ಸಭೆ ನಡೆಸಿ, ಆ ಬಳಿಕ ಬೈಕ್‌ ರ‍್ಯಾಲಿ ಮತ್ತು ಪಾದಯಾತ್ರೆ ನಡೆಸಲು ಪ್ರತಿತಂತ್ರ ರೂಪಿಸಿದ್ದರು. ಬೆಳಿಗ್ಗೆ 7 ಗಂಟೆಯಿಂದ ಕಾರ್ಯಪ್ರವೃತ್ತರಾದ ಬಿಜೆಪಿ ಮುಖಂಡರು, ಬೃಹತ್‌ ಟ್ರಕ್‌ ಒಂದನ್ನು ಸ್ಥಳಕ್ಕೆ ತರಿಸಿ ಅದರ ಮೇಲೆ ವೇದಿಕೆ ಸಿದ್ಧಪಡಿಸಿದ್ದರು. 9.30ರ ವೇಳೆಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಬಂದುದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಯಿತು.

ADVERTISEMENT

ನಾಲ್ಕು ಗಂಟೆ ನಿಂತರು: ಪ್ರತಿಭಟನೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರು ಉರಿವ ಬಿಸಿಲನ್ನು ಲೆಕ್ಕಿಸದೇ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯ ಮೇಲೆ ನಿಂತರು. 10.15ರ ಸುಮಾರಿಗೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಕೆಲವು ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಬಂದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ಧ ಘೋಷಣೆ ಕೂಗಲಾರಂಭಿಸಿದ ಪ್ರತಿಭಟನಾಕಾರರು, ಪಿಎಫ್‌ಐ, ಕೆಎಫ್‌ಡಿ ಮತ್ತು ಎಸ್‌ಡಿಪಿಐ ನಿಷೇಧಿಸುವಂತೆ ಆಗ್ರಹಿಸಿದರು.

11.15ರ ಸುಮಾರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಸಂಸದ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ್‌ ಸಿಂಹ, ಶಾಸಕರಾದ ಆರ್‌.ಅಶೋಕ ಸೇರಿದಂತೆ ಹಲವು ಮುಖಂಡರು ವೇದಿಕೆ ಏರಿದರು.

ಒಂದು ಗಂಟೆ ವೇದಿಕೆಯಲ್ಲಿ ಮಾತನಾಡಿದ ಈ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಮುಂದಿನ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂಬುದನ್ನು ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಂತಿ ಕದಡಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳ ತನಿಖೆಯನ್ನು ತಕ್ಷಣವೇ ಸಿಬಿಐಗೆ ಒಪ್ಪಿಸಬೇಕು. ಕೆಎಫ್‌ಡಿ, ಪಿಎಫ್‌ಐ ಹಾಗೂ ಎಸ್‌ಡಿಪಿಐ ನಿಷೇಧಿಸಬೇಕು. ಸಚಿವರಾದ ಬಿ.ರಮಾನಾಥ ರೈ ಮತ್ತು ಕೆ.ಜೆ.ಜಾರ್ಜ್‌ ಅವರನ್ನು ತಕ್ಷಣವೇ ಸಂಪುಟದಿಂದ ಕಿತ್ತು ಹಾಕಬೇಕು’ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಪೊಲೀಸರ ಕೋಟೆ ಛಿದ್ರ:
ಯಡಿಯೂರಪ್ಪ ಅವರ ಭಾಷಣ ಮುಗಿಯುತ್ತಿದ್ದಂತೆ ಬೈಕ್‌ ರ‍್ಯಾಲಿ ಮತ್ತು ಪಾದಯಾತ್ರೆಗೆ ಕರೆ ನೀಡಲಾಯಿತು. ತಕ್ಷಣವೇ ಬ್ಯಾರಿಕೇಡ್‌ನತ್ತ ನುಗ್ಗಿದ ಬಿಜೆಪಿ ಕಾರ್ಯಕರ್ತರು ಮುಂದಕ್ಕೆ ನುಗ್ಗಲು ಯತ್ನಿಸಿದರು. ಈ ನಡುವಿನಲ್ಲೇ ಬಿಜೆಪಿಯ ಕೆಲವು ಮುಖಂಡರು ಬೈಕ್‌ ಏರಿ ಜಿಲ್ಲಾಧಿಕಾರಿ ಕಚೇರಿಯತ್ತ ಹೋಗಲು ಯತ್ನಿಸಿದರು. ಬೈಕ್‌ ಕಿತ್ತುಕೊಂಡ ಪೊಲೀಸರು, ಅವರನ್ನೆಲ್ಲ ವಶಕ್ಕೆ ಪಡೆದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್‌, ಈಶ್ವರಪ್ಪ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಅವರೆಲ್ಲರನ್ನೂ ಬಸ್‌ನಲ್ಲಿ ಕರೆದೊಯ್ದರು.

ಕಾರ್ಯಕರ್ತರಲ್ಲೂ ನೂರಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು. ಉಳಿದವರು ಏಕಾಏಕಿ ಬ್ಯಾರಿಕೇಡ್‌ಗಳನ್ನು ತಳ್ಳಿಕೊಡು ಹಂಪನಕಟ್ಟೆ ಮಾರ್ಗವಾಗಿ ಮುಂದಕ್ಕೆ ಸಾಗಿದರು. ಪೊಲೀಸರು ಭಾರಿ ಪ್ರಯತ್ನ ನಡೆಸಿದರೂ ಬಿಜೆಪಿ ಕಾರ್ಯಕರ್ತರು ಮುಂದಕ್ಕೆ ಹೋಗುವುದನ್ನು ತಡೆಯಲಾಗಲಿಲ್ಲ. ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಬಳಿ ಹೋಗುತ್ತಿದ್ದ ಕಾರ್ಯಕರ್ತರನ್ನು ಸ್ಟೇಟ್‌ ಬ್ಯಾಂಕ್‌ ವೃತ್ತದಲ್ಲಿ ಪೊಲೀಸರು ತಡೆದರು. ಅಲ್ಲಿ ಮುಕ್ಕಾಲು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ವಶಕ್ಕೆ ಪಡೆದು ಕರೆದೊಯ್ದರು.
*
ಕೆ.ಸಿ.ವೇಣುಗೋಪಾಲ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಬಂದ ಬಳಿಕ ರಾಜ್ಯ ಸರ್ಕಾರವೇ ಕೋಮು ದಳ್ಳುರಿ ಸೃಷ್ಟಿಸಲು ಯತ್ನಿಸುತ್ತಿದೆ.
ಬಿ.ಎಸ್‌.ಯಡಿಯೂರಪ್ಪ,
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
*
850 ಮಂದಿ ವಶಕ್ಕೆ
ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನಾ ಸಭೆ ಮತ್ತು ಪಾದಯಾತ್ರೆ ನಡೆಸಿರುವ ಆರೋಪದ ಮೇಲೆ ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದು, ಬಿಜೆಪಿಯ 850 ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಸಂಜೆಯ ವೇಳೆಗೆ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಭದ್ರತೆಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪನಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ ಹತ್ತು ತುಕಡಿ, ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಐದು ತುಕಡಿ, ಹೊರ ಜಿಲ್ಲೆಗಳಿಂದ ಬಂದಿದ್ದ ಪೊಲೀಸರು ಹಾಗೂ ಕಮಿಷನರೇಟ್‌ ವ್ಯಾಪ್ತಿಯ ಎಲ್ಲ ಪೊಲೀಸರು ಸೇರಿದಂತೆ 3 ಸಾವಿರ ಮಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು. ಭದ್ರತೆಯ ಉಸ್ತುವಾರಿಗಾಗಿ ನಗರದ ಹಿಂದಿನ ಪೊಲೀಸ್‌ ಕಮಿಷನರ್‌ ಎಂ.ಚಂದ್ರಶೇಖರ್‌ ಅವರು ಗೃಹ ಇಲಾಖೆ ಸೂಚನೆ ಮೇರೆಗೆ ಮಂಗಳೂರಿಗೆ ಬಂದಿದ್ದು, ಇಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.